ಮಂಡ್ಯ: ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಜನವರಿ 19ವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಸ್.ಅಶ್ವತಿ ಆದೇಶ ಹೊರಡಿಸಿದ್ದಾರೆ. ಮದುವೆ, ನಿಶ್ಚಿತಾರ್ಥ, ಬೀಗರ ಔತಣಕ್ಕೆ 100 ಜನರಿಗೆ ಅವಕಾಶವಿದೆ. ಅಂತ್ಯಸಂಸ್ಕಾರ, ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು 30 ಜನರಿಗೆ ಅವಕಾಶವಿದೆ. ದೇಗುಲಗಳಲ್ಲಿ ದೇವರ ದರ್ಶನಕ್ಕೆ ಒಂದು ಬಾರಿ 50 ಜನರಿಗೆ ಅವಕಾಶ ನೀಡಲಾಗಿದೆ. ಪಬ್, ಬಾರ್ ಮತ್ತು ರೆಸ್ಟೊರೆಂಟ್, ಹೋಟೆಲ್, ಚಿತ್ರಮಂದಿರ, ಸಭಾಂಗಣ, ಈಜುಕೊಳ, ಜಿಮ್, ಕ್ರೀಡಾಂಗಣಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಅವುಗಳ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.
ವಿಶೇಷ ದಿನಗಳಲ್ಲಿಯೂ ದೇಗುಲ, ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧಗಳಿಂದ ವಿನಾಯ್ತಿ ಇರುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಜನವರಿ 19ರವರೆಗೆ ಎಲ್ಲ ಜಾತ್ರೆ, ದನದ ಜಾತ್ರೆ, ಗ್ರಾಮ ದೇವತೆ ಹಬ್ಬ, ಕೊಂಡೋತ್ಸವ, ಹಾಗೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಬೃಹತ್ ಱಲಿ, ಧರಣಿ, ಪ್ರತಿಭಟನೆಗಳಿಗೂ ಅವಕಾಶ ಇರುವುದಿಲ್ಲ. ನೈಟ್ ಕರ್ಫ್ಯೂ ವೇಳೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಇರುತ್ತದೆ.
ಆಹಾರ, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿ, ಮೀನು, ಮಾಂಸ, ಹಾಲಿನ ಬೂತ್, ಬೀದಿ ವ್ಯಾಪಾರಕ್ಕೆ ಕೊವಿಡ್ ಶಿಷ್ಟಾಚಾರಗಳ ಅನ್ವಯ ಅವಕಾಶ ಇರುತ್ತದೆ. ಹೊಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗಷ್ಟೇ ಅವಕಾಶವಿದ್ದು ಉಳಿದೆಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೆಳಗಾವಿ: ದೇಗುಲ ದರ್ಶನಕ್ಕೆ ನಿರ್ಬಂಧ
ಬೆಳಗಾವಿಗೆ ಹೊಂದಿಕೊಂಡಂತೆ ಇರುವ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ, ಒಮಿಕ್ರಾನ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ 9 ಪ್ರಮುಖ ದೇಗುಲಗಳ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಜಾತ್ರೆ, ಉತ್ಸವ ನಡೆಸಬಾರದೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನ ಸಿಗುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಮ್ಮ, ಬಡಕುಂದ್ರಿ ಹೊಳೆಮ್ಮ ಸೇರಿದಂತೆ 9 ದೇವಸ್ಥಾನಗಳ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ದೇವಸ್ಥಾನಗಳ ಮುಂದಿನ ಅಂಗಡಿ ಮುಂಗಟ್ಟು ಸಹ ಬಂದ್ ಮಾಡುವಂತೆ ಅದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ 24ಗಂಟೆಯಲ್ಲಿ 90,928 ಕೊರೊನಾ ಕೇಸ್ಗಳು ದಾಖಲು, ನಿನ್ನೆಗಿಂತಲೂ ಶೇ.56ರಷ್ಟು ಹೆಚ್ಚು; 325 ಮಂದಿ ಸಾವು