ಬೆಂಗಳೂರು: ರೂಪಾಂತರಿ ಕೊರೊನಾ ಗದ್ದಲದ ಬಳಿಕ ಲಂಡನ್‌ನಿಂದ ಭಾರತಕ್ಕೆ ವಿಮಾನ ಹಾರಾಟ ಆರಂಭವಾಗಿದೆ. ಲಂಡನ್‌ನಿಂದ ಬೆಂಗಳೂರಿಗೆ ಇಂದು ಮುಂಜಾನೆ 4.30ಕ್ಕೆ ಮೊದಲ ವಿಮಾನ ಆಗಮಿಸಿದೆ. ಲಂಡನ್‌ನಿಂದ ವಾಪಾಸಾದ ಭಾರತೀಯರಿಗೆ ಕೊವಿಡ್-19 ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಆ ಬಗ್ಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಲಾಗಿತ್ತು.
ಆದರೆ, 4.30ರ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿರುವ ಪ್ರಯಾಣಿಕರು, ಕೊವಿಡ್ ಪರೀಕ್ಷಾ ವರದಿಗಾಗಿ ಇನ್ನೂ ಕಾಯುತ್ತಿದ್ದಾರೆ. ವರದಿಗಾಗಿ 5 ಗಂಟೆಗಳಿಂದ ಕಾಯುತ್ತಿರುವ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಯೋಗಾಲಯ ತೆರೆಯದ ಹಿನ್ನೆಲೆಯಲ್ಲಿ, ಪ್ರಯಾಣಿಕರ ಹಾಗೂ ಅಧಿಕಾರಿಗಳ ಗಂಟಲು ದ್ರವ ಮಾದರಿಯನ್ನು ನಿಮ್ಹಾನ್ಸ್ಗೆ ಕಳುಹಿಸಲಾಗಿದೆ. ನಿನ್ನೆ, ಮೂರು ಗಂಟೆಯಲ್ಲಿ ವರದಿ ಬರುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದರು. ಆದರೆ, ಇಂದು 5 ಗಂಟೆ ಕಳೆದರೂ ವರದಿ ಬಂದಿಲ್ಲ. ಹಾಗಾಗಿ ಪ್ರಯಾಣಿಕರು ಸರ್ಕಾರದ ಕ್ರಮಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಲಂಡನ್‌ನಿಂದ ಆಗಮಿಸಿದವರ ಮಾಹಿತಿ ಸಂಗ್ರಹ (ಡಾಟಾ ಎಂಟ್ರಿ) ಮಾಡುತ್ತಿದ್ದ ಸಿಬ್ಬಂದಿ ಮೇಲೆ ಪ್ರಯಾಣಿಕರು ಗರಂ ಆಗಿದ್ದಾರೆ. ಪ್ರಯಾಣಿಕರನ್ನು ಸಮಾಧಾನಪಡಿಸಲು ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ. ಬೆಂಗಳೂರು, ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.
Published On - 12:04 pm, Sun, 10 January 21