ವಸತಿ ಶಾಲೆ ಬಂದ್​ ನಿರ್ಧಾರ ಡಿಸಿ ವಿವೇಚನೆಗೆ, ವೈಕುಂಠ ಏಕಾದಶಿಯಂದು ದೇಗುಲಗಳಲ್ಲಿ ಜನಸಂದಣಿಗೆ ಅವಕಾಶವಿಲ್ಲ: ಅರಗ ಜ್ಞಾನೇಂದ್ರ

ಕೊವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಒಂದೂವರೆ ಲಕ್ಷಕ್ಕೆ ಹೆಚ್ಚಿಸಲು ಸರ್ಕಾರವು ನಿರ್ಧರಿಸಿತು. ಹೋಂ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಸರ್ಕಾರ ತೀರ್ಮಾನಿಸಿದೆ.

ವಸತಿ ಶಾಲೆ ಬಂದ್​ ನಿರ್ಧಾರ ಡಿಸಿ ವಿವೇಚನೆಗೆ, ವೈಕುಂಠ ಏಕಾದಶಿಯಂದು ದೇಗುಲಗಳಲ್ಲಿ ಜನಸಂದಣಿಗೆ ಅವಕಾಶವಿಲ್ಲ: ಅರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ


ಬೆಂಗಳೂರು: ಕರ್ನಾಟಕದ ವಿವಿಧೆಡೆ ವಸತಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಶಾಲೆಗಳನ್ನು ಬಂದ್ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ರಾಜ್ಯದಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಯಿತು. ಸಭೆಯ ನಂತರ ಗೃಹ ಸಚಿವರು ಸಭೆಯ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು.

ಸಭೆ ನಡೆಯುತ್ತಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗೆ ಕರೆ ಮಾಡಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಕೊವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಒಂದೂವರೆ ಲಕ್ಷಕ್ಕೆ ಹೆಚ್ಚಿಸಲು ಸರ್ಕಾರವು ನಿರ್ಧರಿಸಿತು. ಹೋಂ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲು, ಬೂಸ್ಟರ್ ಡೋಸ್‌ ನೀಡಿಕೆ ಮತ್ತಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿತು.

ನ 13ರ ಗುರುವಾರ ವೈಕುಂಠ ಏಕಾದಶಿಯಂದು ಸಂಪ್ರದಾಯದಂತೆ ದೇಗುಲಗಳಲ್ಲಿ ಪೂಜೆಗೆ ಅವಕಾಶವಿದೆ. ಆದರೆ ಹೆಚ್ಚಿನ ಜನ ಸೇರಬಾರದು ಎಂಬ ನಿಯಮ ಜಾರಿಗೊಳಿಸಲಾಗಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಮಕ್ಕಳ ವಾರ್ಡ್‌, ಬೆಡ್‌ಗಳನ್ನು ಮೀಸಲಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿಯೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ಬಾರಿಯಂತೆ ಈ ಮಾರುಕಟ್ಟೆಗಳನ್ನು ವಿಕೇಂದ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಈ ಆದೇಶ ನಾಳೆಯಿಂದಲೇ (ಜ.12) ಜಾರಿಗೆ ಬರಲಿದೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಮಾಸ್ಕ್‌ ಮತ್ತು ದೈಹಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ಮಕ್ಕಳಿಗೆ ಯಾವುದೇ ರೀತಿಯ ಔಷಧ ಕೊರತೆಯಾಗಬಾರದು. ಆಕ್ಸಿಜನ್‌, ಔಷಧವನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಸಂಗ್ರಹಿಸಡಬೇಕು. ವೀಕೆಂಡ್ ಕರ್ಫ್ಯೂ ಮುಂದುವರಿಕೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಜ.14ರಂದು ಪ್ರಧಾನಿ ಸಭೆ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮ ಉಲ್ಲಂಘನೆ ಬಗ್ಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಪಾದಯಾತ್ರೆಯಲ್ಲಿ ಭಾಗಿಯಾದ ಬಹುತೇಕರಿಗೆ ಸೋಂಕು ಬಂದಿದೆ. ಸೋಂಕು ಬಂದಿದ್ದರೂ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಮೇಕೆದಾಟು ವಿಚಾರವಾಗಿ ಸಿದ್ದರಾಮಯ್ಯ ದಾರಿ ತಪ್ಪಿಸುತ್ತಿದ್ದಾರೆ. ಮೇಕೆದಾಟು ಜಾರಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಬಾರ್​, ವೈನ್​ಶಾಪ್​ಗಳ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಐಟಿ-ಬಿಟಿ ಕಚೇರಿಗಳು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯ ಅನ್ವಯವೇ ಕಾರ್ಯನಿರ್ವಹಿಸಲಿವೆ. ಹಾಲಿ ಮಾರ್ಗಸೂಚಿ ಯಥಾವತ್ತಾಗಿ ಮುಂದುವರಿಯುತ್ತದೆ ಎಂದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ಸೋಂಕು ಹಿನ್ನೆಲೆ; ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಇದನ್ನೂ ಓದಿ: PM Modi: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ, ಒಮಿಕ್ರಾನ್​; ಜ.13ರಂದು ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

Published On - 5:36 pm, Tue, 11 January 22

Click on your DTH Provider to Add TV9 Kannada