ಬೆಂಗಳೂರು: ಕೊರೊನಾ ಸಂಖ್ಯೆ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ಕಡೆ ಅನ್ಲಾಕ್ ಘೋಷಿಸಲಾಗಿದೆ. ಹೀಗಾಗಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದವರು ಮರಳಿ ಬೆಂಗಳೂರಿಗೆ ಬರುತ್ತಿದ್ದಾರೆ. ನೆರೆ ರಾಜ್ಯಗಳ ಜನ ಕರ್ನಾಟಕಕ್ಕೆ ಮರಳುತ್ತಿದ್ದು ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ಟೆಸ್ಟ್ ಕಡ್ಡಾಯ ಮಾಡಲಾಗಿದೆ. KSRTC ಬಸ್‌ನಲ್ಲಿ ಬರಲು ನೆಗೆಟಿವ್ ರಿಪೋರ್ಟ್ ತರಬೇಕು. ಕೊವಿಡ್ ವರದಿ ಇಲ್ಲದಿದ್ದರೆ ಬಸ್‌ನಲ್ಲಿ ಪ್ರಯಾಣಿಸುವಂತಿಲ್ಲ ಎಂದು ಸರ್ಕಾರದ ಆದೇಶ ಹಿನ್ನೆಲೆಯಲ್ಲಿ KSRTC ಸಿಬ್ಬಂದಿಗೆ ಸೂಚಿಸಲಾಗಿದೆ. ಇನ್ನು ಮಹಾಮಾರಿ ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ರಾಜ್ಯದ ಗಡಿ ಭಾಗದಲ್ಲಿರುವ ಕೊಗನೊಳ್ಳಿ ರಾಷ್ಟ್ರೀಯ ಹೆದ್ದಾರಿ ಚೆಕ್ಪೋಸ್ಟ್ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದ್ದರು. ಅಥವಾ ಕರ್ನಾಟಕದವರೇ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದರೆ ಆ ಪ್ರಯಾಣಿಕರು ಗಡಿಯಲ್ಲಿರುವ ಚೆಕ್ಪೋಸ್ಟ್ಗಳಲ್ಲಿಯೇ ಅವರ ಮಾದರಿಯನ್ನು ಸಂಗ್ರಹಿಸಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಕಳುಹಿಸಬೇಕು. ವರದಿ ಬಂದ ತಕ್ಷಣವೇ ಆ ವ್ಯಕ್ತಿಗೆ ಮಾಹಿತಿಯನ್ನು ನೀಡಬೇಕು. ನಂತರ ಅವರ ವರದಿಯನ್ನು ಅವರ ವಿಳಾಸಕ್ಕೆ ಕಳಿಸಬೇಕು ಎಂದು ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರತ ಅರೋಗ್ಯ ಇಲಾಖೆಯ ತಂಡಗಳಿಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂನಲ್ಲೂ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ; ಜನರ ಅನುಕೂಲಕ್ಕಾಗಿ ಕ್ರಮ