ಸರ್ಕಾರದ ವಿರುದ್ಧ ಕಾಂಗ್ರೆಸ್ ಪತ್ರ ಚಳುವಳಿ; ಕೈ ಜೋಡಿಸಲು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿ.ಕೆ.ಶಿವಕುಮಾರ್ ಮನವಿ
ಕೊರೊನಾ ವಿಚಾರದಲ್ಲಿ ರಾಜಕೀಯ ಬೇಡ ಎನ್ನುತ್ತಾರೆ. ಆದರೆ ಲಸಿಕೆ ಜಾಹೀರಾತಿಗೂ ಮೋದಿ ಫೋಟೋ ಹಾಕುತ್ತಾರೆ. ಇದು ರಾಜಕೀಯ ಅಲ್ವಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ನಾಳೆಯಿಂದ ಐದು ಕೆಜಿ ಅಕ್ಕಿ ಕೊಡಿ ಎಂದು ಪತ್ರ ಚಳುವಳಿ ಮಾಡುತ್ತಿದ್ದೇವೆ ರಾಜ್ಯದ ಎಲ್ಲಾ ಜನರು ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಬಿಪಿಎಲ್ ಕಾರ್ಡ್ ಇರುವವರು ಈ ಅಭಿಯಾನದಲ್ಲಿ ಭಾಗಿಯಾಗಿ, ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಮಾಡಿ ಅದನ್ನು ಮುಖ್ಯಮಂತ್ರಿಗೆ ಕಳುಹಿಸಿ ಕೊಡಿ. ನಂತರ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಕ್ಕಿ ಕೊಡಿ ಎಂದು ಮನವಿ ಮಾಡಿಕೊಳ್ಳಿ. ಜನರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ನಂತರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಲಸಿಕೆ ಪಡೆಯುವುದಕ್ಕೆ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೆಳಿದ್ದಾರೆ. ಹಳ್ಳಿಗಳಲ್ಲಿ ಇರುವವರು ಹೇಗೆ ನೋಂದಣಿ ಮಾಡಿಕೊಳ್ಳುತ್ತಾರೆ. ಬೇರೆ ರಾಜ್ಯಗಳಲ್ಲಿ ಉಚಿತ ಲಸಿಕೆ ಕೊಡುತ್ತಿದ್ದಾರೆ. ಕಾಡುಗಳಲ್ಲಿ ವಾಸ ಮಾಡುತ್ತಿರುವವರಿಗೆ ಹೆಲಿಕಾಪ್ಟರ್ ಮೂಲಕ ಲಸಿಕೆ ಕೊಡುತ್ತಿದ್ದಾರೆ. ನಮಲ್ಲಿ ಆ ವ್ಯವಸ್ಥೆ ಏಕೆ ಇಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಕೊರೊನಾ ವಿಚಾರದಲ್ಲಿ ರಾಜಕೀಯ ಬೇಡ ಎನ್ನುತ್ತಾರೆ. ಆದರೆ ಲಸಿಕೆ ಜಾಹೀರಾತಿಗೂ ಮೋದಿ ಫೋಟೋ ಹಾಕುತ್ತಾರೆ. ಇದು ರಾಜಕೀಯ ಅಲ್ವಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಕೊರೊನಾ ಸಂಕಷ್ಟದ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್ ನಿನ್ನೆಯ ಸಭೆಯನ್ನು ಮುಂದುವರೆಸಿ, ಜಿಲ್ಲಾಧ್ಯಕ್ಷರು ಮತ್ತು ಶಾಸಕರ ಜೊತೆ ಸಭೆ ಮಾಡಿದ್ದೇವೆ. ಕೊರೊನಾ ಸಂಕಷ್ಟದಲ್ಲಿ ಯಾವ ರೀತಿ ಸಹಾಯ ಮಾಡಬೇಕು. ಈ ಬಗ್ಗೆ ಸಮಾಲೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ಉಮೇಶ್ ಕತ್ತಿ ಮಾತಿಗೆ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ಕೊಡಿ. ಜನರಿಗೆ ಸಹಾಯ ಮಾಡಿ ಎಂದು ಹೇಳುತ್ತಿರುವಾಗಲೇ ಒಬ್ಬ ಸಚಿವ ಸಾಯಿ ಎಂದು ಹೇಳುತ್ತಾರೆ. ಅದು ಅವರ ಹೇಳಿಕೆಯಲ್ಲ ಬಿಜೆಪಿ ಮನಸ್ಥಿತಿ. ಇದರ ಬಗ್ಗೆ ಬಿಜೆಪಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಬೇಕು. ಬೇರೆ ಯಾರು ಸಮರ್ಥನೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಉಮೇಶ್ ಕತ್ತಿ ಮಾತಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿಷಾದ ಅಥವಾ ಕ್ಷಮೆ ಕೇಳೋದು ಪರಿಹಾರ ಅಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನೈತಿಕ ಹೊಣೆ ಹೊರಬೇಕು. ಉಮೇಶ್ ಕತ್ತಿಯನ್ನ ಸಚಿವ ಸಂಪುಟದಿಂದ ಕಿತ್ತೆಸೆಯಬೇಕು ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಉಮೇಶ್ ಕತ್ತಿ ಮಾತಿಗೆ ರಾಮಲಿಂಗಾ ರೆಡ್ಡಿ ಖಂಡನೆ ಉಮೇಶ್ ಕತ್ತಿ ಸಾಯಿ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗ ರೆಡ್ಡಿ ನಾನು ಕೂಡ ಆ ಆಡಿಯೋ ಕೇಳಿದ್ದೇನೆ. ಅದರಲ್ಲಿ ಸಾಯಿ ಎಂದು ಪದ ಬಳಸಿದ್ದು ಕೇಳಿದ್ದೇನೆ. ಉಮೇಶ್ ಕತ್ತಿ ಹಿರಿಯ ಸಚಿವರು, ಅನುಭವಿಗಳು. ಇಂತಹ ಪದ ಬಳಸಿದ್ದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ ಕೂಡಲೆ ಆಡಿದ ಮಾತು ವಾಪಸ್ಸು ಪಡೆಯಬೇಕು. ಬಹಿರಂಗವಾಗಿ ಜನರ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಆಹಾರ ಸಚಿವ ಉಮೇಶ್ ಕತ್ತಿ ಮಾತ್ರ ಈ ರೀತಿ ಮಾತನಾಡುವುದಿಲ್ಲ. ಬಹುತೇಕ ಎಲ್ಲ ಬಿಜೆಪಿ ನಾಯಕರ ಮನಸ್ಥಿತಿ ಹೀಗೆ ಇದೆ. ಮೇಲ್ನೋಟಕ್ಕೆ ದೇಶ ದೇಶ ಎಂದು ಮಾತುಗಳನ್ನ ಹೇಳುತ್ತಾರೆ. ಒಳಗೊಳಗೆ ಬಿಜೆಪಿಯವರು ಇಂಥ ಬುದ್ಧಿ ತೋರಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಮಾತು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರ ಧರಣಿ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಉಮೇಶ್ ಕತ್ತಿ ಮಾತನ್ನು ಖಂಡಿಸಿ ಸಂಜೆ 5 ಗಂಟೆಗೆ ಧರಣಿ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಬಳಿ ಕಾರ್ಯಕರ್ತರು ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹಿಸಿ ಅಣಕು ಶವಯಾತ್ರೆಯನ್ನು ನಡೆಸಿದ್ದಾರೆ. ಇನ್ನು ಈ ಧರಣಿಯಲ್ಲಿ ಡಿ.ಕೆ. ಶಿವಕುಮರ್, ನಲಪಾಡ್ ಕೂಡ ಭಾಗಿಯಾಗಿದ್ದು, ಮೆರವಣಿಗೆ ಮಾಡದಂತೆ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಇದನ್ನೂ ಓದಿ:
Umesh Katti: ಅಕ್ಕಿ ಕೇಳಿದವರಿಗೆ ಸತ್ತುಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!
Covid Curfew: ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಲಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ
(Congress has started campaign against Karnataka Government and DK Shivakumar urges BPL card holders to join the fight)
Published On - 6:28 pm, Wed, 28 April 21