
ಬೆಂಗಳೂರು, ಡಿಸೆಂಬರ್ 14: ವೋಟ್ ಚೋರಿ (Vote Chori) ವಿರುದ್ಧವಾಗಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಳಂದ ಕ್ಷೇತ್ರದ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಮತಗಳ್ಳತನ ಆಗಿದ್ದು ಸಾಬೀತಾಗಿದೆ. ನರೇಂದ್ರ ಮೋದಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಯ ಜೊತೆ ಕೇಂದ್ರ ಚುನಾವಣಾ ಆಯೋಗ ಶಾಮೀಲಾಗಿದ್ದು, ಚುನಾವಣಾ ಆಯೋಗಕ್ಕಾಗಿ ಕಾನೂನನ್ನೇ ಬದಲಾವಣೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹರಿಯಾಣದಲ್ಲಿ ಮತಗಳ್ಳತನ ಹೇಗೆ ಆಗಿದೆ ಅಂತಾ ತಿಳಿಯಬೇಕಿದೆ. ಒಂದೇ ಬೂತ್ನಲ್ಲಿ 200 ಸಲ ಹೇಗೆ ಮತ ಹಾಕಲು ಸಾಧ್ಯ? ಸಂಸತ್ನಲ್ಲಿ ಪ್ರಸ್ತಾಪ ಮಾಡಲು ಮುಂದಾದರೆ ಅವಕಾಶ ಕೊಡಲಿಲ್ಲ. ಹಿಂಸೆಯಿಲ್ಲದೆ ನಾವು ಈ ಯುದ್ಧ ಗೆಲ್ಲುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ವೋಟ್ ಚೋರಿ ವಿರೋಧಿಸಿ ರಾಹುಲ್ ಗಾಂಧಿ ಪ್ರತಿಭಟನೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು ನೋಡಿ
ಸತ್ಯವು ಅತ್ಯಂತ ಮುಖ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ ಸತ್ಯವಲ್ಲ, ಶಕ್ತಿಯೇ ಮುಖ್ಯ ಎಂದು ಭಾಗವತ್ ಹೇಳಿದರು. ಸತ್ಯ ಎತ್ತಿಹಿಡಿಯುವ ಮೂಲಕ ಮೋದಿ ಮತ್ತು ಆರ್‌ಎಸ್‌ಎಸ್ ಸರ್ಕಾರವನ್ನು ನಾವು ತೆಗೆದುಹಾಕುತ್ತೇವೆ. ಮೋಹನ್ ಭಾಗವತ್ ಸತ್ಯಕ್ಕೆ ಯಾವುದೇ ಬೆಲೆಯಿಲ್ಲ ಅಂತಾರೆ, ನಾವು ಸತ್ಯದ ಹಿಂದೆ ಇರುವವರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರತಿಭಟನಾ ಸಮಾವೇಶದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಇವಿಎಂ ಮಷಿನ್ ಹ್ಯಾಕ್ ಮಾಡಲಾಗಿದೆ. ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ. ಸಂಸತ್ನಲ್ಲಿ ಮತಗಳ್ಳನದ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ ಎಂದ ಪ್ರಿಯಾಂಕಾ ಗಾಂಧಿ, ನ್ಯಾಯಯುತ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ: ಸಿಎಂ, ಡಿಸಿಎಂ ಭಾಗಿ
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆದರೆ BJP ಗೆಲ್ಲಲ್ಲ. ಬ್ಯಾಲೆಟ್ ಪೇಪರ್ ಬಳಸಿದರೆ ಗೆಲ್ಲಲ್ಲ ಎಂದು ಅವರಿಗೂ ಗೊತ್ತಿದೆ. ಬಿಹಾರ ಚುನಾವಣೆಯಲ್ಲಿ ಸೋತಿದ್ದಕ್ಕೆ ನಿರಾಸೆಗೊಳ್ಳಬೇಕಾಗಿಲ್ಲ, ಏಕೆಂದರೆ ಅವರು ಕಳ್ಳತನದ ಮೂಲಕ ಗೆದ್ದಿದ್ದಾರೆ ಎಂದು ಗೊತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿ ಯಾವತ್ತೂ ಅಧಿವೇಶನಕ್ಕೆ ಹಾಜರಾಗುವುದಿಲ್ಲ. ಅಧಿವೇಶನದ ನಂತರ ರಾಹುಲ್ ವಿದೇಶಕ್ಕೆ ಹೋಗ್ತಾರೆ ಅಂತಾರೆ. ರಾಹುಲ್ ವಿದೇಶಕ್ಕೆ ಹೋಗ್ತಾರೆಂದು ಬಿಜೆಪಿಗರು ಪ್ರಶ್ನಿಸುತ್ತಿದ್ದರು, ಆದರೆ ಮೋದಿ ಅಧಿವೇಶನಕ್ಕೆ ಹಾಜರಾಗದೆ ವಿದೇಶಕ್ಕೆ ಹೋಗುತ್ತಾರೆ ಎಂದು ಆರೋಪಿಸಿದರು.
ತೆಲಂಗಾಣ ಸಿಎಂ ರೇವಂತ್ ಮಾತನಾಡಿದ್ದು, ನಮ್ಮ ಮಾತು ಮೋದಿಗೆ ಕೇಳಬೇಕು, ಅವರು ನಿದ್ದೆಯಿಂದ ಏಳಬೇಕು. ಮೊದಲು ಮತದಾರರ ಪಟ್ಟಿಯಿಂದ ನಮ್ಮ ಹೆಸರನ್ನು ತೆಗೆಯುತ್ತಾರೆ. ಆಮೇಲೆ ಆಧಾರ್ ರದ್ದು ಮಾಡ್ತಾರೆ, ರೇಷನ್ಕಾರ್ಡ್ ತೆಗೆದು ಹಾಕ್ತಾರೆ, ಅದಕ್ಕೆ ನಾವು ಅವಕಾಶ ನೀಡಬಾರದು ಎಂದು ಗುಡುಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.