ಬೆಂಗಳೂರು: ಎಲ್ಲ ಶಾಸಕರು ಏಕಪತ್ನೀವ್ರತಸ್ಥರೇ ಎಂಬ ಸಚಿವ ಡಾ.ಕೆ.ಸುಧಾಕರ ಅವರ ಪ್ರಶ್ನೆ ವಿವಾದಕ್ಕೀಡಾಗಿದೆ. ಇಂದು (ಮಾರ್ಚ್ 24) ಸಂಜೆ ನಡೆದ ಸುದ್ದಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೀಡಿರುವುದು ಸ್ಟುಪಿಂಡ್ ಸ್ಟೇಟ್ಮೆಂಟ್ (ಮೂರ್ಖತನದ ಹೇಳಿಕೆ) ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಂತ್ರಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಸಾಮಾನ್ಯ ಜನರಾಗಿ ಅಲ್ಲ. ಹಾಗಾಗಿ ಇದೊಂದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಸದನದ ಹೊರಗೆ ಅವರು ಈ ಹೇಳಿಕೆ ನೀಡಿದ್ದರೂ, ಸೆಷನ್ ಅವಧಿಯಲ್ಲಿ ಹೀಗೆ ಹೇಳಿರುವುದರಿಂದ ಸದಸ್ಯರ ಹಕ್ಕುಚ್ಯುತಿ ಆಗುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸದನದಲ್ಲಿರುವ ಎಲ್ಲಾ 225 ಶಾಸಕರ ಬಗ್ಗೆ ಸುಧಾಕರ್ ಈ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಹೆಣ್ಣುಮಕ್ಕಳೂ ಇದ್ದಾರೆ. ಮಹಿಳಾ ಸಚಿವರೂ ಇದ್ದಾರೆ. ಅವರ ವಿರುದ್ಧ ಹೀಗೆ ಹೇಳಿದ್ದಾರೆ. ಇದೊಂದು ಸ್ಟುಪಿಡ್ ಹೇಳಿಕೆ ಎಂದು ಗುಡುಗಿದ್ದಾರೆ.
ಎಲ್ಲರನ್ನೂ ಸೇರಿಸಿ ಹೀಗೆ ಹೇಳಿದ್ದಾರೆ. ಗಂಡಸರನ್ನು ಅವ್ನೇನೋ ಗಂಡ್ಸು ಅಂತ ಜನ ಬಿಡ್ತಾರೆ. ಆದರೆ, ಮಹಿಳೆಯರು ಏನು ಏನು ಅಂತ ಹೇಳಬೇಕು? ಹಳ್ಳಿನಲ್ಲಿ ಗಂಡ್ಸು ಬಿಡು ಅಂತಾರೆ. ಹೆಂಗ್ಸರನ್ನು ಹಂಗೇ ಅಂತಾರಾ? ಸುಧಾಕರ್ ಇದು ಗಿಲ್ಟಿ ಮೈಂಡ್ನಿಂದ ಹೇಳಿರೋದು. ಆ ಮಾತನ್ನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬೆಳಗಾವಿ ಕ್ಯಾಂಡಿಡೇಟ್ ಸತೀಶ್ ಜಾರಕಿಹೊಳಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಶಾಸಕರ ಮೇಲೆ ಎಸ್ಐಟಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಶಾಸಕರನ್ನು ಸೇರಿಸಿ ಭೋಜನಕೂಟ ನಡೆಸಿರುವ ಕಾಂಗ್ರೆಸ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಕುರಿತು ದೂರು ನೀಡಲು ಮುಂದಾಗಿದೆ.
ತಮ್ಮ ಹೇಳಿಕೆ ಹಲವು ಆಯಾಮಗಳಲ್ಲಿ ವಿವಾದಕ್ಕೀಡಾಗಿದ್ದನ್ನು ಮನಗಂಡ ಸಚಿವ ಡಾ.ಕೆ.ಸುಧಾಕರ್ ಇದೀಗ ತಮ್ಮ ಹೇಳಿಕೆಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ‘ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನಾನು ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ’ ಎಂದು ಡಾ.ಕೆ.ಸುಧಾಕರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವೀವಾದಕ್ಕೀಡಾದ ‘ಏಕಪತ್ನೀವ್ರತಸ್ಥ’ ಹೇಳಿಕೆ; ಸಚಿವ ಡಾ.ಕೆ.ಸುಧಾಕರ್ ವಿಷಾದ
Published On - 5:19 pm, Wed, 24 March 21