ಕರ್ನಾಟಕದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಓರ್ವ ಬಲಿ, ಆ್ಯಕ್ಟಿವ್​ ಕೇಸ್​​ 38ಕ್ಕೆ ಏರಿಕೆ

ರಾಜ್ಯಕ್ಕೆ ಕೊರೊನಾ ಮತ್ತೆ ಒಕ್ಕರಿಸಿದೆ. ರಾಜ್ಯಾದ್ಯಂತ 38 ಸಕ್ರಿಯ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 32 ಬೆಂಗಳೂರಿನಲ್ಲಿವೆ. ವಿಜಯನಗರ, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ಕಾಲಿಟ್ಟಿದೆ. ಕೊರೊನಾದಿಂದ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಓರ್ವ ಬಲಿ, ಆ್ಯಕ್ಟಿವ್​ ಕೇಸ್​​ 38ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ

Updated on: May 24, 2025 | 9:29 PM

ಬೆಂಗಳೂರು, ಮೇ 24: ರಾಜ್ಯಕ್ಕೆ ಕೊರೊನಾ ವೈರಸ್ (Covid-19)​ ಮತ್ತೆ ಒಕ್ಕರಿಸಿದೆ. ರಾಜ್ಯದಲ್ಲಿ ಶನಿವಾರ (ಮೇ.24) ಐವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ (Bengaluru) 85 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಶನಿವಾರ (ಮೇ.24) ವಿಜಯನಗರ ಜಿಲ್ಲೆಯಲ್ಲಿ ಒಬ್ಬರು, ಮೈಸೂರಿನಲ್ಲಿ ಇಬ್ಬರಿಗೆ ಮತ್ತು ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯನಗರ ಜಿಲ್ಲೆಯಲ್ಲಿ 54 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ​ಸೋಂಕಿತ ಮಹಿಳೆ ವಿಪರೀತ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಮಹಿಳೆ ಹೋಂ ಐಸೋಲೇಷನ್​ನಲ್ಲಿದ್ದಾರೆ. ಮಹಿಳೆ ಇತ್ತೀಚೆಗೆ ಮುಂಬೈನಿಂದ ವಾಪಸಾಗಿದ್ದಾರೆ.

ಬೆಳಗಾವಿ ಜಿಲ್ಲೆಗೂ ಕಾಲಿಟ್ಟ ಕೊರೊನಾ

ಬೆಳಗಾವಿ ಜಿಲ್ಲೆಗೂ ಕೊರೊನಾ ವೈರಸ್​ ಕಾಲಿಟ್ಟದೆ. ಬೆಳಗಾವಿ ನಗರದ ಓರ್ವ ಗರ್ಭಿಣಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಗರ್ಭಿಣಿ ನ್ಯುಮೋನಿಯಾದಿಂದ ಬಳಲುತ್ತಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್​ಒ ಡಾ.ಈಶ್ವರ ಗಡಾದಿ ಮಾಹಿತಿ ನೀಡಿದರು. ಗರ್ಭಿಣಿ ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ದೆಹಲಿಯಲ್ಲಿ ಕೊವಿಡ್ ಹೆಚ್ಚಳ; ಆಸ್ಪತ್ರೆಯಲ್ಲಿ ಸಜ್ಜಾಗಿರಲು ಸರ್ಕಾರ ಆದೇಶ
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್ ಸೋಂಕು

ಕೋವಿಡ್​ ರೋಗಿಗಳಿಗೆ ಪ್ರತ್ಯೇಕ ವಾರ್ಡ್​

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಅತ್ಯಾಧುನಿಕ 10 ಬೆಡ್​ಗಳ ICU ವಾರ್ಡ್​ ತೆರೆಯಲಾಗಿದೆ. ಪುರುಷ ಮತ್ತು ಮಹಿಳಾ ಕೋವಿಡ್​ ರೋಗಿಗಳಿಗೆ ತಲಾ 5 ಬೆಡ್​​ ಮೀಸಲು ಇಡಲಾಗಿದೆ. ಧಾರವಾಡ ಜಿಲ್ಲಾಸ್ಪತ್ರೆ ಕೊವಿಡ್​ 1ನೇ ಮತ್ತು 2ನೇ ಅಲೆಯಲ್ಲಿ ಉತ್ತಮ ಸೇವೆ ನೀಡಿತ್ತು. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಿಂದ ಜಿಲ್ಲಾಸ್ಪತ್ರೆಗೆ ರೋಗಿಗಳು ಬಂದಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಚಿವ ದಿನೇಶ್​ ಗುಂಡೂರಾವ್​ ಅವರಿಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ. ಸಲಹಾ ಸಮಿತಿ ಸೂಚನೆ ಮೇರೆಗೆ ರವಿವಾರ (ಮೇ.25) ದಿಂದ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Sat, 24 May 25