ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ: ಸಿದ್ದರಾಮಯ್ಯ

| Updated By: Rakesh Nayak Manchi

Updated on: Nov 21, 2023 | 8:18 PM

ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲವಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ವರದಿ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಹೇಳಿದರು. ವರದಿ ಬಿಡುಗಡೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ: ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Image Credit source: PTI
Follow us on

ಬೆಂಗಳೂರು, ನ.21: ಜಾತಿಗಣತಿ ವರದಿ ಜಾರಿ (Caste Census Report) ವಿಚಾರದಲ್ಲಿ ನನ್ನ ನಿರ್ಧಾರ ಅಚಲವಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ಅವರು ವರದಿ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಹೇಳಿದರು. ವರದಿ ಬಿಡುಗಡೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡುವುದು. ಜಾತಿಗಣತಿ ನಡೆಸಿದಾಗಲೇ ಭಾರತ ಮಾತೆಗೆ ಜಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜಾತಿ ಜನಗಣತಿ ವರದಿ ಬಿಡುಗಡೆಗೆ ಡಿಕೆ ಶಿವಕುಮಾರ್ ವಿರೋಧ

ಈ ಹೇಳಿಕೆಯ ಪೋಸ್ಟರ್ ಅನ್ನು ಟ್ವೀಟ್ ಮೂಲಕ ಹಂಚಿಕೊಂಡ ಸಿದ್ದರಾಮಯ್ಯ, ಅವರು, “ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ” ಎಂದಿದ್ದಾರೆ.

ಅಲ್ಲದೆ, “ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ” ಎಂದು ಸಿದ್ದರಾಮಯ್ಯ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವರದಿ ಬಿಡುಗಡೆಗೆ ಸಿದ್ದರಾಮಯ್ಯ ಅವರು ತುದಿಗಾಲಿನಲ್ಲಿ ನಿಂತಿದ್ದಾರೆ. ಸಚಿವರಾದ ಜಿ.ಪರಮೇಶ್ವರ, ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಸಚಿವರು ವರದಿ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಸ್ವಪಕ್ಷದ ಹಿರಿಯ ನಾಯಕರೂ ಆಗಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ತೀವ್ರ ಆಕ್ಷೇದ ನಂತರ ಲಿಂಗಾಯತ ಸಮುದಾಯದ ಅನೇಕ ನಾಯಕರಿಂದ ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ.

ಬಳಿಕ ಒಕ್ಕಲಿಗ ಸಮುದಾಯವೂ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದು, ಹಿಂದುಳಿದ ಆಯೋಗಕ್ಕೆ ಒಕ್ಕಲಿಗ ಸಂಘ ಪತ್ರ ಬರೆದಿದೆ. ಈ ಪತ್ರದಲ್ಲಿ ಡಿಕೆ ಶಿವಕುಮಾರ್, ಹೆಚ್​ಡಿ ದೇವೇಗೌಡ, ಅಶ್ವತ್ಥನಾರಾಯಣ ಸೇರಿದಂತೆ ಒಕ್ಕಲಿಗ ಸಮುದಾಯದ ಘಟಾನುಘಟಿ ನಾಯಕರು ಸಹಿ ಹಾಕಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Tue, 21 November 23