ತುಮಕೂರು: ಅಷ್ಟೋ ಇಷ್ಟೋ ದುಡ್ಡು ಹೊಂದಿಸಿ, ನೂರಾರು ಕನಸು ಕಂಡಿದ್ದವರೆಲ್ಲ ಇಂದು ಪರದಾಡುವಂತಾಗಿದೆ. ಅತ್ತ ಹಣವೂ ಇಲ್ದೆ, ಇತ್ತ ಹಣ ಪಡೆದವರೂ ಪತ್ತೆಯಾಗದೆ ನ್ಯಾಯಕ್ಕಾಗಿ ಈ ಮಹಿಳೆಯರು ಅಂಗಲಾಚುತ್ತಿದ್ದಾರೆ. ತುಮಕೂರಿನ ಮಂಜುನಾಥ್ ನಗರಲ್ಲಿ ವಾಸವಾಗಿದ್ದ ರಜನಿ ಹಾಗೂ ಕೃಷ್ಣಮೂರ್ತಿ ದಂಪತಿ, ಸುಮಾರು 30 ವರ್ಷದಿಂದಲೂ ಚೀಟಿ ಮತ್ತು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಚೀಟಿ ವ್ಯವಹಾರಕ್ಕೆ ಮೊದಲು ಬಟ್ಟೆ ವ್ಯಾಪಾರ ಮಾಡುತ್ತ ಅಕ್ಕಪಕ್ಕದವರ ವಿಶ್ವಾಸ ಗಳಿಸಿದ್ದ ದಂಪತಿ ನಂತರ ಶುರುಮಾಡಿದ್ದೇ ಚೀಟಿ ವ್ಯವಹಾರ. ಮೊದಲಿಗೆ 1 ಲಕ್ಷ, 2 ಲಕ್ಷ, 5ಲಕ್ಷದ ಚೀಟಿ ನಡೆಸುತ್ತಿದ್ದರು. ಇದನ್ನೇ ವೃತ್ತಿ ಮಾಡ್ಕೊಂಡು ಚೀಟಿ ವ್ಯವಹಾರ ಮುಂದುವರಿಸಿದ್ದರು. ಹೀಗೆ ಮೊದಲೆಲ್ಲ ಒಂದು ಚೀಟಿಗೆ ಹಣ ಹೂಡಿಕೆ ಮಾಡಿದವರು, ನಂತರ ತಮ್ಮದೇ 2, 3 ಚೀಟಿ ಹಾಕುತ್ತಾ ಬಂದಿದ್ದರು. ಜೊತೆಯಲ್ಲಿ ಅಕ್ಕಪಕ್ಕದ ಮನೆಯವರ ಬಳಿ ಹಾಗೂ ಸಂಬಂಧಿಕರಿಂದಲೂ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿಸಿದ್ದರು. ಆದರೆ, ಈಗ ಅವರು ಚೀಟಿ ಕಟ್ಟಿದ ಹಣ ಈ ದಂಪತಿ ಪಾಲಾಗಿದೆ. ಹತ್ತಾರು ಲಕ್ಷ ಮೋಸ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಚಿಟ್ ಚೀಟ್ ವೃತ್ತಾಂತ
ತಮ್ಮ ಹಣಕ್ಕೆ ಮೋಸ ಆಗಿದೆ ಅಂತಾ ಗೊತ್ತಾಗುತ್ತಿದ್ದಂತೆ ಮೋಸ ಮಾಡಿದವರ ಮನೆ ಎದುರು ಜಮಾಯಿಸಿದ ಜನ, ಅಳಲು ತೋಡಿಕೊಂಡರು. ಭವಿಷ್ಯದ ದೃಷ್ಟಿಯಿಂದ ನಂಬಿ ಹಣ ಹೂಡಿಕೆ ಮಾಡಿದ್ದರೆ ಹೀಗೆ ಮೋಸವಾಯ್ತಲ್ಲಾ ಅಂತಾ ಬೇಸರದಲ್ಲಿದ್ದರು. ಜನರ ಬಳಿ ಹಣ ಪಡೆದು ರಜನಿ, ಕೃಷ್ಣಮೂರ್ತಿ ತಮ್ಮಿಬ್ಬರು ಮಕ್ಕಳಿಗೆ ಮೈಸೂರು ಹಾಗೂ ಬೆಂಗಳೂರಲ್ಲಿ ಆಸ್ತಿ ಮಾಡಿ, ಇಲ್ಲಿರುವ ಮನೆಯನ್ನೂ ಲೀಸ್‌ಗೆ ನೀಡಿ ತಲೆ ಮರೆಸಿಕೊಂಡಿದ್ದಾರೆ ಅಂತಾ ಆರೋಪಿಸುತ್ತಾ ಇದ್ದರು.
ತುಮಕೂರಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಚೀಟಿ ಅಥವಾ ಬಡ್ಡಿ ವ್ಯವಹಾರ ಅಂತಾ ಮತ್ತೊಬ್ಬರನ್ನ ನಂಬಿಹೋಗುವ ಮುನ್ನ ಎಚ್ಚರ ಅಗತ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಮೋಸ ಮಾಡಿ ಎಸ್ಕೇಪ್ ಆಗೋರ ಸಂಖ್ಯೆಯೇ ಹೆಚ್ಚಾಗುತ್ತಿದೆ.
Published On - 2:33 pm, Sat, 6 February 21