Hijab Row: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್, ಸಿದ್ದರಾಮಯ್ಯ ಸ್ಪಷ್ಟನೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 22, 2023 | 8:19 PM

Hijab Row In Karnataka: ಹಿಜಾಬ್ ನಿಷೇಧಿಸಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪೂರಕವೆಂಬಂತೆ ಹಿಜಾಬ್ ನಿಷೇಧ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

Hijab Row: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್, ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯ
Follow us on

ಮೈಸೂರು, (ಡಿಸೆಂಬರ್ 22): ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಹಿಜಾಬ್ ​(Hijab) ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿದ್ದ ಬಿಜೆಪಿ(BJP) ಸರ್ಕಾರದ ಆದೇಶವನ್ನು ಇದೀಗ ಕಾಂಗ್ರೆಸ್ (Congress) ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah) ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ. ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Karnataka Hijab Row: ಜೈ ಶ್ರೀರಾಮ್ ಎಂದ ಯುವಕರೆದುರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಬುರ್ಖಾಧಾರಿ ವಿದ್ಯಾರ್ಥಿನಿ

ಸಾರ್ವಜನಿಕರಿಂದ ಬಂದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನೋ ಹಿಜಾಬ್, ಎಲ್ಲರು ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ. ಡ್ರೆಸ್, ಊಟ‌ ಮಾಡುವುದು ನಿಮಗೆ ಸೇರಿದ್ದು. ನಾನೇಕೆ ನಿಮಗೆ ಅಡ್ಡಿ ಪಡಿಸಲಿ. ನೀನು ಯಾವ್ ಡ್ರೆಸ್ ಹಾಕಿಕೊಳ್ಳುತ್ತೀಯಾ ಹಾಕಿಕೋ. ನೀನು ಯಾವ ಊಟ ಮಾಡುತ್ತೀಯಾ ಮಾಡು. ನೀನು ಊಟ ಮಾಡುವುದು ನಿನ್ನ ಹಕ್ಕು. ನಾನು ಊಟ ಮಾಡುವುದು ನನ್ನ ಹಕ್ಕು. ನಾನು ದೋತಿ ಮತ್ತು ಜುಬ್ಬ ಹಾಕಿಕೊಳ್ಳುತ್ತೇನೆ. ನೀನು ಪ್ಯಾಂಟ್ ಶರ್ಟ್ ಹಾಕಿಕೊಂಡರೆ ಹಾಕಿಕೋ, ಇದರಲ್ಲಿ ತಪ್ಪೇನಿದೆ. ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಇದರಿಂದ ವಿಚಲಿತರಾಗುವ ಪ್ರಶ್ನೆ ಇಲ್ಲ. ರಾಜೀ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಸುಳ್ಳು, ಮೋಸ ಮಾಡುವವರ ಜೊತೆ ಇರಬೇಡಿ ಎಂದರು.

ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರವು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧ ಮಾಡಿ ಹೊರಡಿಸಿದ್ದ ಆದೇಶವನ್ನು ಸದ್ಯ ಕಾಂಗ್ರೆಸ್‌ ಸರ್ಕಾರ ತೆರವು ಮಾಡುತ್ತಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಿಜಾಬ್‌ ಧರಿಸಿ ತೆರಳಲು ಅವಕಾಶ ನೀಡಲು ಮುಂದಾಗಿದೆ.

ಇದೀಗ ಮತ್ತೆ ಇದಕ್ಕೆ ಬಿಜೆಪಿ ಹೋರಾಟ ಮಾಡುವ ಸಾಧ್ಯತೆಗಳಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲಲಿದೆ ಎನ್ನುವುದು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Fri, 22 December 23