ಗುತ್ತಿಗೆದಾರನ ಬೇಜವಾಬ್ದಾರಿತನ, ಧೂಳು ತುಂಬಿದ ರಸ್ತೆಯಿಂದ ಮಂಕಾಗುತ್ತಿದೆ ಜನ ಜೀವನ..

|

Updated on: Jan 01, 2021 | 8:11 AM

ಆ ಐತಿಹಾಸಿಕ ಗ್ರಾಮದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆದ್ದಾರಿ ಗುತ್ತಿಗೆದಾರನ ಬೇಜವಾಬ್ದಾರಿಗೆ ಹೋಟೆಲ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಹೊಡೆತಕ್ಕೆ ಸಿಲುಕಿ ವ್ಯಾಪಾರ ಇಲ್ಲದೇ ಕಂಗಾಲಾದ ವ್ಯಾಪಾರಸ್ಥರಿಗೆ ನಿತ್ಯ ಧೂಳಿನ ಸ್ನಾನವಾಗುತ್ತಿದೆ.

ಗುತ್ತಿಗೆದಾರನ ಬೇಜವಾಬ್ದಾರಿತನ, ಧೂಳು ತುಂಬಿದ ರಸ್ತೆಯಿಂದ ಮಂಕಾಗುತ್ತಿದೆ ಜನ ಜೀವನ..
ಧೂಳಿನಿಂದ ತುಂಬಿದ ರಸ್ತೆ
Follow us on

ಗದಗ: ಧೂಳು.. ಧೂಳು.. ಧೂಳು.. ಎಲ್ಲೆಲ್ಲೂ ದೂಳು. ಎಲ್ಲಿ ನೋಡಿದ್ರು ಧೂಳು. ಇಲ್ಲಿ ವಾಸಿಸುವ ಜನರಿಗೆ ದಿನನಿತ್ಯ ನರಕದರ್ಶನವಾಗುತ್ತಿರುವ ಜೊತೆಗೆ ಧೂಳಿನ ಸ್ನಾನವೂ ಫುಲ್ ಫ್ರೀ ಎನ್ನುವಂತಾಗಿದೆ. ಅಷ್ಟಕ್ಕೂ ಈ ಕಿರಿಕಿರಿಗೆ ಕಾರಣ ಆಗಿರೋದು ಮಾತ್ರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತಿಗೆದಾರನ ಬೇಜವಾಬ್ದಾರಿತನದಿಂದ.

ಇದು ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಜನ್ರ ಗೋಳಿನ ಕಥೆ. ಗದಗ ಜಿಲ್ಲಾ ಕೇಂದ್ರದಿಂದ 12ಕಿಲೋ ಮೀಟರ್ ದೂರದಲ್ಲಿದೆ ಈ ಗ್ರಾಮ. ಆದ್ರೆ ಇಲ್ಲಿನ ಜನ್ರ ಗೋಳು ಮಾತ್ರ ಜಿಲ್ಲಾಡಳಿತಕ್ಕೆ ಕೇಳ್ತಿಲ್ಲ. ಲಕ್ಕುಂಡಿ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿದೆ. ಹೀಗಾಗಿ ಎಲ್ಲ ವಾಹಗಳ ಸಂಚಾರ ಗ್ರಾಮದಲ್ಲಿ ಡೈವರ್ಟ್ ಮಾಡಲಾಗಿದೆ. ಗ್ರಾಮದಲ್ಲಿ ರಸ್ತೆ ಕೂಡ ಸಂಪೂರ್ಣ ಹದಗೆಟ್ಟಿದೆ.

ಉಪಹಾರ ಸೇರ್ತ್ತಿದೆ ಧೂಳು
ಲಾರಿ, ಬಸ್​ಗಳು ಸೇರಿದಂತೆ ನಿತ್ಯ ಸಾವಿರ ಸಾವಿರ ವಾಹನಗಳು ಸಂಚಾರ ಮಾಡುತ್ತವೆ. ಗುತ್ತಿಗೆದಾರ ಧೂಳು ಏಳದಂತೆ ನಿತ್ಯ ಮೂರು ಬಾರಿ ರಸ್ತೆಗೆ ನೀರು ಹಾಕಬೇಕು. ಆದ್ರೆ, ಬೆಳಗ್ಗೆ 1 ಬಾರಿ ಕಾಟಾಚಾರಕ್ಕೆ ಅಂತಾ ನೀರು ಸುರಿದು ಸುಮ್ಮನಾಗುತ್ತಿದ್ದಾರಂತೆ. ಹೀಗಾಗಿ ಗ್ರಾಮ ಧೂಳಿನಿಂದಲೇ ಆವರಿಸಿದೆ. ಅದ್ರಲ್ಲೂ ಇಲ್ಲಿನ ಬಸ್ ನಿಲ್ದಾಣ ಸಮೀಪದಲ್ಲಿ ರಸ್ತೆ ಅಕ್ಕಪಕ್ಕದಲ್ಲೇ ಹತ್ತಾರು ಹೋಟೆಲ್​ಗಳಿವೆ. ವಾಹನ ಸಂಚರಿಸುವ ವೇಳೆ ಧೂಳು ನೇರವಾಗಿ ಹೋಟೆಲ್​ನ ಉಪಹಾರ ಸೇರ್ತ್ತಿದೆ. ಮೊದ್ಲೇ ಕೊರೊನಾ ಕಂಟಕದಿಂದ ಕಂಗೆಟ್ಟ ವ್ಯಾಪರಸ್ಥರು ಈಗ ಚೇತರಿಸಿಕೊಳ್ಳುತ್ತಿದ್ರು. ಆದ್ರೆ ಈ ಧೂಳು ಮತ್ತೆ ಮಾಲೀಕರನ್ನು ಕಂಗಾಲಾಗಿಸಿದೆ.

ಹೋಟೆಲ್ ಚೆನ್ನಾಗಿ ನಡೆದ್ರೆ ಮಾಲೀಕರ ಬದುಕು ಸಾಗುತ್ತೆ. ಈ ನಡುವೆ ‘ಕೊರೊನಾ’ದಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಮಾಲೀಕರಿಗೆ ಧೂಳು ಕಂಟಕವಾಗಿ ಪರಿಣಮಿಸಿದೆ. ವ್ಯಾಪಾರ ಪೂರ್ಣ ಕುಸಿದು ಹೋಗುತ್ತಿದೆ. ಗುತ್ತಿಗೆದಾರ ರಸ್ತೆಗೆ ಸುರಿಸುತ್ತಿರುವ ನೀರು ಕೂಡ ಕೆಟ್ಟ ವಾಸನೆಯಿಂದ ಕೂಡಿದ್ದು, ಜನರು ಪರದಾಡುತ್ತಿದ್ದಾರೆ.

ಒಟ್ನಲ್ಲಿ ಇಷ್ಟು ದಿನ ಒಂದು ಕಾಟ, ಈಗ ನೋಡಿದ್ರೆ ಮತ್ತೊಂದು ಪರದಾಟ ಎನ್ನುವಂತಾಗಿದೆ ಲಕ್ಕುಂಡಿ ಜನ್ರ ಪರಿಸ್ಥಿತಿ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲ ಅಂದ್ರೆ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿ ಮೊದಲೇ ಪರದಾಡುತ್ತಿರುವ ಹೋಟೆಲ್ ಮಾಲೀಕರ ಅನ್ನಕ್ಕೂ ಕಲ್ಲು ಬೀಳುವ ಸ್ಥಿತಿ ಎದುರಾಗಲಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಅಲರ್ಟ್ ಆಗಬೇಕಿದೆ.

ವೈದ್ಯರ ದಿವ್ಯ ನಿರ್ಲಕ್ಷ್ಯ: MRI ಸ್ಕ್ಯಾನಿಂಗ್ ವೇಳೆ ಪತ್ನಿಯ ಎದುರೇ ಹಾರಿ ಹೋಯ್ತು ಪತಿಯ ಜೀವ..