ಮಂಗಳೂರು: ಡ್ರ್ಯಾಗನ್ ನಾಡು ಚೀನಾದಲ್ಲಿ ಈಗಾಗಲೇ 700ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ವೈರಸ್ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಮಾರಕ ಕೊರೊನಾ ವೈರಸ್ನ ಭಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕುಂಪಲ ನಿವಾಸಿ ಗೌರವ್ ಎಂಬುವನನ್ನು ಹಾಂಗ್ ಕಾಂಗ್ನಲ್ಲೇ ತಡೆಯಲಾಗಿದೆ. ಇದರಿಂದ ಸೋಮವಾರ ನಿಗದಿಯಾಗಿದ್ದ ಗೌರವ್ ಮದುವೆ ಸಮಾರಂಭ ಮುಂದೂಡಲಾಗಿದೆ.
ಮಂಗಳೂರಿನ ಗೌರವ್ ಹಾಂಗ್ ಕಾಂಗ್, ಸಿಂಗಾಪುರ, ಥೈವಾನ್ ನಡುವೆ ಸಂಚರಿಸುವ ಸ್ಟಾರ್ ಕ್ರೂಸ್ ಪ್ರವಾಸಿ ಹಡಗಿನ ಸಿಬ್ಬಂದಿಯಾಗಿದ್ದಾರೆ. 1,700 ಪ್ರಯಾಣಿಕರಿರುವ ಕ್ರೂಸ್ ಹಡಗಿನಲ್ಲಿ ಹಲವರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಡಗನ್ನು ತಟಕ್ಕೆ ತರಲು ನಿರ್ಬಂಧ ಹೇರಿ, ಸಮುದ್ರದಲ್ಲೇ ಕ್ರೂಸ್ಗೆ ದಿಗ್ಬಂಧನ ಹಾಕಲಾಗಿದೆ. ಫೆ. 4ಕ್ಕೆ ಮಂಗಳೂರಿಗೆ ಗೌರವ್ ಆಗಮಿಸಬೇಕಿತ್ತು. ಹೀಗಾಗಿ ಫೆ. 10ಕ್ಕೆ ನಿಗದಿಯಾಗಿದ್ದ ಕುಂಪಲದ ಗೌರವ್ ಮದುವೆ ಮುಂದೂಡಿಕೆ ಮಾಡಲಾಗಿದೆ.
ಯುಕೋಮದಲ್ಲಿ ಕಾರವಾರ ಮೂಲದ ಯುವಕ:
ಕೊರೊನ ವೈರಸ್ ಎಫೆಕ್ಟ್ನಿಂದ ಕಾರವಾರ ಮೂಲದ ಯುವಕನನ್ನು ಜಪಾನಿನ ಯುಕೋಮದಲ್ಲಿ ತಡೆಹಿಡಿಯಲಾಗಿದೆ. ಇದರಿಂದ ಕಾರವಾರದ ಅಭಿಷೇಕ್ ಮಗರ್ ಕುಟುಂಬ ಆತಂಕದಲ್ಲಿದ್ದಾರೆ. ಮಗನನ್ನು ರಕ್ಷಿಸಿ ಕರೆತರುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅಭಿಷೇಕ್ ತಂದೆ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪದ್ಮನಾಭನಗರ ನಿವಾಸಿಯಾಗಿದ್ದ ಅಭಿಷೇಕ್, ಕಳೆದ 3 ತಿಂಗಳಿನಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಜಪಾನ್ನಿಂದ ಸಿಂಗಾಪುರಕ್ಕೆ ಹೋಗಿ ಕ್ರೂಸ್ ಹಡಗು ವಾಪಸ್ ಆಗುತ್ತಿತ್ತು. ಹಡಗಿನಲ್ಲಿದ್ದ 40 ಮಂದಿಗೆ ಕೊರೊನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಇನ್ನಷ್ಟು ಮಂದಿಗೆ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಆತಂಕದಿಂದ ಜಪಾನಿನ ಯುಕೋಮದಲ್ಲಿ ಸಮುದ್ರದ ನಡುವೆಯೇ ಹಡಗನ್ನು ತಡೆಯಲಾಗಿದೆ.
Published On - 12:45 pm, Sat, 8 February 20