ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ಎರಡನೇ ಅಲೆ ಪ್ರಾರಂಭಗೊಂಡಿದೆ. ಕರ್ನಾಟಕದಲ್ಲಿ ಹರಡುತ್ತಿರುವ ಕೊರೊನಾ ಅಲೆಯನ್ನು ಮುಂದಿನ ದಿನಗಳಲ್ಲಿ ಹೇಗೆ ನಿಯಂತ್ರಿಸುವುದು ಎಂಬುದರ ಕುರಿತಾಗಿ ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು.
ಸಭೆಯ ಬಳಿಕ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಎಲ್ಲಾ ತಾಂತ್ರಿಕ ಸಲಹಾ ಸಮಿತಿ ಹಾಗೂ ಸರ್ಕಾರದ ವಿಷನ್ ಗ್ರೂಪ್ ಪರಿಣಿತರ ಜತೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಎರಡನೇ ಅಲೆಯಿಂದ ಮುಂದಿನ ದಿನಗಳಲ್ಲಿ ಹೇಗೆ ಹೆಚ್ಚಾಗುತ್ತದೆ ಹೇಗೆ ನಿಯಂತ್ರಣ ಮಾಡಬೇಕು ಎಂಬುದರ ಕುರಿತಾಗಿ ಸವಿಸ್ತಾರವಾಗಿ ಚರ್ಚೆ ನಡೆಸಿದ್ದೇವೆ. ಕೊರೊನಾ ಒಂದು ಅಲೆ 80-120 ದಿನ ಇರುತ್ತದೆ ಎಂದು ಹೇಳಿದ್ದಾರೆ. ಇದು ಇನ್ನೂ ಪ್ರಾರಂಭ. ಇನ್ನು ಎರಡು ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಮೇ 2ನೇ ವಾರದಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಆಸ್ಪತ್ರೆ ಅಗತ್ಯ ಇರುವವರ ಸಂಖ್ಯೆ ಕೂಡ ಹೆಚ್ಚಾಗಬಹುದು. ಮಹಾರಾಷ್ಟ್ರದಿಂದ ಹೆಚ್ಚು ಸೋಂಕು ಬರುವ ಸಾಧ್ಯತೆ ಇದೆ. ಇವುಗಳನ್ನು ವರದಿ ರೀತಿಯಲ್ಲಿ ಸರ್ಕಾರಕ್ಕೆ ಕೊಡಿ ಎಂದು ಕೇಳಿದ್ದೇನೆ. ವರದಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಉನ್ನತ ಮಟ್ಟದ ಸಚಿವರ ಜತೆಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಭಿಪ್ರಾಯ ಹಂಚಿಕೊಂಡರು. ಕೊರೊನಾ ಮೆಡಿಸಿನ್, ಖಾಸಗಿ ಆಸ್ಪತ್ರೆಗಳಲ್ಲೂ ಮೆಡಿಸಿನ್, ಹಾಸಿಗೆ ಸಿದ್ಧತೆ ಬಗ್ಗೆಯೂ ಹೇಳಿದರು. ಆರ್ಥಿಕ ಚಟುವಟಿಕೆ ತಡೆಯುವ ಯಾವುದೇ ಸಲಹೆ ಕೊಡುವುದಿಲ್ಲ ಎಂದು, ಯಾವುದಾದರೂ ರೀತಿಯಲ್ಲಿ ಗುಂಪನ್ನು ಕಡಿವಾಣ ಹಾಕಲೇಬೇಕು ಎಂದು ಸೂಚನೆ ನೀಡಿದರು.
ಅಧಿಕೃತ ವರದಿ ಕೊಡುವವರೆಗೆ ಬಹಿರಂಗವಾಗಿ ಹೇಳುವುದು ಸರಿಯಾದ ಕ್ರಮ ಅಲ್ಲ. ವರದಿ ಸಿದ್ಧವಾಗುವುದರೊಳಗೆ ಲಾಕ್ಡೌನ್ ಬಗ್ಗೆ ಹೇಳುವುದು ತಪ್ಪಾಗುತ್ತದೆ. ಇನ್ನು ಕೊರೊನಾ ಕರ್ಪ್ಯೂ ಜಾರಿಯಾಗಿ ಒಂದು ದಿನವಷ್ಟೇ ಆಗಿದೆ. ಹೀಗಾಗಿ ಜನ ಹೇಗೆ ಸ್ಪಂದಿಸುತ್ತಾರೆ, ಕ್ರಮಗಳನ್ನು ಹೇಗೆ ಪಾಲನೆ ಮಾಡುತ್ತಾರೆ ನೋಡಬೇಕು ಎಂದು ಮಾಹಿತಿ ಹಂಚಿಕೊಂಡರು.
ರಾಜ್ಯದಲ್ಲಿ ಯುಗಾದಿ ಹಬ್ಬಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ ಹಬ್ಬ ಆಚರಣೆಗೆ ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ. ನಿರ್ಲಕ್ಷ್ಯ ವಹಿಸಿದರೆ ಕೊರೊನಾ ಸೋಂಕು ಅಂಟಿಕೊಳ್ಳುತ್ತದೆ ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ನಿಮ್ಮ ಊರಿಗೆ ವೈರಸ್ ಹಬ್ಬುವ ಸಾಧ್ಯತೆಯೂ ಇರುತ್ತದೆ. ಇದು ತಕ್ಷಣಕ್ಕೆ ತಿಳಿಯುವುದಿಲ್ಲ. 10 ದಿನಗಳ ಬಳಿಕ ಇದರ ಪರಿಣಾಮ ಅರಿವಾಗುತ್ತಾ ಹೋಗುತ್ತದೆ ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದಿರಿ ಎಂದು ಸಚಿವ ಸುಧಾಕರ್ ಮನವಿ ಮಾಡಿಕೊಂಡರು.
ಕೊರೊನಾ ಎರಡನೇ ಅಲೆ ಹಬ್ಬುತ್ತಿರುವ ಕುರಿತಾಗಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಸದ್ಯ ಕೊರೊನಾ 2ನೇ ಅಲೆ ಆರಂಭವಾಗಿದೆ. ಮೇ 15ರ ವೇಳೆಗೆ ಕೊವಿಡ್ ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲೇ 15 ಸಾವಿರ ಪ್ರಕರಣಗಳು ಬರಬಹುದು ಎಂದು ಹೇಳಿದರು.
ಅಲ್ಲಲ್ಲಿ ಜನರು ಗುಂಪು ಸೇರುವುದನ್ನು ತಡೆಯಬೇಕಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು. ಐಸ್ ಕ್ರೀಂ ಪಾರ್ಲರ್, ಚಾಟ್ ಸೆಂಟರ್ ಮುಂದೆ ಜನ ಸಾಲು ಸಾಲಾಗಿ ನಿಲ್ಲುತ್ತಿದ್ದಾರೆ. ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಾಗಬೇಕು. ಯಾವುದೇ ವಾಣಿಜ್ಯ ಚಟುವಟಿಕೆ ಅಡ್ಡ ಬರದಂತೆ ಕ್ರಮ ಕೈಗೊಳ್ಳಬೇಕು. 144 ಸೆಕ್ಷನ್ ಹೆಚ್ಚು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದೇವೆ. ಹಾಗೂ ಜಾತ್ರೆ ಮದುವೆ ಸಂದರ್ಭದಲ್ಲಿ ನಿಯಂತ್ರಣ ತರಬೇಕು ಎಂದು ಸೂಚನೆ ನೀಡಿದ್ದಾರೆ.
ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಮೂವರು ಸಿಬ್ಬಂದಿಗೆ ಕೊರೊನಾ ದೃಢ
ಕೊರೊನಾ 2 ನೆ ಅಲೆಯ ಆರ್ಭಟ ಹೆಚ್ಚಾಗುತ್ತಿದ್ದು, ಸರ್ಕಾರಿ ಆಸ್ವತ್ರೆಯ ಮೂವರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಸಿಬ್ಬಂದಿಗೆ ಸೋಂಕು ಹಿನ್ನೆಲೆ ಆಸ್ವತ್ರೆಗೆ ಬಂದು ಹೋದ ರೋಗಿಗಳಲ್ಲಿ ಆತಂಕ ಹೆಚ್ಚಾಗಿದೆ. ಮೂವರನ್ನು ಐಸೋಲೇಷನ್ಗೆ ವೈದ್ಯರು ರವಾನಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತನಿಗೆ ಬೆಡ್ ನೀಡದಿದ್ದಕ್ಕೆ ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ
ಕೊರೊನಾಗೆ ಲಸಿಕೆ ಬದಲಿಗೆ ಬರಲಿದೆಯಾ ಗುಳಿಗೆ? ಚುಚ್ಚುಮದ್ದಿಗೆ ಹೆದರುವವರಿಗೆ ಇಲ್ಲಿದೆ ಸಿಹಿಸುದ್ದಿ