ಖಾಸಗಿ ವಾಣಿಜ್ಯ ಬಂದರು ಅಭಿವೃದ್ಧಿ ಕಾರ್ಯ ವಿರೋಧಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಮೀನುಗಾರರು
ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಪೊಲೀಸರು ಹಾಗೂ ಮೀನುಗಾರರ ನಡುವೆ ವಾಗ್ವಾದ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುವಾಗ ಸಿಟ್ಟಿಗೆದ್ದ ಯುವ ಮೀನುಗಾರ ಯುವಕರು ನೇರವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹೊನ್ನಾವರ: ಸ್ಥಳೀಯರು ಹಾಗೂ ಮೀನುಗಾರರ ವಿರೋಧದ ನಡುವೆಯೂ ಖಾಸಗಿ ವಾಣಿಜ್ಯ ಬಂದರು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿರುವುದನ್ನು ಖಂಡಿಸಿ ನೂರಾರು ಮೀನುಗಾರರರು ಸಮುದ್ರಕ್ಕೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ (ಜೂನ್ 26) ಹೊನ್ನಾವರದಲ್ಲಿ ನಡೆದಿದೆ. ಕಾಸರಕೋಡು ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, ಅಲ್ಲಿಗೆ ರಸ್ತೆ ಸಂಪರ್ಕ ಕಲ್ಪಿಸಲೆಂದು ಕಳೆದ ಶನಿವಾರ ಪೊಲೀಸರ ಬಿಗಿಬಂದೋಸ್ತಿನಲ್ಲಿ ಮೀನುಗಾರರ ಶೆಡ್ಗಳನ್ನು ಉರುಳಿಸಲಾಗಿದೆ. ಇದನ್ನು ವಿರೋಧಿಸಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದು, ಆಕ್ರೋಶಭರಿತರಾಗಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಕಾಸರಕೋಡು ಟೊಂಕಾ ಪ್ರದೇಶದಲ್ಲಿನ ಶರವಾತಿ ನದಿ ಅಳಿವೆ ಭಾಗದಲ್ಲಿ ಸುಮಾರು ₹600 ಕೋಟಿ ವೆಚ್ಚದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಈ ಕಾಮಗಾರಿಯನ್ನು ನಡೆಸುತ್ತಿದ್ದು, ಇದಕ್ಕಾಗಿ ಸರ್ಕಾರ ಸುಮಾರು 93 ಎಕರೆ ಜಾಗವನ್ನು ಮಂಜೂರು ಮಾಡಿದೆ. ಆದರೆ, ಕೆಲ ಸಮಯದ ಹಿಂದೆ ಸದರಿ ಕಾಮಗಾರಿಯನ್ನು ಆರಂಭಿಸಲು ಮುಂದಾದಾಗ ಇದಕ್ಕೆ ಆಕ್ಷೇಪ ಎತ್ತಿದ್ದ ಸ್ಥಳೀಯರು ಕಾಮಗಾರಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಈಗ ಮತ್ತೆ ಕಾಮಗಾರಿ ಆರಂಭಕ್ಕೆ ಮುಂದಾಗಿದ್ದು, ಶನಿವಾರ ಮುಂಜಾನೆ ಪೊಲೀಸರ ಬಿಗಿ ಭದ್ರತೆಯೊಂದಿಗೆ ಆಗಮಿಸಿ ಜೆಸಿಬಿಗಳ ಸಹಾಯದೊಂದಿಗೆ ಮೀನುಗಾರರ ಹತ್ತಾರು ಶೆಡ್ಗಳನ್ನು ನಾಶ ಮಾಡಲಾಗಿದೆ. ಅಲ್ಲದೇ, ಕಡಲ ತೀರದ ತೆಂಗಿನ ಮರಗಳು ಸೇರಿದಂತೆ, ಹಲವು ಮರಗಳನ್ನು ಉರುಳಿಸಲಾಗಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಪೊಲೀಸರು ಹಾಗೂ ಮೀನುಗಾರರ ನಡುವೆ ವಾಗ್ವಾದ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುವಾಗ ಸಿಟ್ಟಿಗೆದ್ದ ಯುವ ಮೀನುಗಾರ ಯುವಕರು ನೇರವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಾಮೂಹಿಕ ಆತ್ಮಹತ್ಯೆ ನಿರ್ಧಾರಕ್ಕೆ ಮೀನುಗಾರರು ಬರುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಕೂಡಲೇ ಸಮುದ್ರಕ್ಕೆ ಜಿಗಿದವರನ್ನು ರಕ್ಷಿಸಿದ್ದಾರೆ. ಅಲ್ಲದೇ, ನಂತರ ಪ್ರತಿಭಟನೆಯಲ್ಲಿ ತೊಡಗಿದ್ದ ಮೀನುಗಾರರು ಹಾಗೂ ಮಹಿಳೆಯರನ್ನು ಪೊಲೀಸರ ಸಹಾಯದಿಂದ ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗಿದೆ.
ಹೀಗೆ ಯಾವುದೇ ಮುನ್ಸೂಚನೆಯನ್ನೂ ನೀಡದೆ, ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೇ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಮೀನುಗಾರರಿಗೆ ಆಶ್ರಯ ನೀಡಿದ್ದ ಶೆಡ್ಗಳನ್ನೇ ಉರುಳಿಸಿದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ, ಮೀನುಗಾರರ ಸಮುದಾಯಕ್ಕೆ ಇಷ್ಟು ದೊಡ್ಡ ಮಟ್ಟದ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಹಿಸಿರುವುದಕ್ಕೆ ಮೀನುಗಾರರು ಆಕ್ರೋಶ ಹೊರಹಾಕಿದ್ದು, ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಕಾಸರಕೋಡು, ಮಲ್ಲುಕುರ್ವಾ ಭಾಗದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನೇ ಬದುಕಿಗೆ ಆಧಾರವಾಗಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸ್ಪಷ್ಟ ಮಾಹಿತಿ ಒದಗಿಸದೇ ಕಾಮಗಾರಿ ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ರಾಜ್ಯ ಮೀನುಗಾರರ ಒಕ್ಕೂಟದ ಮುಖ್ಯಸ್ಥ ರಾಮ ಮೊಗೇರ್ ಮಾತನಾಡಿ, ಬಂದರು ನಿರ್ಮಾಣ ಕಾರ್ಯವನ್ನು ಸರ್ಕಾರ ನೋಡಿಕೊಳ್ಳಬೇಕು. ಹೀಗೆ ಖಾಸಗಿಯವರ ಅಧೀನಕ್ಕೆ ಬಿಟ್ಟುಕೊಡುವುದು ಸರಿಯಲ್ಲ. ಮೀನುಗಾರರು ಕಳೆದ ಮೂರು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ಬಗ್ಗೆ ಹೈಕೋರ್ಟ್ನಿಂದ ತಾತ್ಕಾಲಿಕ ತಡೆಯಾಜ್ಞೆಯೂ ಸಿಕ್ಕಿದೆ. ಮುಂದಿನ ವಿಚಾರಣೆ ಜುಲೈ 30ಕ್ಕೆ ಇದೆ. ಇಂತಹ ಸಂದರ್ಭದಲ್ಲಿ ಬಲ ಪ್ರಯೋಗ ನಡೆಸಲು ಮುಂದಾಗಿರುವುದಕ್ಕೆ ಮೀನುಗಾರರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ಸ್ಯ ಬೇಟೆಯಲ್ಲಿ ಗಣನೀಯ ಇಳಿಕೆ; ಕರಾವಳಿಯ ಮೀನುಗಾರರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ
Boat Catches Fire : ಮತ್ಸ್ಯಕಾ ಮೀನುಗಾರರ ಬೋಟ್ಗೆ ಬೆಂಕಿ, ಹಡಗು ಸಂಪೂರ್ಣ ಭಸ್ಮ
Published On - 9:59 am, Mon, 28 June 21