ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹಾವೇರಿಯ ಬಾಲಕಿ ಹೆಸರು ಸೇರ್ಪಡೆ
1 ರಿಂದ 20ರವರೆಗಿನ ಮಗ್ಗಿಗಳು, 1 ರಿಂದ 100ರವರೆಗಿನ ಸಮ ಮತ್ತು ಬೆಸ ಸಂಖ್ಯೆಗಳು, 100 ರಿಂದ 1ರ ವರೆಗಿನ ಬ್ಯಾಕ್‌ವರ್ಡ್ ನಂಬರ್, 50 ಅಪೋಸಿಟ್ ವರ್ಡ್ಸ್, ಗಣಿತದ ಚಿಹ್ನೆಗಳು, ಆಕಾರಗಳು ಇವೆಲ್ಲವುಗಳನ್ನು ತಪ್ಪದೆ ಹೇಳುವುದನ್ನು ಪರಿಶೀಲಿಸಿ ಬಾಲಕಿ ನಮ್ರತಾಳ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ದಾಖಲಿಸಲಾಗಿದೆ.
ಹಾವೇರಿ : ಸಾಮಾನ್ಯವಾಗಿ ಬಾಲ್ಯದಲ್ಲಿ ಮಕ್ಕಳು ಮಾತನಾಡುವುದೇ ಮನೆಯವರಿಗೆ ಮಕ್ಕಳು ಮಾಡಿದ ದೊಡ್ಡ ಸಾಧನೆ. ಆದರೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಎಂಟು ವರ್ಷದ ಬಾಲಕಿ ಚಿಕ್ಕ ವಯಸ್ಸಿನಲ್ಲೇ ದಾಖಲೆ ಸೃಷ್ಟಿ ಮಾಡಿದ್ದಾಳೆ. ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತ ಹೀಗೆ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದ್ದಾಳೆ. ಗುಂಡಗಟ್ಟಿ ಗ್ರಾಮದ ಕುಮಾರ ಮತ್ತು ಪೂರ್ಣಿಮಾ ಗುಡದಳ್ಳಿ ದಂಪತಿಯ ಮಗಳು ನಮ್ರತಾಳಿಗೆ ಈಗ 8 ವರ್ಷ 3 ತಿಂಗಳು ಆಗಿವೆ. ಆದರೆ ನಮ್ರತಾ ಗುಡದಳ್ಳಿಯ ಜ್ಞಾನ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ಸೇರ್ಪಡೆಯಾಗಿದೆ.
ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ನಮೃತಾ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ತನ್ನ ಹೆಸರನ್ನು ದಾಖಲಿಸಲು ಹಲವಾರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾಳೆ. 28 ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳು, 9 ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ರಾಜಧಾನಿಗಳು, ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು, ಕರ್ನಾಟಕದ ಜಿಲ್ಲೆಗಳು ಮತ್ತು ಮಹಾನಗರ ಪಾಲಿಕೆಗಳು, ಖಂಡಗಳು, ಮಹಾಸಾಗರಗಳು, ಸೌರವ್ಯೂಹದ ಗ್ರಹಗಳು ಹೀಗೆ ಎಲ್ಲವನ್ನೂ ನಮ್ರತಾ ಪಟಾಪಟ್ ಎಂದು ಹೇಳುತ್ತಾಳೆ.
ಅಲ್ಲದೆ ಜ್ಞಾನಪೀಠ ಪ್ರಶಸ್ತಿ ವಿಜೇತರು, ಗಾದೆಮಾತುಗಳು, ಕರ್ನಾಟಕದ ರಾಜಮನೆತನಗಳು, ನದಿಗಳ ಹೆಸರುಗಳು, 100 ಸಾಮಾನ್ಯ ಜ್ಞಾನದ ಪ್ರಶೋತ್ತರಗಳು, 1 ರಿಂದ 20ರವರೆಗಿನ ಮಗ್ಗಿಗಳು, 1 ರಿಂದ 100ರವರೆಗಿನ ಸಮ ಮತ್ತು ಬೆಸ ಸಂಖ್ಯೆಗಳು, 100 ರಿಂದ 1ರ ವರೆಗಿನ ಬ್ಯಾಕ್‌ವರ್ಡ್ ನಂಬರ್, 50 ಅಪೋಸಿಟ್ ವರ್ಡ್ಸ್, ಗಣಿತದ ಚಿಹ್ನೆಗಳು, ಆಕಾರಗಳು ಇವೆಲ್ಲವುಗಳನ್ನು ತಪ್ಪದೆ ಹೇಳುವುದನ್ನು ಪರಿಶೀಲಿಸಿ ಬಾಲಕಿ ನಮ್ರತಾಳ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ದಾಖಲಿಸಲಾಗಿದೆ.
ನಮ್ರತಾ ಬಾಲ್ಯದಿಂದಲೂ ಸಾಕಷ್ಟು ಬುದ್ದಿವಂತಳು. ಓದುವುದು ಮತ್ತು ಬರೆಯುವುದು ಸೇರಿದಂತೆ ಎಲ್ಲದರಲ್ಲೂ ಮುಂದಿದ್ದಾಳೆ. ಅವಳ ತಂದೆ ಮತ್ತು ತಾಯಿಯ ಮಾರ್ಗದರ್ಶನದಲ್ಲಿ ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ, ಸಾಹಿತ್ಯ ಹೀಗೆ ಅನೇಕ ವಿಷಯಗಳನ್ನು ತಟ್ ಎಂದು ಹೇಳುತ್ತಾಳೆ. ಆಕೆಯ ಪ್ರತಿಭೆಯನ್ನು ಗುರುತಿಸಿ ಆಕೆಯ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಲಾಗಿದೆ. ಇದು ನಮ್ಮ ಕುಟುಂಬಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ನಮೃತಾಳ ಸಂಬಂಧಿ ಈರಪ್ಪ ಬಣಕಾರ ತಿಳಿಸಿದ್ದಾರೆ.
ಇದನ್ನೂ ಓದಿ:
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಮೂರೂವರೆ ವರ್ಷದ ಬಾಲಕನ ಹೆಸರು ದಾಖಲು
Published On - 10:20 am, Mon, 28 June 21