ಜು.15ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ
ಬಾಕಿ ಇರುವ ಬಿಲ್ ಹಣವನ್ನು ಜು.15ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಬೆಂಗಳೂರು: ಬಾಕಿ ಇರುವ ಬಿಲ್ ಹಣವನ್ನು ಜು.15ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ (Strike) ಮಾಡುವುದಾಗಿ ಗುತ್ತಿಗೆದಾರರ ಸಂಘ (State Contractors Association) ಕಾಂಗ್ರೆಸ್ (Congress) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕಾಮಗಾರಿ ಬಿಲ್ ತಡೆಹಿಡಿಯಲಾಗಿದೆ. ಈ ಹಿನ್ನೆಲೆ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿ ಬಿಲ್ ಮೊತ್ತ ಬಿಡುಗಡೆಗೆ ಆಗ್ರಹಿಸಿತ್ತು. ಸಂಘದ ಮನವಿಗೆ ಸ್ಪಂದಿಸಿದ್ದ ಸರ್ಕಾರ ಜೂನ್ 28ರಂದು ಸುತ್ತೋಲೆ ಹೊರಡಿಸಿತ್ತು.
ಆದರೆ ಇದೀಗ ಸುತ್ತೋಲೆ ಹೊರಡಿಸಿ ಒಂದು ವಾರ ಕಳೆದರು ಬಿಲ್ ಮೊತ್ತ ಬಿಡುಗಡೆಯಾಗಿಲ್ಲ. ಒಂದೂವರೆ ತಿಂಗಳಿಂದ ಹಣ ಬಿಡುಗಡೆ ಮಾಡದಿದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಣ್ಣೊರೆಸುವ ತಂತ್ರ ಕೈಬಿಟ್ಟು ಕಾಮಗಾರಿ ಬಿಲ್ ಬಿಡುಗಡೆ ಮಾಡಬೇಕು. ಜುಲೈ 15ರೊಳಗೆ ಬಿಲ್ ಮೊತ್ತ ಬಿಡುಗಡೆ ಮಾಡದಿದ್ದರೇ ರಾಜ್ಯಾದ್ಯಂತ ಹೋರಾಟ ನಡೆಸಲು ಗುತ್ತಿಗೆದಾರರ ಸಂಘ ಮುಂದಾಗಿದೆ.
ಇದನ್ನು ಓದಿ: ಸರ್ಕಾರಕ್ಕೆ ಶಾಕ್ ನೀಡಿದ ಗುತ್ತಿಗೆದಾರರ ಸಂಘ: ಬಾಕಿ ಬಿಲ್ ಪಾವತಿಸದಿದ್ದರೆ ಎಲ್ಲ ಕಾಮಗಾರಿಗಳು ಬಂದ್
“ಅಧಿಕಾರಿಗಳು ತಮಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳಾದರೂ ಬಿಲ್ ಪಾವತಿಯಾಗದ ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಲ್ಲುಗಳ ನೈಜತೆಯನ್ನು ಪರಿಶೀಲಿಸಿ ನಿಯಮಾನುಸಾರವೇ ಖಾತ್ರಿಪಡಿಸಿಕೊಳ್ಳಿ. ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಿ. ನಮ್ಮ ಗುತ್ತಿಗೆದಾರರ ಅಭ್ಯಂತರ ಇರುವುದಿಲ್ಲ. ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ನೀಡದ ಸತಾಯಿಸುವುದು ಜನಪರ ಕಾಳಜಿಯುಳ್ಳ ಸರ್ಕಾರದ ಲಕ್ಷಣವಾಗಿರುವುದಿಲ್ಲ. ಸರ್ಕಾರ ಕೂಡಲೇ ಮತ್ತೂಮ್ಮೆ ಹಣ ಬಿಡುಗಡೆ ಮಾಡಲು ಸೂಚನೆ ನೀಡಬೇಕೆಂದು ಕೋರುತ್ತೇವೆ” ಎಂದು ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಪತ್ರ ಬರೆದಿದೆ.
ಸರ್ಕಾರದ ಕಾಮಗಾರಿ ಹಾಗೂ ಬಿಲ್ ಪಾವತಿಗೆ ಬ್ರೇಕ್
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಕಳೆದ ಸರ್ಕಾರದ ಕಾಮಗಾರಿ ಹಾಗೂ ಬಿಲ್ ಪಾವತಿಗೆ ಬ್ರೇಕ್ ಹಾಕಿದೆ. ಹೀಗಾಗಿ ಪಾಲಿಕೆಯ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಹಣ ಪಾವತಿ ತಡೆಹಿಡಯಲಾಗಿದೆ. ಕಳೆದ ಎರಡು ವರ್ಷದ ಸುಮಾರು ಎರಡು ಸಾವಿರ ಕೋಟಿ ಬಿಲ್ ಬಾಕಿ ಇದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿನ 2400 ಕೋಟಿ ರೂ. ಅಧಿಕ ಬಿಲ್ ಪಾವತಿ ಕ್ಲೀಯರ್ ಮಾಡಬೇಕಿದೆ.
ಮೇ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತದಲ್ಲಿ ಪ್ರಾರಂಭಿಸಲಾದ ಯೋಜನೆಗಳನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಹಣ ಪಾವತಿಯಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದ್ದು, ಇದು ಗುತ್ತಿಗೆದಾರರ ಸಂಘದ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 5 July 23