ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೆ ಏರಿದೆ: ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ವಾಗ್ದಾಳಿ

| Updated By: ಡಾ. ಭಾಸ್ಕರ ಹೆಗಡೆ

Updated on: Dec 02, 2023 | 2:42 PM

ಸಚಿವ ಮಧು ಬಂಗಾರಪ್ಪ ವಿರುದ್ಧ ಸ್ವಪಕ್ಷ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿದ್ದಾರೆ. ಆದರೆ, ಮಧು ಬಂಗಾರಪ್ಪಗೆ ಅಧಿಕಾರದ ಪಿತ್ತ ನೆತ್ತಿಗೆ ಏರಿದೆ, ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೆ ಏರಿದೆ: ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ವಾಗ್ದಾಳಿ
ಬೇಳೂರು ಗೋಪಾಕೃಷ್ಣ ಮತ್ತು ಮಧು ಬಂಗಾರಪ್ಪ
Follow us on

ಬೆಂಗಳೂರು, ಡಿ.2: ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೆ ಏರಿದೆ ಎಂದು ಸ್ವಪಕ್ಷ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Gopala Krishna) ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಉಸ್ತುವಾರಿ ಸಚಿವರು ಸರಿ ಆಗಿದ್ದಾರೆ. ಆದರೆ ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ‌. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ನಾವು ಶಾಸಕರಲ್ವಾ ನಮಗೂ ಜವಬ್ದಾರಿ ಇಲ್ವಾ ಎಂದು ಪ್ರಶ್ನಿಸಿದರು.

ನಾವು ಬಿಎಸ್ ಯಡಿಯೂರಪ್ಪ ಅವರ ಮಕ್ಕಳನ್ನ ಸೋಲಿಸಬೇಕು ಅಂತ ಇದ್ದೇವೆ. ಬಿವೈ ರಾಘವೇಂದ್ರ ಅವರನ್ನು ಸೋಲಿಸಬೇಕು ಅಂತ ಇದ್ದೇವೆ. ಆದರೆ ನಮ್ಮ ಸಚಿವರು ನಮ್ಮಲ್ಲೆ ಒಡಕು ಮೂಡಿಸುತ್ತಿದ್ದಾರೆ. ಮಧು ಬಂಗಾರಪ್ಪ ಅವರು ಮಾಜಿ ಮುಖ್ಯಮಂತ್ರಿ ಮಗ. ಅವರ ತಂದೆ ಗರಡಿಯಲ್ಲಿ ಪಳಗಿದವರು ನಾವು. ಎಲ್ಲರನ್ನು ಒಗ್ಗೂಡಿಸಿ ಕರೆದುಕೋಡು ಹೋಗಬೇಕು‌. ಅವರೆ ಪಕ್ಷವನ್ನ ಒಡೆಯುವುದಲ್ಲ ಎಂದರು.

ಇದನ್ನೂ ಓದಿ: ಶಿವಮೊಗ್ಗ ಕಾಂಗ್ರೆಸ್​​​ನಲ್ಲಿ ಶೀತಲ ಸಮರ: ಲೋಕಸಭೆ ಚುನಾವಣೆಗೆ ಮೊದಲೇ ಅಸಮಧಾನ ಸ್ಫೋಟ

ಶಿವಮೊಗ್ಗದಲ್ಲಿ ಪಕ್ಷ ಒಡೆದು ಎರೆಡು ಬಣವಾಗಿದೆ. ಅವರೇ ಅದಕ್ಕೆ ಕುಮ್ಮಕ್ಕು ನೀಡುವುದಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಒಬ್ಬ ಪ್ರಬಲ ಆಕಾಂಕ್ಷಿ ಎಂದು ಗೋಪಾಲಕೃಷ್ಣ ಹೇಳಿದರು.

ಮೂರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಗೋಪಾಲಕೃಷ್ಣ, ಯಡಿಯೂರಪ್ಪ ಅವರು ಒಂದು ಮಾತು ತಿಳಿದುಕೊಳ್ಳಬೇಕು. ಹಿಂದೆ ಮಿಷನ್ 150 ಅಂತ ಹೇಳಿ ಯಡಿಯೂರಪ್ಪ ರಾಜ್ಯ ಓಡಾಡಿದ್ದರು. ಆದರೆ ಕೇವಲ 65 ಸೀಟ್​ಗಳು ಬಂದಿವೆ. ಅವರ ನಾಯಕತ್ವದಲ್ಲೇ ಚುನಾವಣೆ ನಡೆದಿತ್ತು. ಮೋದಿ ಕರ್ಕೊಂಡು ಬಂದು ರಾಜ್ಯದಲ್ಲಿ ಓಡಾಡಿದ್ದಾರೆ. ಆದರೂ ಅಧಿಕಾರಕ್ಕೆ ಬಂದಿಲ್ಲ ಎಂದರು.

ರಾಜ್ಯದಲ್ಲಿ 136 ಸೀಟ್ ಜನ ಬೆಂಬಲ ಕೊಟ್ಟಿದ್ದಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ. ಯಡಿಯೂರಪ್ಪ ಮಗ ಅಧ್ಯಕ್ಷ ಆದ ತಕ್ಷಣವೇ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಮಗ ಬಂದ ತಕ್ಷಣವೇ ಚುನಾವಣೆ ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Sat, 2 December 23