ಜಮೀರ್ ಅಹ್ಮದ್ ಜೊತೆಗೂಡಿ ಸಿದ್ದರಾಮಯ್ಯ ಹಾದಿ ಬಿಟ್ಟಿದ್ದಾರೆ: ಯತ್ನಾಳ್ ಕಿಡಿ
ಬರ ಪರಿಹಾರದ ಚರ್ಚೆಗಾಗಿ ದಿಲ್ಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ ವಿಚಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿ, ಜಮೀರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರ, (ಡಿಸೆಂಬರ್ 22): ಬರ ಪರಿಹಾರದ ಚರ್ಚೆಗಾಗಿ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ಅವರು ಐಷಾರಾಮಿ ವಿಮಾನದಲ್ಲಿ (Luxurious flight) ಮರಳಿ ಬೆಂಗಳೂರಿಗೆ ಬಂದಿದ್ದಾರೆ. ಆದ್ರೆ, ವಿಶೇಷತೆ ವಿಮಾನದಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರು ಸಮಾಜವಾದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಆದ್ರೆ, ಈಗ ಜಮೀರ್ ಅಹ್ಮದ್ ಜೊತೆ ಸೇರಿ ಹಾದಿ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಪ್ರಯಾಣ ಮಾಡಿದ ವಿಮಾನ ಫೈವ್ ಸ್ಟಾರ್ ಮಾದರಿಯಲ್ಲಿದೆ. ಸಿದ್ದರಾಮಯ್ಯನವರು ಸಮಾಜವಾದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಜಮೀರ್ ಅಹ್ಮದ್ ಜೊತೆಗೂಡಿ ಹಾದಿ ಬಿಟ್ಟಿದ್ದಾರೆ. ಜಮೀರ್ ಅಹ್ಮದ್ ಜೊತೆಗೆ ಯಾರು ಕೊಡುತ್ತಾರೆ ಅವರು ಹಾದಿ ಬಿಡುತ್ತಾರೆ ಎಂದು ಕಿಡಿಕಾರಿದರು.
ಹಿಂದೆ ಕುಮಾರಸ್ವಾಮಿ ಜಮೀರ್ ಜೊತೆ ಕೂಡಿ ಹಾದಿ ಬಿಟ್ಟಿದ್ದರು. ಈಗ ಕುಮಾರಸ್ವಾಮಿ ಹಾದಿಯೊಳಗೆ ಬಂದಿದ್ದಾರೆ. ಈಗ ಜಮೀರ್ ಜೊತೆಗೂಡಿ ಸಿದ್ದರಾಮಯ್ಯ ಹಾದಿ ಬಿಟ್ಟು ಮೆಕ್ಕಾ ಮದೀನಾಕ್ಕೆ ಹೊರಟಿದ್ದಾರೆ. ಸಿದ್ಧರಾಮಯ್ಯರನ್ನೂ ಸಹ ಜಮೀರ್ ಅಹ್ಮದ್ ಮುಗಿಸುತ್ತಾರೆಂದು ಎಂದು ಹೇಳಿದರು.
ಮೊನ್ನೇ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯನವರು ಬರುವಾಗ ಐಷಾರಾಮಿ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ವಿಡಿಯೊವೊಂದನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕರು ಈ ವೀಡಿಯೋ ಶೇರ್ ಮಾಡಿಕೊಂಡಿರುವ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಮೋದಿ ಯಾವ ಫ್ಲೈಟ್‌ನಲ್ಲಿ ಓಡಾಡುತ್ತಾರೆ..? ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತದ್ದು? ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ.. ಅವರದು ಐಷಾರಾಮಿ ಫ್ಲೈಟ್ ಅಲ್ವಾ? ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಬೇರೆ ವಿಷಯವಿಲ್ಲದೆ ಇಂಥ ವಿಚಾರಗಳನ್ನು ದೊಡ್ಡದಾಗಿ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.