ಬೆಂಗಳೂರು: ಯಾವ ಶಾಸಕರಿಂದಾಗಿ ರಾಜ್ಯದಲ್ಲಿ ಉಪ ಚುನಾವಣೆಗಳು ನಡೆಯುವಂತಾಗಿವೆಯೋ ಈಗ ಅದೇ ಶಾಸಕರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಡ್ಡಿಮುರಿದಂತೆ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ.. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆ ಸಂಬಂಧ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಜೀವ್ ಕುಮಾರ್, ಕಾಂಗ್ರೆಸ್-ಜೆಡಿಎಸ್ನ ಅನರ್ಹ ಶಾಸಕರು ಬೈಎಲೆಕ್ಷನ್ನಲ್ಲಿ ಸ್ಪರ್ಧಿಸುವಂತಿಲ್ಲ. ರಾಜ್ಯ ವಿಧಾನಸಭಾ ಸ್ಪೀಕರ್ ಈ ಸಂಬಂಧ ರೂಲಿಂಗ್ ನೀಡಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಉಪಚುನಾವಣೆಗೆ ಅರ್ಹರಲ್ಲ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
2 ಕ್ಷೇತ್ರಗಳಲ್ಲಿ ಹಳೆಯ ಪ್ರಕರಣಗಳು ಬಾಕಿಯಿವೆ:
2018ರ ಚುನಾವಣೆ ಬಳಿಕ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರ ಆಯ್ಕೆ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದು ಇನ್ನೂ ವಿಚಾರಣೆ ಹಂತದಲ್ಲಿದ್ದು, ಅರ್ಜಿ ಇತ್ಯರ್ಥವಾಗುವವರೆಗೂ ಉಪಚುನಾವಣೆ ನಡೆಸುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದರೂ..
ಆದರೆ ಸ್ಪೀಕರ್ ರೂಲಿಂಗ್ ಮುಂದಿಟ್ಟುಕೊಂಡು ತಮ್ಮನ್ನು ಚುನಾವಣಾ ಕಣದಿಂದ ಅನರ್ಹಗೊಳಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ತಳೆದಿರುವ ನಿಲುವಿಗೆ ಅನರ್ಹ ಶಾಸಕರು ಸಡ್ಡುಹೊಡೆದಿದ್ದಾರೆ. ತಮ್ಮ ಪ್ರಕರಣ ಇನ್ನೂ ಇತ್ಯರ್ಥವಾಗದೇ ಕೇಂದ್ರ ಚುನಾವಣಾ ಆಯೋಗ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿರುವುದು ಸರಿಯಲ್ಲ.
ಒಂದು ವೇಳೆ ಚುನಾವಣೆ ನಡೆದು, ಬೇರೊಬ್ಬರು ಆಯ್ಕೆಯಾದ್ರೆ.. ಮುಂದೆ ಸುಪ್ರೀಂಕೋರ್ಟ್ನಲ್ಲಿ ಸ್ಪೀಕರ್ ರೂಲಿಂಗ್ ಅನ್ನು ಅನೂರ್ಜಿತಗೊಳಿಸಿ, ತಮ್ಮ ಶಾಸಕ ಸ್ಥಾನವನ್ನು ಎತ್ತಿಹಿಸಿದ್ರೆ ಆಗ ತಮ್ಮ ಕ್ಷೇತ್ರಗಳಲ್ಲಿ ಇಬ್ಬಿಬ್ಬರು ಶಾಸಕರು ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಹಾಗಾಗಿಯೇ, ಈಗ ಘೋಷಿಸಿರುವ ಉಪಚುನಾವಣೆಗೆ ತಡೆ ನೀಡಬೇಕು ಎಂದು ಸೋಮವಾರವೇ ಸುಪ್ರೀಂಕೋರ್ಟ್ ಕದತಟ್ಟುವುದಾಗಿ 15 ಅನರ್ಹ ಶಾಸಕರು ಪ್ರಕಟಿಸಿದ್ದಾರೆ.
Published On - 4:00 pm, Sat, 21 September 19