ಚಿಕ್ಕಬಳ್ಳಾಪುರ: ಕೊವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಅಧೀನದಲ್ಲಿರುವ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿರುವ ಪ್ರೌಢಶಾಲೆಯಲ್ಲಿ ಮಠದ ವತಿಯಿಂದ ಕೊವಿಡ್ ಕೇರ್ ಸೆಂಟರ್ ತೆರೆದಿದ್ದು ಅದರಲ್ಲಿ ಸದ್ಯ 35 ಜನ ಕೊರೊನಾ ಸೋಂಕಿತರಿದ್ದಾರೆ.
ಚಿಕ್ಕಬಳ್ಳಾಪುರ: ಕೊವಿಡ್ ಕೇರ್ ಸೆಂಟರ್ಗಳೆಂದರೆ ಈಗಲೂ ಹಲವರು ಮೂಗು ಮುರಿಯುತ್ತಾರೆ. ಕೊವಿಡ್ ಕೇರ್ ಸೆಂಟರ್ಗಳಲ್ಲಿ ಅದು ಇರಲ್ಲ ಇದು ಇರಲ್ಲ, ಇದ್ರೂ ಹೇಳೊರು ಕೇಳೋರು ಯಾರು ಇರಲ್ಲ ಅಂತ ಕೊವಿಡ್ ಕೇರ್ ಸೆಂಟರ್ಗಳಿಗೆ ಹೋಗದೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತೇವೆ ಎಂದು ಹೇಳುವವರೂ ಇದ್ದಾರೆ. ಆದರೆ, ಕೆಲವು ಕೊವಿಡ್ ಕೇರ್ ಸೆಂಟರ್ಗಳಲ್ಲಿ ಉತ್ತಮ ಸೌಲಭ್ಯ ನೀಡಲಾಗುತ್ತಿದೆ. ಇದೇ ರೀತಿ ರಾಜ್ಯದ ಪ್ರತಿಷ್ಠಿತ ಮಠವೊಂದು ತನ್ನ ಸುಸಜ್ಜಿತವಾದ ಶಾಲೆಯನ್ನು ಕೊವಿಡ್ ಕೇರ್ ಸೆಂಟರ್ ರೂಪಿಸಿ ಕೊರೊನಾ ಸೊಂಕಿತರನ್ನು ಉತ್ತಮವಾಗಿ ನೋಡಿಕೊಳ್ಳಲಾಗುತ್ತಿದೆ. ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಉಣಬಡಿಸಿ ಸೈ ಎನಿಸಿಕೊಂಡಿದೆ.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಅಧೀನದಲ್ಲಿರುವ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿರುವ ಪ್ರೌಢಶಾಲೆಯಲ್ಲಿ ಮಠದ ವತಿಯಿಂದ ಕೊವಿಡ್ ಕೇರ್ ಸೆಂಟರ್ ತೆರೆದಿದ್ದು ಅದರಲ್ಲಿ ಸದ್ಯ 35 ಜನ ಕೊರೊನಾ ಸೋಂಕಿತರಿದ್ದಾರೆ. ಗ್ರಾಮೀಣ ಕೊರೊನಾ ಸೋಂಕಿತರಿಗೆಂದೇ ತೆರೆದಿರುವ ಸೆಂಟರ್ ನಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ದರೇ ಹೆಚ್ಚಾಗಿ ಇದ್ದಾರೆ. ಬಹುತೇಕ ಎಲ್ಲರೂ ಮುಗ್ದರೇ ಆಗಿದ್ದು, ಬಲವಂತವಾಗಿ ತಮ್ಮನ್ನು ಕರೆತಂದು ಕೊಠಡಿಯಲ್ಲಿ ಹಾಕಿದ್ದಾರೆ ಎಂಬ ಭಾವನೆ ಹಿರಿಜೀವಿಗಳಿಗೆ ಬರಬಾರದು ಎಂದು ಕೊವಿಡ್ ಕೇರ್ ಉಸ್ತುವಾರಿಗಳು ಕೊರೊನಾ ಸೋಂಕಿತರಿಗೆ ದಿನಕ್ಕೊಂದರಂತೆ ಗುಣಮಟ್ಟದ ಊಟದ ವ್ಯವಸ್ಥೆ ಮಾಡಿ ನಗುಮೊಗದಿಂದ ಎಲ್ಲರನ್ನು ಆರೈಕೆ ಮಾಡುತ್ತಿದ್ದಾರೆ.
ಇಂದು ಹೆಜ್ಜೆ ಮುಂದೆ ಹೋಗಿ ಸ್ಥಳಿಯ ಮಂಚನಬಲೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸೇರಿಕೊಂಡು ಕೊರೊನಾ ಸೋಂಕಿತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಉಪಾಧ್ಯಕ್ಷ ಮಂಚನಬಲೆ ಶ್ರೀಧರ್ ಮುತುವರ್ಜಿ ವಹಿಸಿ, ಸ್ಥಳಿಯ ಭಾಗ್ಯಮ್ಮ ಹಾಗೂ ಮಂಜುನಾಥ ಎನ್ನುವ ದಂಪತಿಯ ಮನೆಯಲ್ಲಿ ಆರು ಕೆ.ಜಿ ತೊಗರಿ ಬೆಳೆಯ ಹೊಳಿಗೆ ರೆಡಿ ಮಾಡಿಸಿದ್ದರು. ಭಾಗ್ಯಮ್ಮ ಹೊಳಿಗೆ ಹೊಸೆದು ಕೊಡ್ತಿದ್ರೆ ಶ್ರೀಧರ್ ತಾವೆ ಹೊಳಿಗೆ ಬೇಯಿಸಿ ಸಂತಸ ಪಟ್ಟರು. ಇನ್ನೂ ಅನ್ನ ಸಾಂಬಾರು ಪಲ್ಯವನ್ನು ಕೊವಿಡ್ ಕೇರ್ ಕೇಂದ್ರದಲ್ಲಿ ಅಡುಗೆ ಭಟ್ಟರು ರೆಡಿ ಮಾಡಿದ್ದರು. ಎಂದಿನಂತೆ ಮಧ್ಯಾನ್ಹ ಊಟದ ತಟ್ಟೆಯಲ್ಲಿ ಕೊರೊನಾ ಸೋಂಕಿತರಿಗೆ ಬಿಸಿಬಿಸಿ ಹೋಳಿಗೆಯನ್ನು ನೋಡಿ ಆನಂದವಾಗಿತ್ತು.
ಸ್ಥಳಿಯ ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ ಸ್ಥಳಿಯ ಅಧಿಕಾರಿಗಳು ಸೆಂಟರ್ ಗೆ ಆಗಮಿಸಿ ತಮ್ಮ ಕೈಯಾರೆ ಕೊರೊನಾ ಸೋಂಕಿತರಿಗೆ ಊಟ ಬಡಿಸಿದರು. ಪ್ರತಿದಿನ ಕಡಿಮೆ ಉಪ್ಪು ಖಾರದ ಊಟ ತಿಂದು ನಾಲಿಗೆ ಸಪ್ಪೆ ಮಾಡಿಕೊಂಡಿದ್ದ ಕೊರೊನಾ ಸೋಂಕಿತರು, ಇಂದು ಸಿಹಿ ಊಟ ಮಾಡಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿ ಹಾಗೂ ಸ್ಥಳಿಯ ಮಂಚನಬಲೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಕೊವಿಡ್ ತಡೆಯಲು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇವೆ, ಸಿಎಂ ಯಡಿಯೂರಪ್ಪರ ಜತೆ ನಾವಿದ್ದೇವೆ: ಶಾಸಕ ರೇಣುಕಾಚಾರ್ಯ
24ಗಂಟೆಯಲ್ಲಿ 1.65 ಲಕ್ಷ ಹೊಸ ಕೊವಿಡ್ 19 ಪ್ರಕರಣಗಳು; ಸೋಂಕಿನ ಪ್ರಮಾಣದಲ್ಲಿ ಶೇ. 50ರಷ್ಟು ಇಳಿಕೆ (covid care centre gives Holige sweet meals for Covid infected in Chikkaballapur)
Published On - 6:22 pm, Sun, 30 May 21