ಚಿಕ್ಕೋಡಿ; ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಲಕ್ಷ್ಮಣ್ ಸವದಿ ಮಾರ್ಮಿಕ ಹೇಳಿಕೆ
Karnataka Politics; ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಲೋಕಸಭೆ ಚುನಾವಣೆ ಸಮೀಪಿಸಿದಾಗ ಹಲವರು ಪಕ್ಷಕ್ಕೆ ಬರ್ತಾರೆ. ಕಾಲ ಕೂಡಿ ಬಂದ ಸಂದರ್ಭದಲ್ಲಿ ನಾವು ಅದನ್ನು ಪ್ರಕಟ ಮಾಡ್ತೇವೆ. ರಮೇಶ್ ಕತ್ತಿ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಚಿಕ್ಕೋಡಿ, ಸೆಪ್ಟೆಂಬರ್ 29: ಕಾಂಗ್ರೆಸ್ ಆಪರೇಷನ್ ಹಸ್ತ (Operation Hasta) ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಸೆಳೆಯಲು ಕಾಂಗ್ರೆಸ್ (Congress) ತೆರೆಯ ಮರೆಯಲ್ಲಿ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಮಧ್ಯೆ, ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ, ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ (Laxman Savadi) ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ. ನಂದಗಾಂವ್ನಲ್ಲಿ ಮಾತನಾಡಿದ ಅವರು, ಬಹಳಷ್ಟು ಮುಖಂಡರು ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬರಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಲೋಕಸಭೆ ಚುನಾವಣೆ ಸಮೀಪಿಸಿದಾಗ ಹಲವರು ಪಕ್ಷಕ್ಕೆ ಬರ್ತಾರೆ. ಕಾಲ ಕೂಡಿ ಬಂದ ಸಂದರ್ಭದಲ್ಲಿ ನಾವು ಅದನ್ನು ಪ್ರಕಟ ಮಾಡ್ತೇವೆ. ರಮೇಶ್ ಕತ್ತಿ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕಾಲ ಕೂಡಿ ಬಂದಾಗ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸವದಿ ಹೇಳಿದ್ದಾರೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬಂದ್ ಮಾಡುವುದರಿಂದ ಈಗ ಹರಿಯುತ್ತಿರುವ ನೀರು ನಿಲ್ಲುವುದಿಲ್ಲ. ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡುವುದನ್ನು ನಾನು ಸ್ವಾಗತಿಸುವೆ. ಅದನ್ನೇ ನೆಪ ಮಾಡಿ ಕರ್ನಾಟಕ ಬಂದ್ ಮಾಡೋದು ಒಳ್ಳೆಯದಲ್ಲ. ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಬಂದ್ ವಿಚಾರ ರದ್ದುಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ರೇಣುಕಾಚಾರ್ಯ ಅಚ್ಚರಿಯ ಹೇಳಿಕೆ; ರಾಜ್ಯಾಧ್ಯಕ್ಷ ರಾಜೀನಾಮೆ ನೀಡದ್ದಕ್ಕೂ ಕಿಡಿ
ಈ ಮಧ್ಯೆ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸುತ್ತಿವೆ. ಬೆಂಗಳೂರು, ಮಂಡ್ಯ, ಮೈಸೂರು ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಿದೆ. ಬಸ್, ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ರೈತರು ಹಾಗೂ ಹೋರಾಟಗಾರರು ಪ್ರತಿಭಟನೆಗಳನ್ನು ನಡೆಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ