ಕರ್ನಾಟಕದಲ್ಲಿ ರೋಬೋಟ್‌ಗಳ ಮೂಲಕ ವಿಧ್ವಂಸಕ ಕೃತ್ಯಕ್ಕೆ ಐಸಿಸ್ ಸಂಚು: ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ರಾಜ್ಯದಲ್ಲಿ ರೋಬೋಟ್‌ಗಳ ಮೂಲಕ ವಿಧ್ವಂಸಕ ಕೃತ್ಯಕ್ಕೆ ಐಸಿಸ್ ಸಂಚು ರೂಪಿಸಿರುವುದು ಬಹಿರಂಗವಾಗಿದೆ.
ಮಂಗಳೂರು: ಕರ್ನಾಟಕದಲ್ಲಿ ರೋಬೋಟ್‌ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಉಗ್ರ ಸಂಘಟನೆ ಐಸಿಸ್ (ISIS) ಸಂಚು ರೂಪಿಸಿದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ (Shimoga Trial Blast Case) ಸಂಬಂಧ ಎನ್‌ಐಎ (NIA) ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರ ಮಾಜ್ ಮುನೀರ್ ಅಹ್ಮದ್ (23) ಮತ್ತು ಮೊಹಮ್ಮದ್ ಶಾರಿಕ್ (25), ಸೈಯದ್ ಯಾಸೀನ್ (22), ರಿಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ (22), ಜಬೀವುಲ್ಲಾ (32), ನದೀಮ್ ಫೈಝಲ್ (27) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಒಂಬತ್ತು ಶಂಕಿತರ ಉಗ್ರರ ಪೈಕಿ ಐವರು ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ ಸಂಬಂಧ ತನಿಖೆರ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಸುಳ್ಳು ಗುರುತಿನಲ್ಲಿ ವಾಸಿಸುತ್ತಿದ್ದ ಪಿಎಫ್ಐ ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ
ವಿಚಾರಣೆ ವೇಳೆ, ವಿದೇಶದಲ್ಲಿರುವ ಐಸಿಸ್ ಉಗ್ರರ ಜೊತೆ ನೇರ ಸಂಪರ್ಕದಲ್ಲಿದ್ದ ವಿಚಾರ ತಿಳಿದುಬಂದಿದೆ. ಅಲ್ಲದೆ, ಭವಿಷ್ಯದ ಭಯೋತ್ಪಾದಕ ಚಟುವಟಿಕೆಗೆ ಸಿದ್ಧರಾಗುವಂತೆ ಆರೋಪಿಗಳಿಗೆ ಸೂಚಿಸಿದ್ದ ಐಸಿಸ್ ಹ್ಯಾಂಡ್ಲರ್, ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಿದ್ದ ಎನ್ನುವ ಸ್ಫೋಟಕ ಮಾಹಿತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಶಿವಮೊಗ್ಗ ತುಂಗಾತೀರದಲ್ಲಿ ಸಂಭವಿಸಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಐಸಿಸ್ ಒಳಸಂಚು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ದಕ್ಷಿಣ ಕನ್ನಡ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಆರು ಕಡೆಗಳಿಗೆ ದಾಳಿ ನಡೆಸಿ ಇಬ್ಬರು ಐಸಿಸ್ ಸಕ್ರಿಯ ಸದಸ್ಯರಾಗಿದ್ದ ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್ ಮತ್ತು ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ನನ್ನು ಬಂಧಿಸಿದ್ದರು. ಈ ಹಿಂದೆ ಬಂಧನವಾಗಿರುವ ಆರೋಪಿ ಮಾಜ್ ವಿಚಾರಣೆ ವೇಳೆ ಈ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು.
ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಮತ್ತು ಯಾಸೀನ್ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು. ಆ ಮೂಲಕ ಮಂಗಳೂರು, ಮಲೆನಾಡು ಮತ್ತು ರಾಜ್ಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಶಿವಮೊಗ್ಗ ಮಾಜ್ ಮತ್ತು ಯಾಸೀನ್ ಬಂಧನ ಬಳಿಕ ನಾಪತ್ತೆಯಾಗಿದ್ದ ಶಾರೀಕ್, ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದ.
ಅದರಂತೆ ಕುಕ್ಕರ್ ಬಾಂಬ್ ತಯಾರಿಸಿ ಮಂಗಳೂರಿನಲ್ಲಿ ಆಟೋದಲ್ಲಿ ಕೊಂಡೊಯ್ಯುವ ವೇಳೆ ಸ್ಫೋಟಗೊಂಡಿತ್ತು. ಪ್ರಕರಣದ ತನಿಖೆ ವೇಳೆ, ತುಂಗಾ ತೀರದಲ್ಲಿ ಪತ್ತೆಯಾದ ಟ್ರಯಲ್ ಸ್ಫೋಟಕ್ಕೆ ಬಳಸಲಾಗಿದ್ದ ಅದೇ ರೀತಿಯ ವಸ್ತುಗಳು ಕುಕ್ಕರ್ ಬ್ಲಾಸ್ಟ್ನಲ್ಲೂ ಪತ್ತೆಯಾಗಿತ್ತು. ಈ ಎಲ್ಲದರ ನಡುವೆ, ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Sat, 1 July 23