
ಮೈಸೂರು: ಹೇಳುವ ಸುಳ್ಳನ್ನು ಸರಿಯಾಗಿ ಹೇಳದೆ ಅದೆಷ್ಟೋ ಬಾರಿ ಸತ್ಯ ಹೊರಬೀಳುತ್ತದೆ. ಸುಳ್ಳು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡ ಅದೆಷ್ಟೋ ಘಟನೆಗಳು ನಡೆದಿರುತ್ತದೆ. ಅದೇ ರೀತಿ ಪೊಲೀಸರಿಗೆ ಸುಳ್ಳು ಹೇಳಲು ಹೋಗಿ ಸಿಕ್ಕಿಹಾಕಿಂಡು ಪರದಾಡಿದ ಘಟನೆ ನಗರದ ಕೆ.ಆರ್ ವೃತ್ತದ ಬಳಿ ನಡೆದಿದೆ. ಕೊವಿಡ್19 ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ರಸ್ತೆಯಲ್ಲಿ ಅನಾವಶ್ಯಕವಾಗಿ ಜನರ ಓಡಾಟವನ್ನು ನಿಯಂತ್ರಿಸಲಾಗುತ್ತಿದೆ. ಈ ಸಮಯದಲ್ಲಿ ಯುವಕನೋರ್ವ ಅನಗತ್ಯವಾಗಿ ರೋಡಿನಲ್ಲಿ ಅಡ್ಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಯುವಕನನ್ನು ಪ್ರಶ್ನಿಸಿದ್ದಾರೆ.
ಪ್ರಶ್ನೆಗೆ ಉತ್ತರಿಸಿದ ಯುವಕ, ಕಾಲೇಜಿಗೆ ಹೋಗಿದ್ದೇ ಸಾರ್, ಎಂದು ಸುಳ್ಳು ಹೇಳಿದ್ದಾನೆ. ಇವತ್ತು ಯಾವ ವಾರ ಎಂದು ಪೊಲೀಸರು ಪ್ರಶ್ನಿಸಿದ್ದಕ್ಕೆ, ಮಂಗಳವಾರ, ಇಂದು ಕಾಲೇಜು ಇತ್ತು ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದಾನೆ. ಇದನ್ನು ಕೇಳಿ ದಂಗಾದ ಪೊಲೀಸರು, ಇಂದು ಭಾನುವಾರ. ನಿನಗಾಗಿ ಯಾವ ಕಾಲೇಜು ತೆರೆದಿರುತ್ತದೆ? ಯಾವ ದಿನ ಎಂದೇ ಗೊತ್ತಿಲ್ಲದೆ ಯಾವ ಕಾಲೇಜಿಗೆ ಹೋಗ್ತಿಯಾ ನೀನು? ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಬಳಿಕ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆ ಯುವಕನ ಬೈಕ್ಅನ್ನು ಠಾಣೆಗೆ ಕೊಂಡೊಯ್ಯಲಾಗಿದೆ.
ನಗರದಲ್ಲಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರ ಕಣ್ಣು ತಪ್ಪಿಸಿ ಅದೆಷ್ಟೋ ಜನ ಓಡಾಡುತ್ತಿದ್ದಾರೆ. ಪೊಲೀಸರ ಕೈಗೆ ಸಿಲುಕಿ ಹಾಕಿಕೊಂಡು ಪ್ರಶ್ನಿಸಿದರೂ, ಕುಂಟು ನೆಪ ಒಡ್ಡುತ್ತಾ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಜನರು ಕೊವಿಡ್19 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮದ ಕುರಿತಾಗಿ ಗಮನಹರಿಸಲೇ ಬೇಕಾಗಿದೆ.
ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ ಮಹೇಶ್ ಆಕ್ರೋಶ