ಹಾಸನ: ಮಹಾಮಾರಿ ಕೊರೊನಾ ವೈರಸ್ ಇಡೀ ದೇಶವನ್ನೆ ನಲುಗಿಸಿದೆ. ಮೊದಲ ಅಲೆಗಿಂತ ಕೊರೊನಾದ ಎರಡನೇ ಅಲೆ ಭೀಕರವಾಗಿದೆ. ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸದೆ ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರೊಬ್ಬರು ಪರದಾಡುತ್ತಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತ ಟೋಕುಲುಜ್ಮಾಬ್ (Tocilizumab) ಇಂಜೆಕ್ಷನ್ ಸಿಗದೆ ಪರದಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಪ್ರತಿದಿನ ನೂರಕ್ಕೂ ಅಧಿಕ ಜನರಿಗೆ ಕಿಲ್ಲರ್ ಕೊರೊನಾ ವೈರಸ್ ವಕ್ಕರಿಸುತ್ತಿದೆ. ಜೀವ ರಕ್ಷಕ ಔಷಧಿಗಳು ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಉಸಿರಾಟದ ತೊಂದರೆಯಾಗೋ ರೋಗಿಗಳಿಗೆ ಟೋಕುಲುಜ್ಮಾಬ್ ಇಂಜೆಕ್ಷನ್ ಸಿಗದೆ ನರಳುತ್ತಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಲಭ್ಯವಿಲ್ಲದೆ ಕೊರೊನಾ ಸೋಂಕಿತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹಾಸನ, ಮೈಸೂರಿನಲ್ಲೂ ಇಂಜೆಕ್ಷನ್ ಸಿಗುತ್ತಿಲ್ಲ. ಕಾಳಸಂತೆಯಲ್ಲಿ 1 ಇಂಜೆಕ್ಷನ್ ₹15 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಔಷಧದ ಕೃತಕ ಅಭಾವ ಸೃಷ್ಟಿಸಿ ಸೋಂಕಿತರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಜಿಲ್ಲೆಯಲ್ಲಿ 30,983ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 1,149 ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 485 ಜನರನ್ನ ಬಲಿಯಾಗಿದ್ದಾರೆ.
ಬೀದರ್ ಬ್ರೀಮ್ಸ್ ಕೊವಿಡ್ ವಾರ್ಡ್ನಲ್ಲಿ ಸೋಂಕಿತ ಪರದಾಟ
ಇನ್ನು ಇದೇ ರೀತಿಯ ಮತ್ತೊಂದು ಘಟನೆ ಬೀದರ್ನಲ್ಲಿ ನಡೆದಿದೆ. ಸೂಕ್ತ ಚಿಕಿತ್ಸೆ ಸಿಗದೆ ಕೊರೊನಾ ಸೋಂಕಿತ ಪರದಾಡುತ್ತಿದ್ದಾನೆ. ಇಂಜೆಕ್ಷನ್ ನಿಡುತ್ತಿಲ್ಲ, ಸರಿಯಾಗಿ ಚಿಕಿತ್ಸೆ ಇಲ್ಲ. ನಮಗೆ ಆಸ್ಪತ್ರೆಯಲ್ಲಿ ಉಪಾಹಾರ, ಊಟ ಕೂಡ ಸಿಗುತ್ತಿಲ್ಲ ಎಂದು ಸೋಂಕಿತ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾನೆ. ಲಸಿಕೆ ನೀಡುವಂತೆ ಕೇಳಿದರೆ ಮೇಲ್ವಿಚಾರಕರನ್ನ ಕೇಳಿ ಅಂತಾರೆ. ಉಸಿರಾಟ ಸಮಸ್ಯೆಯಿಂದ ನಾವು ಆಸ್ಪತ್ರೆಯಲ್ಲಿ ಬಳಲುತ್ತಿದ್ದೇವೆ. ಆದರೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿಲ್ಲ. ಎಂದು ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಕೊವಿಡ್ ವಾರ್ಡ್ನಲ್ಲಿ ಸುಮಾರು 2,144 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೆಮ್‌ಡಿಸಿವಿರ್ ಕೊರತೆ ಇಲ್ಲ, ಇದು ಸತ್ಯಕ್ಕೆ ದೂರವಾದದ್ದು
ಕೊರೊನಾ ಸೋಂಕಿತರ ನರಳಾಟ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ “ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಪರಿಶೀಲಿಸಿ ಕ್ರಮಕೈಗೊಳ್ತೇವೆ. 3 ವಾರಗಳಿಂದ ಕೊರೊನಾ ಹೆಚ್ಚಾದ ಹಿನ್ನೆಲೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ಆದ್ರೆ ಮೊದಲಿಗಿಂತ ಈಗ ಮೂಲಸೌಕರ್ಯ ಉತ್ತಮವಾಗಿದೆ. ರೆಮ್‌ಡಿಸಿವಿರ್ ಕೊರತೆ ಇಲ್ಲ, ಇದು ಸತ್ಯಕ್ಕೆ ದೂರವಾದದ್ದು. ಕಳೆದ ಬಾರಿ ಕೃತಕ ಅಭಾವ ಸೃಷ್ಟಿಸುವ ಘಟನೆ ನಡೆದಿತ್ತು. ಆದರೆ ಈ ಬಾರಿ ಲಸಿಕೆ ದಾಸ್ತಾನು, ಪೂರೈಕೆ ಮೇಲೆ ನಿಗಾ ಇಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು. ನಾಳೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತೆ. ಗೃಹ ಇಲಾಖೆಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಚರ್ಚೆಯಾಗುತ್ತೆ ಎಂದ ಬೀದರ್ ಜಿಲ್ಲೆ ಹುಮ್ನಾಬಾದ್‌ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: Corona 2nd Wave ಕೊರೊನಾ 2ನೇ ಅಲೆ ಅಬ್ಬರ.. ಒಂದೇ ದಿನದಲ್ಲಿ 1 ಲಕ್ಷ 99 ಸಾವಿರ ಕೇಸ್ ಪತ್ತೆ
Published On - 9:14 am, Thu, 15 April 21