ಬೆಂಗಳೂರು: ವರ್ಷದ ಮೊದಲ ಅಧಿವೇಶನ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಅಸ್ತ್ರ ಬಳಸಲು ಕೈಪಡೆ ಸಜ್ಜಾಗಿದ್ದು, ಇಂದು ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸುವ ಸಾಧ್ಯತೆಯೇ ಹೆಚ್ಚಿದೆ. ಇದನ್ನು ಎದುರಿಸಲು ಬಿಜೆಪಿಯೂ ಸಜ್ಜಾಗಿದೆ.
ನಿನ್ನೆಯಿಂದ ವಿಧಾನಮಂಡಲ ಅಧಿವೇಶನ ಶುರುವಾಗಿದೆ. ವಿಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಿ ಇಕಟ್ಟಿನಲ್ಲಿ ಸಿಲುಕಿಸೋಕೆ ಅಸ್ತ್ರಗಳನ್ನು ರೆಡಿ ಮಾಡ್ಕೊಂಡು ಕಾಯುತ್ತಿದೆ. ಯಾವಾಗ ಟೈಂ ಸಿಗುತ್ತೋ ಅಂತಾ ತುದಿಗಾಲಲ್ಲಿ ನಿಂತಿವೆ. ಇತ್ತ ಸರ್ಕಾರವೂ ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ರೆಡಿ ಮಾಡ್ಕೊಂಡು ಸರ್ವ ಸನ್ನದ್ಧವಾಗಿ ನಿಂತಿದೆ. ಯಾಕಂದ್ರೆ ಅಸಲಿ ಆಟ ಇರೋ ಇವತ್ತಿನಿಂದ ಶುರು.
ಬಿಜೆಪಿ ಸರ್ಕಾರ ಕಟ್ಟಿ ಹಾಕಲು ಕೈಪಡೆ ಸಜ್ಜು..!
ವರ್ಷದ ಮೊದಲ ಅಧಿವೇಶನ ನಿನ್ನೆ ಶುರುವಾಗಿದೆ. ರಾಜ್ಯಪಾಲರ ಭಾಷಣದ ಮೂಲಕ ಕಲಾಪಕ್ಕೆ ಚಾಲನೆ ಸಿಕ್ಕಿದೆ. ಇದಾದ ಬಳಿಕ ಸಂತಾಪಕ್ಕಷ್ಟೇ ಕಲಾಪ ಸೀಮಿತವಾಗಿತ್ತು. ಇಂದಿನಿಂದ ಸದನ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್ ಸಾಕಷ್ಟು ತಂತ್ರಗಳನ್ನು ರೆಡಿ ಮಾಡ್ಕೊಂಡಿದೆ. ಈಗಾಗ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿರುವ ಕಾಂಗ್ರೆಸ್, ಇದಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾಗಿದೆ.
‘ಕೈ’ ಪಡೆಯ ಅಸ್ತ್ರ:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ನಿಲುವಳಿ ಸೂಚನೆಗೆ ಕಾಂಗ್ರೆಸ್ ರೆಡಿಯಾಗಿದೆ. ಬೀದರ್ನ ಶಾಹೀನ್ ಶಾಲೆ ವಿರುದ್ಧದ ದೇಶದ್ರೋಹ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕಲು ಕೈಪಡೆ ಸಜ್ಜಾಗಿದೆ.ಇದರ ಜತೆಗೆ ಹುಬ್ಬಳ್ಳಿಯ ಪಾಕ್ ಪರ ಘೋಷಣೆ ವಿಚಾರವನ್ನೂ ಚರ್ಚೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಇದಿಷ್ಟೇ ಅಲ್ಲದೇ, ಸರ್ಕಾರ ಸಿಎಎ ವಿಚಾರವಾಗಿ ಪ್ರತಿಭಟನಾನಿರತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇದರ ವಿರುದ್ಧ ಕೂಡ ಮಾತನಾಡಲು ತಯಾರಿ ಮಾಡ್ಕೊಂಡಿದೆ. ಅಲ್ದೆ, ಪ್ರವಾಹ ಪರಿಹಾರ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೂ ಸಂತ್ರಸ್ತರಿಗೆ ಸೂಕ್ತ ಸೌಕರ್ಯಗಳನ್ನು ನೀಡಿಲ್ಲ ಅಂತಾ ಆರೋಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ತಂತ್ರ ನಡೆಸುತ್ತಿದೆ. ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರಮುಖವಾಗಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತ್ರವನ್ನೇ ಪ್ರಯೋಗಿಸಲು ಕೈ ರೆಡಿಯಾಗಿದೆ.
‘ಕೈ’ಗೆ ಪ್ರತ್ಯುತ್ತರ ಕೊಡಲು ಶಾಸಕರಿಗೆ ಸಿಎಂ ಸೂಚನೆ:
ಇತ್ತ ಬಿಜೆಪಿ ಕೂಡ ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಇದೇ ವೇಳೆ, ಶಾಸಕರಿಗೆ ಕೆಲವೊಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ. ವಿಪಕ್ಷವನ್ನು ಹೇಗೆ ಎದುರಿಸಬೇಕು..? ಯಾವ ರೀತಿ ಕೌಂಟರ್ ಕೊಡಬೇಕು ಅಂತಾ ಸೂಚನೆ ಕೊಟ್ಟಿದ್ದಾರೆ.
ಕಮಲ ‘ಕೌಂಟರ್’
ಕಾಂಗ್ರೆಸ್ ಪದೇಪದೆ ಕಾನೂನು ಮತ್ತು ಸುವ್ಯವಸ್ಥೆ ವಿಚಾರವಾಗಿ ಸರ್ಕಾರದ ವಿರುದ್ಧ ದಾಳಿ ನಡೆಸಿದರೆ ಸೂಕ್ತ ಉತ್ತರ ಕೊಡಲು ಮುಂದಾಗಬೇಕು ಅಂತಾ ಸಚಿವರಿಗೆ ಸಿಎಂ ಬಿಎಸ್ವೈ ಸೂಚನೆ ಕೊಟ್ಟಿದ್ದಾರೆ. ಅಲ್ದೆ, ಅನಗತ್ಯವಾಗಿ ಶಾಸಕರು ಮಾತಿನ ಚಕಮಕಿ ನಡೆಸುವುದು ಬೇಡ ಅಂತ ಕಿವಿಮಾತು ಹೇಳಿರೋ ಸಿಎಂ, ಕಾಂಗ್ರೆಸ್ ನಾಯಕರಿಗೆ ಬಿಜೆಪಿಯ ಹಿರಿಯ ನಾಯಕರೇ ಉತ್ತರ ಕೊಡುತ್ತಾರೆ. ಉಳಿದ ಶಾಸಕರು ನಮ್ಮ ಜೊತೆ ಸಹಕರಿಸಿ ಅಂತಾ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಅಲ್ದೆ ಪ್ರವಾಹ ಪರಿಹಾರ ವಿಚಾರದಲ್ಲಿ ವಿಪಕ್ಷ ಕಾಂಗ್ರೆಸ್, ಸರ್ಕಾರವನ್ನು ಕೆಣಕಿದ್ರೆ ಅಂಕಿ-ಅಂಶದ ಮೂಲಕವೇ ಉತ್ತರಿಸಲು ಬಿಜೆಪಿ ಮುಂದಾಗಿದೆ.
ಮತ್ತೊಂದೆಡೆ ಜೆಡಿಎಸ್ ಕೂಡ ಸದನದಲ್ಲಿ ಌಕ್ಟೀವ್ ಆಗಿರಲು ತಯಾರಾಗಿದೆ. ಒಟ್ನಲ್ಲಿ, ವಿಪಕ್ಷ ಕಾಂಗ್ರೆಸ್, ಸರ್ಕಾರಕ್ಕೆ ಸವಾಲೊಡ್ಡಲು ಮುಂದಾಗಿದ್ರೆ, ಆಡಳಿತಾರೂಢ ಬಿಜೆಪಿ ಎಲ್ಲದಕ್ಕೂ ಸೈ ಎಂದಿದೆ. ಹೀಗಾಗಿ, ಇಂದಿನ ಕಲಾಪದಲ್ಲಿ ಚರ್ಚೆಗಿಂತ ಗಲಾಟೆ. ಗದ್ದಲವೇ ಸೌಂಡ್ ಮಾಡಿದ್ರೂ ಅಚ್ಚರಿಪಡಬೇಕಾಗಿಲ್ಲ.