ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರದಲ್ಲಿ ಜನವರಿ 31ರವರೆಗೂ ಈ ಹಿಂದೆ ಕೇಂದ್ರ ಸರ್ಕಾರ ಪ್ರಕಟಿಸಿದ್ದ ಮಾರ್ಗಸೂಚಿಯನ್ನೇ ಮುಂದುವರಿಸಲು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ.
ಬ್ರಿಟನ್ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಾಣು ಹರಡುವ ಭೀತಿ ಇದೆ. ಹೀಗಾಗಿ ಆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಈ ಬಗ್ಗೆ ಕೇಂದ್ರ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಹೊಸ ವರ್ಷಾಚರಣೆ ವೇಳೆ ಗುಂಪುಗೂಡದಂತೆ ನೋಡಿಕೊಳ್ಳಿ. ಈ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಕೇಂದ್ರ ಗೃಹ ಇಲಾಖೆ ಪತ್ರದಲ್ಲಿ ತಿಳಿಸಿದೆ.
ಚಳಿಗಾಲದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡಲಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಕೊರೊನಾ ಹೆಚ್ಚು ಹರಡಲು ಚಳಿಗಾಲ ಕಾರಣವಾಗಬಹುದು. ಸುಪ್ರೀಂಕೋರ್ಟ್ ನಿರ್ದೇಶನದಂತೆ ದೈಹಿಕ ಅಂತರಕ್ಕೆ ಒತ್ತು ನೀಡಿ. ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ವಿಧಿಸಬಹುದು. ಇದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದಿರುವ ಗೃಹ ಇಲಾಖೆ, ಅಗತ್ಯ ಸೇವೆ, ಅಂತಾರಾಜ್ಯ ಸಂಚಾರಕ್ಕೆ ಅಡೆತಡೆ ಇರಬಾರದು ಎಂದು ಸೂಚಿಸಿದೆ.
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಒಂದಷ್ಟು ಮಾರ್ಗಗಗಳನ್ನು ಸೂಚಿಸಿತ್ತು. ಇದರಡಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಚಿತ್ರ ಮಂದಿರಗಳಲ್ಲಿ ಶೇ.50 ಆಸನಗಳಿಗೆ ಮಾತ್ರ ವ್ಯವಸ್ಥೆ ಮಾಡುವುದು ಸೇರಿ ಹಲವು ಸೂಚನೆಗಳನ್ನು ಇದು ಒಳಗೊಂಡಿದೆ.
ಕೊರೊನಾ ರೂಪಾಂತರ: ಬ್ರಿಟನ್ನಿಂದ ಆಗಮಿಸುವವರ ತಪಾಸಣೆಗಾಗಿ ಕೇಂದ್ರದಿಂದ ನಿಯಮಾವಳಿ ಬಿಡುಗಡೆ