ಪತ್ನಿಗೆ ಸೋಲು: ಕುಡಿಯುವ ನೀರಿಗೆ ಬ್ರೇಕ್, ಪರದಾಡುತ್ತಿರುವ ಸಾವಿರಾರು ಗ್ರಾಮಸ್ಥರು! ಮುಂದೇನು?
ಕಳೆದ ಅನೇಕ ವರ್ಷಗಳಿಂದ ರಮೇಶಗೌಡ ಅವರ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದ ಜನರಿಗೆ ಇಲ್ಲಿವರಗೆ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ರಮೇಶಗೌಡ ಇದೀಗ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಇದೀಗ ಜನರಿಗೆ ದಿಢೀರನೆ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ಕುಡಿಯುವ ನೀರಿಗಾಗಿ ವಾರ್ಡ್ ನಂಬರ್ 4ರಲ್ಲಿ ಬರುವ ಸಾವಿರಕ್ಕೂ ಅಧಿಕ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಲಬುರಗಿ: ಊರಿಗೆ ಉಪಕಾರ ಮಾಡಬಾರದು, ಹೆಣಕ್ಕೆ ಸಿಂಗಾರ ಮಾಡಬಾರದು ಎನ್ನುವುದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಗಾದೆ ಮಾತಾಗಿದೆ. ಈ ಗಾದೆ ಮಾತನ್ನು ನೆನಪಿಸಿಕೊಂಡ ವ್ಯಕ್ತಿಯೋರ್ವ ಗ್ರಾಮಕ್ಕೆ ನೀಡುತ್ತಿದ್ದ ಕುಡಿಯುವ ನೀರನ್ನು ಬಂದ್ ಮಾಡಿದ್ದಾರೆ.
ಹೌದು ಕಳೆದ ಅನೇಕ ವರ್ಷಗಳಿಂದ ಗ್ರಾಮಕ್ಕೆ ತನ್ನ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದ ವ್ಯಕ್ತಿ, ಇದೀಗ ಗ್ರಾಮದ ಜನರಿಗೆ ಉಪಕಾರ ಮಾಡಬಾರದು ಎಂದು ನೀರು ನೀಡುವುದಕ್ಕೆ ಬ್ರೇಕ್ ಹಾಕಿದ್ದಾರೆ. ಇದಕ್ಕೆ ಕಾರಣ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆತನ ಪತ್ನಿಗೆ ಜನರು ಮತ ಹಾಕಿ ಗೆಲ್ಲಿಸಲಿಲ್ಲ ಎನ್ನುವುದು. ಇದರಿಂದ ಗ್ರಾಮದ ಜನರು ಇದೀಗ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ತಾನು ಅನೇಕ ವರ್ಷಗಳಿಂದ ಗ್ರಾಮದ ಜನರಿಗೆ ಕುಡಿಯುವ ನೀರನ್ನು ಕೊಟ್ಟಿದ್ದೇನೆ. ಮೊದಲ ಬಾರಿಗೆ ತನ್ನ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಳು. ವಾರ್ಡ್ ನಂಬರ್ 4ರಲ್ಲಿನ ಜನರು ಬೆಂಬಲಿಸುವ ವಿಶ್ವಾಸವಿತ್ತು. ನೀರು ಕೊಟ್ಟವರಿಗೆ ಓಟು ಕೊಡುತ್ತಾರೆ ಎನ್ನುವ ನಂಬಿಕೆಯಿತ್ತು. ಆದರೆ ಮತದಾನದ ಸಮಯದಲ್ಲಿ ನೀರು ಕೊಟ್ಟವರನ್ನು ಮರೆತಿದ್ದಾರೆ. ಇದು ನನ್ನ ಮನಸನ್ನು ತುಂಬಾ ಘಾಸಿ ಮಾಡಿದೆ. ಜನರು ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಹೀಗಾಗಿ ನಾನು ಇದೀಗ ನನ್ನ ಕೃಷಿ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ವಾರ್ಡ್ ನಂಬರ್ 4ಕ್ಕೆ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದೇನೆ. -ರಮೇಶಗೌಡ, ಪರಾಜಿತ ಅಭ್ಯರ್ಥಿಯ ಪತಿ
ಚುನಾವಣೆಯಲ್ಲಿ ಸೋಲು, ನೀರು ಪೂರೈಕೆ ಬಂದ್: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಗ್ರಾಮದ ಸುಧಾ ರಮೇಶಗೌಡ ಪಾಟೀಲ್ ಎನ್ನುವವರು ಗ್ರಾಮದ ವಾರ್ಡ್ ನಂಬರ್ ನಾಲ್ಕರಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ವಾರ್ಡ್ನಲ್ಲಿ ಸುಧಾ ಸ್ಪರ್ಧಿಸಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದಾಗ ಅಭ್ಯರ್ಥಿ ಮತ್ತು ಅಭ್ಯರ್ಥಿಯ ಪತಿ, ತಾವು ಈ ಭಾರಿ ಸುಲಭವಾಗಿ ಚುನಾವಣೆಯಲ್ಲಿ ಜಯಗಳಿಸುತ್ತೇವೆ ಎನ್ನುವ ವಿಶ್ವಾಸವನ್ನು ಹೊಂದಿದ್ದರು.
ಆದರೆ ಮತದಾನ ನಡೆದು, ಚುನಾವಣೆಯ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಏಕೆಂದರೆ ಗೆಲುವಿನ ವಿಶ್ವಾಸ ಹೊಂದಿದ್ದ ಸುಧಾ ರಮೇಶಗೌಡ್ ಪಾಟೀಲ್ 8 ಮತಗಳಿಂದ ಸೋತಿದ್ದು, ಗ್ರಾಮದ ವಿಜಯಲಕ್ಷ್ಮಿ ಎನ್ನುವವರು ಗೆಲವು ಸಾಧಿಸಿದ್ದಾರೆ. ಸುಧಾ ಪರವಾಗಿ 285 ಮತಗಳು ಬಿದ್ದರೆ, ಎದುರಾಳಿ ಅಭ್ಯರ್ಥಿ ವಿಜಯಲಕ್ಷ್ಮಿಗೆ 293 ಮತಗಳು ಬಂದಿದ್ದವು. ಹೀಗಾಗಿ ವಿಜಯಲಕ್ಷ್ಮಿ 8 ಮತಗಳಿಂದ ವಿಜಯದ ಪತಾಕೆ ಹಾರಿಸಿದ್ದರು.
ಕಳೆದ 30 ವರ್ಷಗಳಿಂದ ನೀರು ನೀಡುತ್ತಿದ್ದ ರಮೇಶ್ ಗೌಡ: ಕೋಳಕೂರು ಗ್ರಾಮ ಭೀಮಾ ನದಿಯ ದಡದಲ್ಲಿದ್ದು, ಈ ಹಿಂದೆ ಗ್ರಾಮಕ್ಕೆ ಭೀಮಾ ನದಿಯ ನೀರನ್ನೇ ಗ್ರಾಮ ಪಂಚಾಯತಿಯಿಂದ ಗ್ರಾಮದ ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ನೀರನ್ನು ಶುದ್ದಿಕರಿಸದೇ ಬಿಡುತ್ತಿದ್ದರಿಂದ ಗ್ರಾಮದ ಜನರು, ಭೀಮಾ ನದಿಯ ನೀರನ್ನು ಬಳಸುವುದನ್ನು ಬಿಟ್ಟಿದ್ದರು.
ಬದಲಾಗಿ ಗ್ರಾಮದ ಹೊರವಲಯದಲ್ಲಿರುವ ರಮೇಶಗೌಡ ಪಾಟೀಲ್ರ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ನೀರನ್ನು ಪಡೆಯುತ್ತಿದ್ದರು. ಇನ್ನು ರಮೇಶಗೌಡ ಕೂಡ ತನ್ನ ಜಮೀನಿನಲ್ಲಿದ್ದ ಕೊಳವೆ ಬಾವಿಯ ನೀರನ್ನು ಉದಾರವಾಗಿ ನೀಡಿದ್ದರು.
ಅಷ್ಟೇ ಅಲ್ಲ ಗ್ರಾಮದಲ್ಲಿರುವ ಮಿನಿ ವಾಟರ್ ಟ್ಯಾಂಕ್ಗಳಿಗೆ ತಮ್ಮ ಬೋರ್ ವೆಲ್ ನೀರಿನಿಂದ ಕನೆಕ್ಷನ್ ಕೊಟ್ಟು, ಇಡೀ ಗ್ರಾಮದ ಜನರಿಗೆ ಕುಡಿಯುವ ನೀರನ್ನು ನೀಡುವ ಕೆಲಸ ಮಾಡುತ್ತಿದ್ದರು. ಗ್ರಾಮ ಪಂಚಾಯತಿ ಚುನಾವಣೆ ಬಂದಾಗ, ತಾವು ನೀರು ನೀಡುತ್ತಿದ್ದ ವಾರ್ಡ್ನ ಜನರು, ತಮ್ಮ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸವನ್ನು ರಮೇಶಗೌಡ ಹೊಂದಿದ್ದರು.
ಆದ್ರೆ ಗ್ರಾಮದ ಜನರು ಅವಿರೋಧ ಆಯ್ಕೆ ಮಾಡಿಲಿಲ್ಲ. ಗ್ರಾಮದ ಜನರು ನೀರು ಕೊಟ್ಟವರನ್ನು ಕೈ ಬಿಟ್ಟಿದ್ದಾರೆ ಎಂದು ಆಕ್ರೋಶಗೊಂಡಿರುವ ರಮೇಶಗೌಡ್, ಇದೀಗ ವಾರ್ಡ್ ನಂಬರ್ ನಾಲ್ಕರ ಜನರಿಗೆ ಕುಡಿಯುವ ನೀರು ಕೊಡುವುದನ್ನು ಬಂದ್ ಮಾಡಿದ್ದಾರೆ.

ಪಂಪ್ ಮೂಲಕ ನೀರಿನ ವ್ಯವಸ್ಥೆ ನೀಡುತ್ತಿದ್ದ ರಮೇಶ್
ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರು: ಕಳೆದ ಅನೇಕ ವರ್ಷಗಳಿಂದ ರಮೇಶಗೌಡ ಅವರ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ನೀರು ಪಡೆಯುತ್ತಿದ್ದ ಜನರಿಗೆ ಇಲ್ಲಿವರೆಗೆ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ರಮೇಶಗೌಡ ಇದೀಗ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಇದೀಗ ಜನರಿಗೆ ದಿಢೀರನೆ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ಕುಡಿಯುವ ನೀರಿಗಾಗಿ ವಾರ್ಡ್ ನಂಬರ್ 4ರಲ್ಲಿ ಬರುವ ಸಾವಿರಕ್ಕೂ ಅಧಿಕ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಊರಿನ ಜನರಿಗೆ ಕುಡಿಯುವ ನೀರು ನೀಡುತ್ತಿದ್ದ ಟ್ಯಾಂಕ್
ಗ್ರಾ.ಪಂ. ಚುನಾವಣೆಯಲ್ಲಿ ಫೇಸ್ಬುಕ್ ಹವಾ: ಕೋಟೆನಾಡಿನಲ್ಲಿ ಹಳ್ಳಿಹಕ್ಕಿಗಳ ಪೋಸ್ಟ್ ಕಮೆಂಟ್ ಅಬ್ಬರ
Published On - 10:46 am, Fri, 8 January 21
