ಮತ್ತೆ ವಿವಾದದಲ್ಲಿ ಕುಕ್ಕೆ ಸುಬ್ರಮಣ್ಯ: ಶಿವರಾತ್ರಿ ಮಹೋತ್ಸವಕ್ಕೆ ಎರಡು ಸಂಪ್ರದಾಯಗಳ ನಡುವೆ ಕಿತ್ತಾಟ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಮತ್ತು ಮಾಧ್ವರ ನಡುವಿನ ಕಚ್ಚಾಟಕ್ಕೆ ಹೊಸ ವೇದಿಕೆ ಸಿದ್ಧವಾಗಿದೆ. ಶತಮಾನಗಳ ಹಿಂದೆ ಈ ಕ್ಷೇತ್ರದಲ್ಲಿ ಶೈವಾಗಮದ ಪ್ರಕಾರವೇ ಪೂಜೆ ನಡೆಯುತ್ತಿತ್ತು. ಶೈವ ಪದ್ಧತಿಯನ್ನು ಅನುಸರಿಸುವ ಶೃಂಗೇರಿ ಮಠದ ವ್ಯಾಪ್ತಿಗೆ ಈ ಕ್ಷೇತ್ರ ಒಳಪಟ್ಟಿತ್ತು.

ಮತ್ತೆ ವಿವಾದದಲ್ಲಿ ಕುಕ್ಕೆ ಸುಬ್ರಮಣ್ಯ: ಶಿವರಾತ್ರಿ ಮಹೋತ್ಸವಕ್ಕೆ ಎರಡು ಸಂಪ್ರದಾಯಗಳ ನಡುವೆ ಕಿತ್ತಾಟ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
Follow us
sandhya thejappa
| Updated By: Digi Tech Desk

Updated on:Mar 01, 2021 | 1:00 PM

ಉಡುಪಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಶಿವರಾತ್ರಿ ಮಹೋತ್ಸವ ಶೈವ ಮತ್ತು ವೈಷ್ಣವ ಸಂಪ್ರದಾಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಸುಬ್ರಮಣ್ಯ ದೇವಸ್ಥಾನದ ಹಿತರಕ್ಷಣಾ ಸಮಿತಿ ಶೈವ ಪದ್ಧತಿಯ ಪೂಜಾ ಕ್ರಮಕ್ಕೆ ಆಗ್ರಹಿಸಿರುವುದಕ್ಕೆ ಉಡುಪಿಯ ಮಾಧ್ವ ಸಂಪ್ರದಾಯ ಪಾಲಿಸುವ ಬ್ರಾಹ್ಮಣರು ವಿರೋಧಿಸಿದ್ದಾರೆ. ಶೈವ ಪದ್ಧತಿ ಅನುಸರಿಸಿದರೆ ಸಂಪ್ರದಾಯಕ್ಕೆ ಚ್ಯುತಿ ಆಗುತ್ತೆ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ಇಂದು ಶೈವರು-ಮಾಧ್ವರ ಜತೆ ಬೆಂಗಳೂರಿನಲ್ಲಿ ಸಭೆ ನಡೆಯುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಟಿವಿ9ಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಮತ್ತು ಮಾಧ್ವರ ನಡುವಿನ ಕಚ್ಚಾಟಕ್ಕೆ ಹೊಸ ವೇದಿಕೆ ಸಿದ್ಧವಾಗಿದೆ. ಶತಮಾನಗಳ ಹಿಂದೆ ಈ ಕ್ಷೇತ್ರದಲ್ಲಿ ಶೈವಾಗಮದ ಪ್ರಕಾರವೇ ಪೂಜೆ ನಡೆಯುತ್ತಿತ್ತು. ಶೈವ ಪದ್ಧತಿಯನ್ನು ಅನುಸರಿಸುವ ಶೃಂಗೇರಿ ಮಠದ ವ್ಯಾಪ್ತಿಗೆ ಈ ಕ್ಷೇತ್ರ ಒಳಪಟ್ಟಿತ್ತು. ಮಾಧ್ವರ ಪ್ರಭಾವ ಹೆಚ್ಚಾದ ನಂತರ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ನಂತರ ವೈಷ್ಣವ ಪದ್ಧತಿಯಂತೆ ಪೂಜಾ ವಿಧಾನ ಆರಂಭವಾಯಿತು. ಆದರೆ ಮೂಲ ಪದ್ಧತಿಯಲ್ಲೇ ಆರಾಧನೆ ನಡೆಯಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಿತರಕ್ಷಣಾ ಸಮಿತಿ ಆಗ್ರಹಿಸಲಾರಂಭಿಸಿದೆ.

ಮುಜರಾಯಿ ಇಲಾಖೆಗೆ ಮನವಿ 2007 ರಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲೂ ಶೈವಾಗಮ ಪೂಜೆ ನಡೆಯಬೇಕೆಂದು ಆದೇಶವಾಗಿದೆ ಎನ್ನುವುದು ಸಮಿತಿಯ ವಾದ. ಹಾಗಾಗಿ ಈ ಬಾರಿ ಶಿವರಾತ್ರಿಯ ದಿನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೈವಾಗಮ ಪ್ರಕಾರ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಮಾಧ್ವರನ್ನು ಕೆರಳಿಸಿದೆ. ಮಾಧ್ವ ಸಂಪ್ರದಾಯದ ಮೂಲ ಕೇಂದ್ರ ಉಡುಪಿಯಲ್ಲಿ ಸೇರಿದ ಮಾಧ್ವ ಪಂಡಿತರು, ಸಂಪ್ರದಾಯ ಬದಲಿಸಬೇಡಿ ಎಂದು ಆಗ್ರಹಿಸಿದ್ದಾರೆ. ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿಯ ಪ್ರಮುಖರು ಮಾತನಾಡಿ ಹಳೆಯ ಸಂಪ್ರದಾಯವನ್ನು ಉಳಿಸಿ. ಅಷ್ಟ ಮಂಗಲದಲ್ಲಿ ತೋರಿಬಂದಿರುವುದೆಲ್ಲಾ ಸತ್ಯವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಸುಬ್ರಹ್ಮಣ್ಯ ಸ್ವಾಮಿಯ ತಂದೆ ಈಶ್ವರ ದೇವರು. ಹಾಗಾಗಿ ಶಿವರಾತ್ರಿಯನ್ನು ಶೈವಾಗಮದಲ್ಲಿ ನಡೆಸದಿದ್ದರೆ ಅಪಚಾರವಾಗುತ್ತದೆ ಎನ್ನುವುದು ಸುಬ್ರಹ್ಮಣ್ಯ ಭಕ್ತರ ಆರೋಪ. ಆದರೆ ಉಡುಪಿಯ ಬ್ರಾಹ್ಮಣರು ಹೇಳುವಂತೆ ಪೂಜೆಯಲ್ಲಿ ಅಪಚಾರವಾಗಿದ್ದರೆ ಗ್ರಾಮದ ಜನರಿಗೆ ತೊಂದರೆ ಬರಬೇಕಿತ್ತು. ಅನಾಹುತಗಳು ಸಂಭವಿಸಬೇಕಿತ್ತು. ಕಳೆದ ಏಳು ಶತಮಾನಗಳಿಂದ ಯಾವುದೇ ತೊಂದರೆಯಾಗಿಲ್ಲವೆಂದರೆ ಪೂಜಾ ಪದ್ಧತಿ ಸರಿಯಾಗಿದೆ ಎಂದೇ ಅರ್ಥ ಎಂಬ ವಾದ ಮಂಡಿಸುತ್ತಾರೆ.

ಮಾಧ್ವರು ಈ ದೇವಸ್ಥಾನವನ್ನು ಅತಿಕ್ರಮಣ ಮಾಡಿಲ್ಲ. 700 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಕ್ರಮಬದ್ಧ ಪೂಜೆ ನಡೆಯದೇ ಇದ್ದಾಗ ಮಧ್ವಾಚಾರ್ಯರು ತಮ್ಮ ಸಹೋದರರಾದ ವಿಷ್ಣುತೀರ್ಥರನ್ನು ನಿಯೋಜಿಸಿ ಪೂಜಾಕ್ರಮ ಸರಿಪಡಿಸಿದರು. ಹಾಗಾಗಿ ಇರುವ ಕ್ರಮವನ್ನೇ ಮುಂದುವರೆಸಬೇಕು ಈ ರೀತಿಯ ಬದಲಾವಣೆಗಳಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ. ಸಂಪ್ರದಾಯಕ್ಕೆ ಚ್ಯುತಿಯಾಗುತ್ತದೆ. ಶೈವಾಗಮ ಪ್ರಕಾರ ಪೂಜೆ ನಡೆಸಲು ನಾವು ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಮಡೆಸ್ನಾನದಿಂದ ವಿವಾದದ ಕೇಂದ್ರಬಿಂದುವಾಗಿದ್ದ ಕುಕ್ಕೆ ಸುಬ್ರಮಣ್ಯ ಕ್ಷೇತ್ರ ಶಿವರಾತ್ರಿ ಪೂಜೆಯಿಂದಾಗಿ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಎರಡು ಗುಂಪುಗಳ ನಡುವಿನ ವಿವಾದ ಈಗ ಮುಜರಾಯಿ ಇಲಾಖೆಯ ಅಂಗಳ ತಲುಪಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ಕುತೂಹಲ ಈಗ ಕುಕ್ಕೆಯಲ್ಲಿ ಮೂಡಿದೆ.

ಇದನ್ನೂ ಓದಿ

ದೇವಾಲಯದ ಹುಂಡಿ ಕಳ್ಳತನ, ನಾಣ್ಯಬಿಟ್ಟು ನೋಟು ಕದ್ದೊಯ್ದ ಖದೀಮರು

ಶಿವರಾತ್ರಿಗೆ ರಾಬರ್ಟ್​ ದರ್ಶನ: ಕೊನೆಗೂ ಘೋಷಣೆ ಆಯ್ತು ಡಿ ಬಾಸ್​ ಸಿನಿಮಾ ರಿಲೀಸ್​ ಡೇಟ್

Published On - 10:46 am, Mon, 1 March 21