Court News: ಆರು ವಾರದೊಳಗೆ ಎಪಿಪಿ ಪರೀಕ್ಷೆ ನಡೆಸಲು ಸೂಚನೆ, ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗ ಪರಿಶೀಲನೆಗೆ ಸಮಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 07, 2022 | 10:02 PM

ಆರು ತಿಂಗಳ ಒಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

Court News: ಆರು ವಾರದೊಳಗೆ ಎಪಿಪಿ ಪರೀಕ್ಷೆ ನಡೆಸಲು ಸೂಚನೆ, ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗ ಪರಿಶೀಲನೆಗೆ ಸಮಿತಿ
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಸಹಾಯಕ ಅಭಿಯೋಜಕರ ಹುದ್ದೆಗಳಿಗೆ (Additional Public Prosecutor – APP) ಇನ್ನು ಆರು ತಿಂಗಳ ಒಳಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ರಾಜ್ಯದಲ್ಲಿ ಪ್ರಸ್ತುತ 205 ಸಹಾಯಕ ಅಭಿಯೋಜಕರ ಹುದ್ದೆಗಳು ಖಾಲಿಯಿವೆ. ಅಭಿಯೋಜಕರ ಕೊರತೆಯಿಂದ ಪ್ರಕರಣಗಳ ವಿಚಾರಣೆ ಮತ್ತು ತೀರ್ಪು ವಿಳಂಬವಾಗುತ್ತಿದೆ. ಇದರಿಂದ ವಿಚಾರಣಾಧೀನ ಕೈದಿಗಳಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಎಪಿಪಿಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ.

ಲೋಕಾಯುಕ್ತರ ನೇಮಕ ಕೋರಿದ್ದ ಅರ್ಜಿ ವಿಚಾರಣೆ

ಕರ್ನಾಟಕ ಲೋಕಾಯುಕ್ತರ ಹುದ್ದೆ ಬಹುಕಾಲದಿಂದ ಖಾಲಿಯಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಹುದ್ದೆಗೆ ಅರ್ಹರನ್ನು ಶೀಘ್ರ ನೇಮಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ವಿಚಾರಣೆ ನಡೆಸಿದರು. ಲೋಕಾಯುಕ್ತರನ್ನು ನೇಮಿಸುವ ಪ್ರಕ್ರಿಯೆ ಸರ್ಕಾರದ ಪರಿಶೀಲನೆಯಲ್ಲಿದೆ. ಹೀಗಾಗಿ ಕೆಲ ದಿನಗಳ ಕಾಲಾವಕಾಶ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ರಿತುರಾಜ್ ಅವಸ್ತಿ, 10 ದಿನಗಳ ಅವಧಿಗೆ ವಿಚಾರಣೆ ಮುಂದೂಡಿದರು. ಜನವರಿ 28ರಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ನಿವೃತ್ತರಾದ ನಂತರ ಖಾಲಿಯಿರುವ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವಂತೆ ಸೂಚಿಸಬೇಕೆಂದು ಕೋರಿ ವಕೀಲ ಎಸ್.ಉಮಾಪತಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ್ದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಧಕ-ಬಾಧಕ ಪರಿಶೀಲನೆಗೆ ಸಮಿತಿ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಹೈಕೋರ್ಟ್ ಸೂಚನೆಯನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರದ ಪರ ವಕೀಲರು, ‘ನ್ಯಾಯಾಲಯದ ಆದೇಶದಂತೆ ಸರ್ಕಾರ ತಜ್ಞರ ಸಮಿತಿ ರಚಿಸಲಿದೆ. ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ಸಮಿತಿ ತನ್ನ ವರದಿ ನೀಡಲಿದೆ. ಈ ವರದಿ ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

‘ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆತುರವಿಲ್ಲವೇ? ವನ್ಯಜೀವಿ ಮಂಡಳಿಯ ನಿರ್ಧಾರವೇ ವಿಳಂಬವಾದರೆ ಹೇಗೆ’ ಎಂದು ಮಂಡಳಿಯನ್ನು ಪ್ರಶ್ನಿಸಿದ ಹೈಕೋರ್ಟ್ ವಿಭಾಗೀಯ ಪೀಠವು, 10 ವಾರಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಸೂಚನೆ ನೀಡಿತು. ‘ಪರಿಸರ, ವನ್ಯಜೀವಿಗಳ ಮೇಲಿನ ಪರಿಣಾಮ ಅಧ್ಯಯನ ಮಾಡಿ, ಅಧ್ಯಯನ ಮಾಡಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿತು.

ಲಂಚಕ್ಕೆ ಆಸೆಪಟ್ಟಿದ್ದ ತೆರಿಗೆ ಇಲಾಖೆ ಅಧಿಕಾರಿ ಜೈಲುಪಾಲ

ಬಳ್ಳಾರಿ: ಜಿಎಸ್​ಟಿ ದಂಡದ ಮೊತ್ತ ರದ್ದುಗೊಳಿಸಿ, ಪ್ರಕರಣ ಇತ್ಯರ್ಥಪಡಿಸಲು ₹ 80 ಸಾವಿರ ಲಂಚ ಪಡೆಯಲು ಮುಂದಾಗಿದ್ದ ಕೇಂದ್ರ ತೆರಿಗೆ ಕಚೇರಿಯ ಅಧೀಕ್ಷಕ ಮಧುಸೂದನ್, ಸೆಕ್ಷನ್ ಆಫೀಸರ್​ ಅನಂತಕುಮಾರ್​ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜಿಎಸ್‌ಟಿ ದಂಡದ ಹಣ ರದ್ದುಪಡಿಸಿ, ಪ್ರಕರಣ ಮುಕ್ತಾಯಗೊಳಿಸಲು ಇವರಿಬ್ಬರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ (ಎಸಿಬಿ) ಹಾಗೂ ಬಳ್ಳಾರಿ ಎಸಿಬಿಯಿಂದ ಟ್ರ್ಯಾಪ್ ಕಾರ್ಯಾಚರಣೆ ನಡೆದಿತ್ತು.

ಪ್ರತಾಪ್ ಸಿಂಹ ವಿರುದ್ಧ ವಕೀಲರ ಪ್ರತಿಭಟನೆ

ವಕೀಲರಾಗಿದ್ದ ಸಿದ್ದರಾಮಯ್ಯಗೆ ಆರ್ಥಿಕತೆ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಕೀಲರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿರುವ ಮೈಸೂರು ವಕೀಲರ ಸಂಘ ಸಂಸದ ಪ್ರತಾಪ್​ ಸಿಂಹ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೆ ಯಾವುದೇ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದಿಲ್ಲ ಎಂದಿದ್ದಾರೆ. ದೇಶಕ್ಕೆ ವಕೀಲರ ಕೊಡುಗೆ ಅಪಾರವಾದುದು. ಸಂಸದ ಪ್ರತಾಪ್ ಸಿಂಹ ವಕೀಲ ವೃತ್ತಿಯನ್ನು ಹೀಯಾಳಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿಯವರನ್ನು ಬಿಡುವುದಿಲ್ಲ. ಬಿಜೆಪಿ ಪಕ್ಷದವರಿಗೆ ಮತ ಯಾಚಿಸಲು ಕೋರ್ಟ್ ಆವರಣಕ್ಕೂ ಬಿಡುವುದಿಲ್ಲವೆಂದು ಎಚ್ಚರಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Tue, 7 June 22