AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್​ನಿಂದ ಇಂದು ರಾಜಭವನ ಚಲೋ..

ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ ಇಂದು ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಂದಲೂ ಕಾರ್ಯಕರ್ತರು, ರೈತರು ಱಲಿಯಲ್ಲಿ ಭಾಗವಹಿಸುತ್ತಿರುವುದು ಆನೆ ಬಲ ಬಂದಂತಾಗಿದೆ.

ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್​ನಿಂದ ಇಂದು ರಾಜಭವನ ಚಲೋ..
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Jan 20, 2021 | 7:09 AM

Share

ಬೆಂಗಳೂರು: ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ಆರಂಭವಾದ ಪ್ರತಿಭಟನೆ ದಿನೇ ದಿನೇ ಕಾವು ಪಡೆದುಕೊಳ್ತಿದೆ. ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ ಸದ್ಯಕ್ಕೆ ನಿಲ್ಲೋ ಲಕ್ಷಣಗಳೇ ಕಾಣ್ತಿಲ್ಲ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಅಷ್ಟೇ ಉಗ್ರ ಪ್ರತಿಭಟನೆಗೆ ಕಾಂಗ್ರೆಸ್ ಮುನ್ನುಡಿ ಬರೆದಿದೆ. ರೈತ ಸಂಘಟನೆಗಳೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ನಾಯಕರು ಕೇಂದ್ರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ. ಕೆಪಿಸಿಸಿ ವತಿಯಿಂದ ಕಿಸಾನ್​ ಅಧಿಕಾರ ದಿವಸ್ ಆಚರಣೆ ಮಾಡುವ ಮೂಲಕ ಬೃಹತ್ ಱಲಿಗೆ ಚಾಲನೆ ನೀಡಲಿದ್ದಾರೆ. ಅಂದಹಾಗೆ ಇಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಕೆಲ ರೈತ ಸಂಘಟನೆಗಳು ರಾಜಭವನ ಚಲೋ ನಡೆಸಲಿದ್ದಾರೆ. ಇಂದು ಬೆಳಗ್ಗೆ 11ಗಂಟೆಗೆ ರೈಲ್ವೇ ನಿಲ್ದಾಣದ ಸಮೀಪವಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಱಲಿ ಆರಂಭವಾಗಿ ಫ್ರೀಡಂ ಪಾರ್ಕ್ ಮಾರ್ಗವಾಗಿ ರಾಜಭವನ ತಲುಪಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜಭವನ ಚಲೋ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಸ್ನಾನದ ಚಳವಳಿ ಮೂಲಕ ರಾಜಭವನ ಚಲೋ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮೊದಲಿಗೆ ಪೆಟ್ರೋಲ್, ಡೀಸೆಲ್, LPG ಸಿಲಿಂಡರ್​ ದರ ಏರಿಕೆ ಖಂಡಿಸಿ ಬೆಳಗ್ಗೆ 8 ಗಂಟೆ 30ನಿಮಿಷಕ್ಕೆ ಒಲೆ ಹಚ್ಚುವ ಚಳವಳಿ ನಡೆಸಲಿದ್ದಾರೆ. ನಂತರ ರಸ್ತೆಯಲ್ಲೇ ಅಡುಗೆ ತಯಾರಿಸಿ ಉಪಾಹಾರ ಸೇವಿಸಲಿದ್ದಾರೆ.

ಇನ್ನು 8 ಗಂಟೆ 45 ನಿಮಿಷಕ್ಕೆ ಬಾರುಕೋಲು ಚಳವಳಿ, 9 ಗಂಟೆಗೆ ಉರುಳುಸೇವೆ ಚಳವಳಿ ಆರಂಭವಾಗಲಿದೆ. ಇನ್ನು 9 ಗಂಟೆ 15ನಿಮಿಷಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಅಣಕು ಪ್ರದರ್ಶನ ನಡೆಯಲಿದೆ. 9 ಗಂಟೆ 30ನಿಮಿಷಕ್ಕೆ ಅರೆಬೆತ್ತಲೆ ಚಳವಳಿ, 9 ಗಂಟೆ 45 ನಿಮಿಷಕ್ಕೆ ರೈತರ ಆತ್ಮಹತ್ಯೆ ಅಣಕು ಪ್ರದರ್ಶನ, 10 ಗಂಟೆಗೆ ಕಪ್ಪು ಪಟ್ಟಿ ಪ್ರದರ್ಶನ ಚಳವಳಿ, 10 ಗಂಟೆ 30ನಿಮಿಷಕ್ಕೆ ರಾಜಭವನ ಚಲೋಗೆ ಚಾಲನೆ ಸಿಗಲಿದೆ.

ರೈತರಿಗೆ ಎಳನೀರು ಕುಡಿಸುವ ಮೂಲಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ರಾಜಭವನ ಚಲೋಗೆ ಚಾಲನೆ ನೀಡಲಿದ್ದಾರೆ. 10 ಗಂಟೆ 30 ನಿಮಿಷದ ಬಳಿಕ ಫ್ರೀಡಂ ಪಾರ್ಕ್‌ನತ್ತ ಱಲಿ ಹೊರಡಲಿದೆ. ಕಿಸಾನ್ ಮೋರ್ಚಾ ಕಾರ್ಯಕರ್ತರ ಸಿದ್ದರಾಮಯ್ಯ, ಡಿಕೆಶಿ ಹೆಜ್ಜೆ ಹಾಕಲಿದ್ದಾರೆ.

ಱಲಿ ಆನಂದ್ ರಾವ್ ಸರ್ಕಲ್ ಮೇಲ್ಸೇತುವೆ ಮೂಲಕ ಫ್ರೀಡಂಪಾರ್ಕ್‌ಗೆ ಎಂಟ್ರಿ ಕೊಡಲಿದೆ. 11 ಗಂಟೆಗೆ ಸುಮಾರಿಗೆ ಫ್ರೀಡಂಪಾರ್ಕ್‌ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಯಲಿದೆ. ಸಭೆಯಲ್ಲಿ ‘ಕೈ’ ನಾಯಕರು, ರೈತ ಮುಖಂಡರು ಭಾಷಣ ಮಾಡಲಿದ್ದಾರೆ. ನಂತರ ಱಲಿ ಮೌರ್ಯ ಸರ್ಕಲ್‌ನತ್ತ ಸಾಗಲಿದೆ. ಹೀಗೆ ಮೌರ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್ ಮಾರ್ಗವಾಗಿ ಸಾಗಿ ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿರುವ ರೈತರು, ‘ಕೈ’ ಕಾರ್ಯಕರ್ತರನ್ನ ರೇಸ್ ವ್ಯೂ ಹೋಟೆಲ್​ ಬಳಿಯೇ ತಡೆಯಲು ಖಾಕಿ ಪಡೆ ಸಜ್ಜಾಗಿದೆ. ಪ್ರತಿಭಟನಾ ಱಲಿ ನಡೆಯುವ ಎಲ್ಲೆಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

‘ಕೈ’ ನಾಯಕರ ಅಜೆಂಡಾ ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಆಗಿರುವ ಲೋಪ ಸರಿಪಡಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ, ಹುಲಿ ಯೋಜನೆ, ಅಡಕೆಗೆ ಹಳದಿ ಎಲೆ ರೋಗ, ಕಬ್ಬು & ಕಾಫಿ ಬೆಳೆಗಾರರ ಸಮಸ್ಯೆ, ಕೃಷಿ ಒತ್ತುವರಿ ಸಮಸ್ಯೆ, ಒಣಪ್ರದೇಶಗಳ ನೀರಾವರಿ ಸಮಸ್ಯೆ, ಅಸಮರ್ಪಕ ಬೆಂಬಲ ಬೆಲೆ ಸಮಸ್ಯೆ, ರಸಗೊಬ್ಬರ ಕೊರತೆ, ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬ, ಈರುಳ್ಳಿ ಬೆಳೆಗಾರರ ಸಮಸ್ಯೆ, ಕಾಳು ಮೆಣಸು ಬೆಳೆಗಾರರ ಸಮಸ್ಯೆ, ಅವೈಜ್ಞಾನಿಕ ಬೆಲೆ ನಿಗದಿ, ದಲ್ಲಾಳಿಗಳ ಮಧ್ಯಸ್ಥಿಕೆಯಿಂದ ಬೆಳೆಗಾರರಿಗೆ ಆಗುತ್ತಿರುವ ನಷ್ಟ, ಫಲವತ್ತಾದ ಕೃಷಿ ಭೂಮಿಯನ್ನ ಅಕ್ರಮವಾಗಿ ಡಿನೋಟಿಫೈ ಮಾಡ್ತಿರೋದಕ್ಕೆ ವಿರೋಧ ವ್ಯಕ್ತಪಡಿಸಿ ಬೃಹತ್ ಱಲಿ ಹಮ್ಮಿಕೊಳ್ಳಲಾಗಿದೆ.

ಒಟ್ನಲ್ಲಿ ಕೈ ಪಡೆ ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿ ಇಂದು ಬೃಹತ್ ಹೋರಾಟಕ್ಕೆ ಇಳಿದಿದೆ. ಅಷ್ಟೇ ಅಲ್ಲ ರಾಜಭವನಕ್ಕೆ ಮುತ್ತಿಗೆ ಹಾಕಲು ಸಹ ನಿರ್ಧರಿಸಿದೆ. ಕೈ ನಾಯಕರ ಈ ಹೋರಾಟ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದೆ ಸದ್ಯಕ್ಕಿರುವ ಕುತೂಹಲ.

ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿ ಮೊಳಗಲಿದೆ ‘ಕೈ’ ನಾಯಕರ ಕಹಳೆ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್