ಮುಂದಿನ ವಾರ ಕರಾವಳಿ ಕರ್ನಾಟಕದಲ್ಲಿ ವರ್ಷಧಾರೆ, ಬೆಂಗಳೂರಿನಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

| Updated By: ಗಣಪತಿ ಶರ್ಮ

Updated on: Jul 01, 2023 | 6:17 PM

ಜುಲೈ 1 ರಿಂದ ಜುಲೈ 5 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 40-45 ಕಿಮೀ ಯಿಂದ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮುಂದಿನ ವಾರ ಕರಾವಳಿ ಕರ್ನಾಟಕದಲ್ಲಿ ವರ್ಷಧಾರೆ, ಬೆಂಗಳೂರಿನಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರಾವಳಿ ಕರ್ನಾಟಕ ಭಾಗದಲ್ಲಿ (Coastal Karnataka) ಭಾನುವಾರ ಮತ್ತು ಸೋಮವಾರ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಶನಿವಾರ ನೀಡಿದ ಮುನ್ಸೂಚನೆಯಲ್ಲಿ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಜುಲೈ 4 ಮತ್ತು 6 ರ ನಡುವೆ ಅತಿ ಹೆಚ್ಚು (115.6 ಮಿಮೀ ನಿಂದ 204.4) ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಜುಲೈ 1 ರಿಂದ ಜುಲೈ 5 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 40-45 ಕಿಮೀ ಯಿಂದ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ 8.30 ರಿಂದ ಶನಿವಾರ ಬೆಳಿಗ್ಗೆ 8.30 ರ ನಡುವೆ ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 71.6 ಮಿ.ಮೀ, ಮಂಗಳೂರಿನಲ್ಲಿ 46.1 ಮಿ.ಮೀ ಮಳೆಯಾಗಿದೆ ಎಂದು ಇಲಾಖೆಯ ಅಂಕಿಅಂಶಗಳು ತೋರಿಸಿವೆ.

ಜುಲೈ 2 ರಿಂದ ಜುಲೈ 6 ರ ನಡುವೆ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Mangalore Rains: ಮಂಗಳೂರಿನ ಕೋಟೆಕಾರಿನಲ್ಲಿ ಒಂದೇ ದಿನ 245 ಮಿಮೀ ಮಳೆ, ಕರಾವಳಿ ಕರ್ನಾಟಕದಲ್ಲಿ ವರ್ಷಧಾರೆ ಸಾಧ್ಯತೆ

ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಜುಲೈ 6 ರಂದು ಅತಿ ಹೆಚ್ಚು (204.5ಮಿಮೀ ಗಿಂತ ಹೆಚ್ಚು) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನಲ್ಲಿ ಜುಲೈ 2 ಮತ್ತು ಜುಲೈ 6 ರ ನಡುವೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಜುಲೈ 2 ಮತ್ತು ಜುಲೈ 6 ರ ನಡುವೆ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜುಲೈ 4 ಮತ್ತು ಜುಲೈ 6 ರ ನಡುವೆ, ಅನೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ