ಗದಗ: ಜೋಳ ಚೆನ್ನಾಗಿ ಬೆಳೆದರೆ ಅನ್ನದಾತರ ಬದುಕು ಬೆಳಕಾಗುತ್ತದೆ ಎನ್ನುವುದು ಮಾತ್ರ ಉತ್ತರ ಕರ್ನಾಟಕ ರೈತ ಸಮೂಹದ ಮಾತು. ರೊಟ್ಟಿ ತಿಂದು ಗಟ್ಟಿಯಾಗಿರಬೇಕು ಅಂದರೆ ಉತ್ತರ ಕರ್ನಾಟಕದ ಜೋಳ ಬೇಕೇ ಬೇಕು. ಅಷ್ಟೊಂ ದು ಬೇಡಿಕೆ ಈ ಉತ್ತರ ಕರ್ನಾಟಕದ ಬಿಳಿ ಜೋಳಕ್ಕೆ ಇದೆ. ಈ ವರ್ಷವೂ ಬಿಳಿ ಜೋಳ ಬೆಳೆ ಭರ್ಜರಿಯಾಗಿತ್ತು. ಆದರೆ, ಅಕಾಲಿಕ ಮಳೆ ಅವಾಂತರಕ್ಕೆ ಉತ್ತರ ಕರ್ನಾಟಕ ಅನ್ನದಾತರ ಬದುಕು ಸರ್ವನಾಶವಾಗಿದ್ದು, ನೆಲಕಚ್ಚಿದ ಬೆಳೆ ನೋಡಿ ಅನ್ನದಾತರು ಕಣ್ಣೀರು ಸುರಿಸುತ್ತಿದ್ದಾರೆ.
ಮಳೆ ಬಂದರೂ ಕಷ್ಟ, ಮಳೆ ಬಾರದೆ ಇದ್ದರೂ ಕಷ್ಟ. ಇದು ಉತ್ತರ ಕರ್ನಾಟಕದ ಅನ್ನದಾತರ ಸದ್ಯದ ಪರಿಸ್ಥಿತಿಯಾಗಿದ್ದು, ಮಳೆಗಾಲದಲ್ಲಿ ವಿಪರೀತ ಮಳೆಗೆ ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿ, ಗೋವಿನ ಜೋಳ, ಶೇಂಗಾ, ಹೆಸರು ಸೇರಿ ಹಲವು ಬೆಳೆಗಳು ಜಮೀನುಗಳಲ್ಲೇ ಕೊಳೆತು ರೈತರ ಬದುಕೇ ಸರ್ವನಾಶ ಮಾಡಿದೆ.
ಆದರೆ ಹಿಂಗಾರು ಬೆಳೆಗಳು ಮಾತ್ರ ಭರ್ಜರಿಯಾಗಿದ್ದವು. ಹಚ್ಚ ಹಸಿರಿನ ಜಮೀನುಗಳು ನೋಡಿ ರೈತ ಸಮುದಾಯ ಖುಷಿಯಲ್ಲಿ ಇತ್ತು. ಎಳ್ಳು ಅಮವಾಸ್ಯೆಗೆ ಭೂಮಿ ತಾಯಿಗೆ ಪೂಜೆ ಮಾಡಿ ಸಂಭ್ರಮಿಸುವ ಉತ್ಸಾಹದಲ್ಲಿ ರೈತರು ಇದ್ದರು. ಆದರೆ ನಿನ್ನೆ ರಾತ್ರಿಯಿಡೀ ಸುರಿದ ಅಕಾಲಿಕ ಮಳೆಗೆ ರೈತರ ಬದುಕೇ ಕುಸಿಯುವಂತ್ತಾಗಿದೆ.
ಜೋಳ, ಕಡಲೆ ಸೇರಿ ಹಲವು ಬೆಳೆಗಳು ಚೆನ್ನಾಗಿ ಬೆಳೆ ಬಂದಿದ್ದರಿಂದ ರೈತರು ಸಾಕಷ್ಟು ಸಾಲ ಮಾಡಿ ಗೊಬ್ಬರ, ಔಷಧ ಸಿಂಪಡಣೆ ಮಾಡಿದ್ದರು. ಆದರೆ ರಕ್ಕಸನಂತೆ ಬಂದ ಮಳೆ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಸಂಪೂರ್ಣ ನೆಲಕಚ್ಚಿಸಿದೆ.
ಹೌದು ನಿನ್ನೆ ರಾತ್ರಿಯಿಡಿ ಗುಡುಗು, ಗಾಳಿ ಸಹಿತ ಸುರಿದ ಭಾರಿ ಮಳೆಗೆ ಗದಗ ಜಿಲ್ಲೆಯ ರೈತರ ಬದುಕು ಮತ್ತೆ ಸರ್ವನಾಶವಾಗಿದೆ. ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಕುಸುಬಿ ಸೇರಿ ಹಲವು ಬೆಳೆಗಳು ಭರ್ಜರಿಯಾಗಿದ್ದವು. ಆದರೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಗದಗ ಜಿಲ್ಲೆಯಲ್ಲಿ ಸಾವಿರಾರೂ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಬೆಳ್ಳಂಬೆಳ್ಳಗೆ ಜಮೀನಿಗೆ ಬಂದು ನೋಡಿದರೆ. ಅಪಾರ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ ಮೊದಲೇ ಸಾಲದ ಸುಳಿಯಲಿ ಸಿಲುಕಿ ಒದ್ದಾಡುತ್ತಿದ್ದವರಿಗೆ ನೆಲಕಚ್ಚಿದ ಜೋಳದ ಬೆಳೆ ನೋಡಿ ಕಂಗಾಲಾಗಿದೆ. ನಮಗೆ ತಿನ್ನುವುದಕ್ಕೂ ಜೋಳ ಇಲ್ಲ. ಜಾನುವಾಗಳಿಗೂ ಮೇವು ಇಲ್ಲದಂತಾಗಿದೆ ಎಂದು ರೈತ ಬಸವರಾಜ್ ಕಣ್ಣೀರು ಹಾಕಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ರೋಣ ತಾಲೂಕುಗಳಲ್ಲಿ ಸಾವಿರಾರು ಎಕರೆ ಜೋಳದ ಬೆಳೆ ಸಂಪೂರ್ಣ ಹಾಳಾಗಿದೆ. ಜೋಳ ಈಗ ತೆನೆ ಹಿಡಿದು ಹಚ್ಚಹಸಿರಿನಿಂದ ಕಂಗೊಳಿಸುತ್ತಿತ್ತು. ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಅಕಾಲಿಕ ಮಳೆ ಅವಾಂತರ ರೈತರ ನಗುವನ್ನೆ ಕಸಿದುಕೊಂಡಿದೆ.
ಈ ನಡುವೆ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಫೋನ್ ಮಾಡಿದರೆ ಗದಗ ಜಿಲ್ಲೆಯ ಕೃಷಿ ಅಧಿಕಾರಿಗಳು ರೈತರ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ. ಬೆಳೆ ಹಾನಿಯಿಂದ ಕಣ್ಣೀರು ಹಾಕುತ್ತಿರುವ ರೈತರು ಕೃಷಿ ಇಲಾಖೆ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ನೆಲಕ್ಕೆ ಉರುಳಿದ್ದು, ಅಕ್ಷರಶಃ ಅನ್ನದಾತರನ್ನು ಕಂಗೆಡಿಸಿದೆ. ಸತತ 2 ವರ್ಷ ಮಳೆರಾಯ ರೈತರ ಅನ್ನವನ್ನೇ ಕಸಿದುಕೊಂಡಿದ್ದು, ಈಗ ರೈತ ಸಮುದಾಯ ದಿಕ್ಕು ತೋಚದಂತಾಗಿದೆ ಎಂದು ಜೆಲ್ಲಿಗೇರಿ ರೈತ ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.
ಜಮೀನುಗಳಿಗೆ ಭೇಟಿ ನೀಡಿ ಹಾನಿಯಾದ ಜೋಳ ಸೇರಿ ಹಲವು ಬೆಳೆಗಳ ಪರಿಶೀಲನೆ ಮಾಡಿದ್ದೇವೆ. ನಾಳೆಯೊಳಗೆ ಗದಗ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ವರದಿ ಸಿದ್ಧವಾಗಲಿದೆ ಎಂದು ಗದಗ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿವಿ9ಗೆ ತಿಳಿಸಿದ್ದಾರೆ.
ಹಾನಿಯಾಗಿರುವ ಬೆಳೆ:
ಬಿಳಿ ಜೋಳ 30000 ಹೇಕ್ಟರ್ ಪ್ರದೇಶ, ಕಡಲೆ 150000ಸಾವಿರ ಹೇಕ್ಟರ್ ಪ್ರದೇಶ, ಕುಸುಬೆ 25000 ಹೇಕ್ಟರ್ ಪ್ರದೇಶ, ಸೂರ್ಯಕಾಂತಿ 10000 ಹೇಕ್ಟರ್ ಪ್ರದೇಶ.
ಕೊಚ್ಚಿ ಹೋಯ್ತು ಕಾಫಿ.. ಕರಗಿ ಹೋಗ್ತಿದೆ ಭತ್ತ: ವರ್ಷದ ಕೂಳನ್ನೇ ಕಿತ್ತುಕೊಂಡ ಅಕಾಲಿಕ ಮಳೆ