ಡ್ರೈ ರನ್-2ಗೆ ಸಿದ್ಧವಾಯ್ತು ಕರುನಾಡು, ವ್ಯಾಕ್ಸಿನ್ ರಿಹರ್ಸಲ್ ಸ್ಟಾರ್ಟ್

ಮಹಾಮಾರಿ ಕೊರೊನಾಗೆ ಕೊನೆಗೂ ರಾಮಬಾಣ ರೆಡಿಯಾಗಿದೆ. ಲಸಿಕೆ ನೀಡೋಕು ಮುನ್ನ ಡ್ರೈ ರನ್ ಸಕ್ಸಸ್​ಫುಲ್ ಮಾಡೋಕೆ ಪ್ಲ್ಯಾನ್ ಜೋರಾಗಿದೆ. ರಾಜ್ಯದಲ್ಲಿ ಡ್ರೈ ರನ್​ಗೆ ಸಿದ್ಧತೆ ಹೇಗೆ ನಡೆಯುತ್ತಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಡ್ರೈ ರನ್-2ಗೆ ಸಿದ್ಧವಾಯ್ತು ಕರುನಾಡು, ವ್ಯಾಕ್ಸಿನ್ ರಿಹರ್ಸಲ್ ಸ್ಟಾರ್ಟ್
ಡ್ರೈ ರನ್-2

Updated on: Jan 08, 2021 | 10:37 AM

ಬೆಂಗಳೂರು: ಕೊರೊನಾ ಮಹಾಮಾರಿಯನ್ನ ಬೇಟೆಯಾಡಲು ರಾಮಬಾಣ ಬಂದೇ ಬಿಟ್ಟಿದೆ. ಹೀಗಾಗಿ ದೇಶದಲ್ಲಿ ಈಗಾಗಲೇ ಎರಡು ಬಾರಿ ಡ್ರೈ ರನ್ ನಡೆಸಲಾಗಿದೆ. ಆರಂಭಿಕ ಹಂತದಲ್ಲಿ ದೇಶದ ನಾಲ್ಕು ರಾಜ್ಯಗಳಲ್ಲಿ ಡ್ರೈ ರನ್ ನಡೆಸಿದ್ರೆ, ಜನವರಿ 2ನೇ ತಾರೀಖಿನಂದು ದೇಶದ ಎಲ್ಲ ರಾಜ್ಯಗಳ ಆಯ್ದು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಿ, ಕೊರೊನಾ ಲಸಿಕೆ ನೀಡಿಕೆ ಕುರಿತು ಆರೋಗ್ಯ ಸಿಬ್ಬಂದಿಗೆ ನೀಡಿರೋ ತರಬೇತಿ ಹೇಗಿದೆ ಅನ್ನೋ ಕುರಿತು ಪರೀಕ್ಷೆ ನಡೆಸಲಾಗಿತ್ತು. ಇದೇ ಕಾರಣಕ್ಕೆ ಇಂದು ರಾಜ್ಯದ ಹಲವು ಜಿಲ್ಲೆಗಳ ಆಯ್ದ ಕಡೆ ಡ್ರೈ ರನ್ ನಡೆಯುತ್ತಿದೆ.

ಚುಚ್ಚುಮದ್ದು ನೀಡಲು ವೈದ್ಯರಿಂದ ‘ರಂಗ ತಾಲೀಮು’!
ಇಂದು ಬೆಳಗ್ಗೆಯಿಂದ ರಾಜ್ಯಾದ್ಯಂತ ಕೊರೊನಾ ವ್ಯಾಕ್ಸಿನ್​ ಡ್ರೈ ರನ್ ನಡೀತಿದೆ. ಡ್ರೈ ರನ್ ವಿಚಾರವಾಗಿ ನಿನ್ನೆ ದೇಶದ ಎಲ್ಲಾ ಆರೋಗ್ಯ ಸಚಿವರ ಜೊತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯದ 263 ಸ್ಥಳಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದ್ದು, 22 ಜಿಲ್ಲಾಸ್ಪತ್ರೆಗಳು, 87 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು, 28 ಖಾಸಗಿ ಆಸ್ಪತ್ರೆಗಳನ್ನ ಆಯ್ದುಕೊಳ್ಳಲಾಗಿದೆ. ಉಳಿದಂತೆ ಕೆಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ.

ಇಂದು ವ್ಯಾಕ್ಸಿನ್​ ಡ್ರೈರನ್​!
ಮಂಡ್ಯ ಜಿಲ್ಲೆಯಲ್ಲಿ ಡ್ರೈರನ್​​ಗೆ ಸಕಲ ಸಿದ್ಧತೆ ನಡೆದಿದ್ದು, ಒಟ್ಟು 7 ಕಡೆ ತಾಲೀಮು ನಡೆದಿದೆ. ಹಾವೇರಿಯ 5 ಕಡೆ, ಕೊಪ್ಪಳದಲ್ಲಿ 9 ರಿಂದ 15 ಕಡೆ ವ್ಯಾಕ್ಸಿನ್​ ಡ್ರೈರನ್​​ ನಡೆಯುತ್ತಿದೆ. ವಿಜಯಪುರ ಜಿಲ್ಲೆಯ 5 ಕೇಂದ್ರಗಳಲ್ಲಿ, ಹಾಸನದ 6 ಕೇಂದ್ರಗಳಲ್ಲಿ, ಕೋಲಾರದ ಎಂಟು ಕೇಂದ್ರಗಳಲ್ಲಿ ಡ್ರೈರನ್​​ಗೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಬೆಂಗಳೂರಿನ 6 ಕೇಂದ್ರಗಳು, ರಾಮನಗರದ 8, ಕಲಬುರಗಿಯ 6, ಯಾದಗಿರಿಯ ಆರು ಕೇಂದ್ರಗಳಲ್ಲೂ ತಾಲೀಮು ನಡೆಯುತ್ತಿದೆ.

ವ್ಯಾಕ್ಸಿನ್ ಹಂಚಿಕೆಗೆ ಸಿದ್ದತೆ ಮಾಡಿರೋ ಆರೋಗ್ಯ ಇಲಾಖೆಗೆ, ಕೇಂದ್ರದಿಂದ ಇಲ್ಲಿಯವರಗೆ 24 ಲಕ್ಷ ಸಿರಿಂಜ್ ಬಂದಿದೆ. ಇವುಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದ್ದು, ಕೋಲ್ಡ್ ಚೈನ್ ಸಾಮಗ್ರಿಗಳು, ವಾಕಿಂಗ್ ಕೂಲರ್ ರೆಡಿಯಾಗಿವೆ. 4 ವಾಕಿಂಗ್ ಫ್ರೀಜರ್​ಗಳಿದ್ದು, ಕೇಂದ್ರದಿಂದ 225 ಲೀಟರ್ ಸಾಮರ್ಥ್ಯದ 65 ಐಸೋಲೈಸ್ಡ್ ರೆಫ್ರಿಜರೇಟರ್​ಗಳು ರಾಜ್ಯಕ್ಕೆ ತಲುಪಿವೆ. ರಾಜ್ಯದಲ್ಲಿ 6.36 ಲಕ್ಷ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲು ನೋಂದಣಿಯಾಗಿದ್ದಾರೆ. ಆರೋಗ್ಯ ಸಿಬ್ಬಂದಿ, ಪೊಲೀಸ್, ರಕ್ಷಣಾ ಸಿಬ್ಬಂದಿಗೆ ಮೊದಲು ಲಸಿಕೆ ಕೊಡಲಾಗುತ್ತದೆ.

ಜನವರಿ 13 ರೊಳಗೆ ದೇಶದಲ್ಲಿ ಕೊರೊನಾ ಲಸಿಕೆ ನೀಡಿಕೆ ಆರಂಭವಾಗೋ ಸಾಧ್ಯತೆಗಳಿವೆ. ಹೀಗಾಗಿ ಅದಕ್ಕೂ ಮುನ್ನವೇ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಿ ಲಸಿಕೆ ನೀಡಿಕೆ ವೇಳೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪುಣೆಯ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಜೊತೆಗೆ ಕೋವಿಶೀಲ್ಡ್ ಲಸಿಕೆ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಇದಾದ ಬಳಿಕ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗೋ ಸಾಧ್ಯತೆಗಳು ಹೆಚ್ಚಾಗಿವೆ.

ರಾಜ್ಯಾದ್ಯಂತ ನಾಳೆ ನಡೆಯಲಿದೆ ಕೊವಿಡ್ ವ್ಯಾಕ್ಸಿನ್ ಡ್ರೈ ರನ್

Published On - 10:28 am, Fri, 8 January 21