ಹುಬ್ಬಳ್ಳಿ: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕೊವಿಡ್ ಶಿಷ್ಟಾಚಾರ ಉಲ್ಲಂಘನೆ ಮಾಡಿದ ತಪ್ಪಿಗಾಗಿ ಕಾರ್ಯಕ್ರಮ ಆಯೋಜಕರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ₹ 10 ಸಾವಿರ ದಂಡ ವಿಧಿಸಿದೆ. ಮೇ 31ರಂದು ಸೇವಾಸಿಂಧು ಆಂಬುಲೆನ್ಸ್ ಸೇವೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಕೊವಿಡ್ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ನ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮತ್ತು ಕಾಂಗ್ರೆಸ್ ಮುಖಂಡ ಶಹಜ್ಮಾನಗೆ ದಂಡ ವಿಧಿಸಲಾಗಿದೆ. ಶಹಜ್ಮಾನ ಮನೆ ಎದುರು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಇವರು ಮಹಾನಗರಪಾಲಿಕೆಯಿಂದ ಅನುಮತಿ ಪಡೆದಿರಲಿಲ್ಲ. ಕಾರ್ಯಕ್ರಮದಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯಾ ಸರ್ಕಲ್ ಮದರ್ ತೆರೆಸಾ ಪ್ರತಿಮೆ ಬಳಿ ಮೇ 31ರಂದು ನಡೆದ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲೆಂದೇ ರಾಜ್ಯದಲ್ಲಿ ಲಾಕ್ಡೌನ್ ವಿಧಿಸಲಾಗಿದೆ. ಜನನಾಯಕರೇ ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
‘ಮೇ 31ರಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ ಪರಿಶೀಲಿಸಿ, ₹ 10 ಸಾವಿರ ದಂಡ ವಿಧಿಸಿದ್ದೇವೆ. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡಿರಲಿಲ್ಲ, ಕೊವಿಡ್ ಶಿಷ್ಟಾಚಾರ ಪಾಲಿಸಿರಲಿಲ್ಲ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ನಯನ ಹೇಳಿದ್ದಾರೆ.
(Covid Protocol Violation in Congress President DK Shivakumar Programme Hubli Dharwad Corporation fines Organizers)
ಇದನ್ನೂ ಓದಿ: ಕೊವಿಡ್ ಲಸಿಕೆಗೆ ಕಮಿಷನ್ ಆರೋಪ: ಕಮಲ್ ಪಂತ್ಗೆ ದೂರು; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರವಿಸುಬ್ರಹ್ಮಣ್ಯ
ಇದನ್ನೂ ಓದಿ: ಲಸಿಕೆ ವಿತರಣೆಯಲ್ಲಿ ಜಾತಿ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್: ಅರ್ಚಕರಿಗೆ ಲಸಿಕೆ ಕೊಡಬಾರದೇ ಎಂದು ಪ್ರಶ್ನಿಸಿದ ಅಶ್ವತ್ಥನಾರಾಯಣ