
ಬೆಂಗಳೂರು, (ಅಕ್ಟೋಬರ್ 09) : ಮುಡಾ ಪ್ರಕರಣದಲ್ಲಿ (Muda Scam Case) ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಪೊಲೀಸ್ (Lokayukta Plice) ವರಿಷ್ಠಾಧಿಕಾರಿ ಉದೇಶ್ ಅವರ ಬದಲಾವಣೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ಜತೆಗೆ ಮುಡಾ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಮತ್ತೆ 2 ತಿಂಗಳ ಕಾಲಾವಕಾಶ ನೀಡಿದ್ದಾರೆ.
ಇನ್ನು ಲೋಕಾಯುಕ್ತ ‘ಬಿ’ ರಿಪೋರ್ಟ್ ಪ್ರಶ್ನಿಸಿರುವುದಕ್ಕೆ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತಿಳಿಸಿದೆ. ಹೀಗಾಗಿ ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ನಿವೇಶನ (Muda Case) ಹಂಚಿಕೆ ಹಗರಣ ಸಂಬಂಧ ಲೋಕಾಯುಕ್ತ ‘ಬಿ’ ರಿಪೋರ್ಟ್ (B Report) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದಿಗೆ (ಅಕ್ಟೋಬರ್ 09) ಆದೇಶ ಕಾಯ್ದಿರಿಸಿತ್ತು.
ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಬಾವಮೈದುನ ಬಿ.ಎಂ.ಮಲ್ಲಿಕಾರ್ಜುನ್, ವಿವಾದಿತ ಭೂಮಿಯ ಮೂಲ ಮಾಲೀಕ ದೇವರಾಜ್ ವಿರುದ್ಧ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಹಾಕಿರುವುದಕ್ಕೆ ಆಕ್ಷೇಪಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಪ್ರತಿಭಟನಾ ಅರ್ಜಿಯ ಸಂಬಂಧ ನ್ಯಾಯಾಲಯವು ಇಂದು ಯಾವುದೇ ಆದೇಶ ಮಾಡಿಲ್ಲ.