Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Diary : ಕವಲಕ್ಕಿ ಮೇಲ್ : ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’

Husband Wife : ಅಜ್ಜಿ ಅಜ್ಜನ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ. ಅವ ಒಂದು ದಿನ ರಾತ್ರಿ ಹೋಗಿ ತಾನೇ ನೆಟ್ಟ ಬಾಳೆಗಿಡಗಳನ್ನು ಯಾರಿಗೂ ಕಾಣದಂತೆ ಉರುಳಿಸಿ ಬಂದಿದ್ದಾನೆ. ಅವನಿಗೆ ಒಂದು ತರಹದ ರೋಷ ಆವರಿಸಿ ಬುದ್ಧಿ ಭ್ರಮಣೆ ಆಯಿತು. ಅದರ ನಡುವೆ ದಮ್ಮಿನ ಕಾಯಿಲೆ ಉಲ್ಬಣವಾಯಿತು. ನೆಂಟರು ಅದರ ಲಾಭ ಪಡೆಯಲು ಹವಣಿಸಿದರು.

Covid Diary : ಕವಲಕ್ಕಿ ಮೇಲ್ : ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’
Follow us
ಶ್ರೀದೇವಿ ಕಳಸದ
|

Updated on:Jun 03, 2021 | 2:35 PM

ಅವರಿಬ್ಬರನ್ನು ತಪಾಸಣೆ ಮಾಡುವುದೆಂದರೆ ನಾಲ್ಕು ಜನರನ್ನು ನೋಡುವಷ್ಟು ಹೊತ್ತು ಬೇಕು. ಸರಸರ, ಅವಸರ ಎಲ್ಲ ಅವರಿಗೆ ಆಗಬರುವುದಿಲ್ಲ. ನಿಧಾನ ಟೇಬಲ್ ಮೇಲೆ ಮಲಗಿ, ಹಿಂದೆ ಬಂದು ಹೋದಲ್ಲಿಂದ ಇಂದಿನವರೆಗೆ ಏನೇನಾಯಿತೋ ಎಲ್ಲವನ್ನೂ ಅವರು ಹೇಳಬೇಕು, ನಾನು ಕೇಳಬೇಕು. ಅವರ ಕತೆ ಕಾಯಿಲೆಯದೇ ಇರಬೇಕು ಎಂದಿಲ್ಲ, ಅವರದ್ದೇ ಆಗಿರಬೇಕು ಎಂದೂ ಇಲ್ಲ. ಗಂಟಿಯಿಂದ ಹಿಡಿದು ಕೇರಿ ಮೇಲಿನ ಮದುವೆಯ ತನಕ ಎಲ್ಲವನ್ನೂ ಹೇಳಬೇಕು. ತಪಾಸಣೆಗೆಂದು ಮಲಗಿದಾಗ ಇವರ ಕಾಯಿಲೆ, ತಾಪತ್ರಯಗಳನ್ನು ಅವರು ವರ್ಣಿಸುವುದು, ಅವರಿಗಾದದ್ದನ್ನು ಇವರು ಹೇಳುವುದು ನೋಡಿದರೆ ಜೋಡಿ ಎಂದರೆ ಇವರದು ಎನಿಸುತ್ತಿತ್ತು. ಭಲೇ ಜೋಡಿ ಎಂದು ತಮಾಷೆ ಮಾಡುವುದೂ ಇತ್ತು. ಆ ಹಿರಿಯ ಜೀವಗಳೆಂದರೆ ನನಗೂ ಇಷ್ಟ. ಅದರಲ್ಲೂ ಅವರು ಅವರ ಕಾಲದ ಕತೆ ಹೇಳುವುದನ್ನು ಕೇಳಲು ಮತ್ತೂ ಇಷ್ಟ. * ಅಂದು ಅವರಿಬ್ಬರನ್ನು ಒಟ್ಟಿಗೆ ನೋಡಿದಾಗ ಇದನ್ನು ನಿಜ ಮಾಡಿದ ಕೊರೋನಾವನ್ನು ಕ್ಷಮಿಸಿಬಿಡಬಹುದು ಎನಿಸಿತು.

ಎಪ್ಪತ್ತರ ಆಸುಪಾಸಿನ ಜೋಡಿ. ಮಕ್ಕಳಿಲ್ಲದ ವೃದ್ಧ ದಂಪತಿ. ಹದಿನೇಳು ಕಿಲೋಮೀಟರ್ ದೂರದಿಂದ ಗಾಡಿ ಮಾಡಿಕೊಂಡು ನಮ್ಮಲ್ಲಿಗೆ ಬರುತ್ತಾರೆ. ಅವರು ಒಬ್ಬೊಬ್ಬರೇ ಬಂದದ್ದಿಲ್ಲ. ಬಂದಾಗ ಅಜ್ಜಿ ಬಳೆ ತುಂಬಿಸಿಕೊಂಡು, ಅಜ್ಜ ಚೌರ ಮಾಡಿಸಿಕೊಂಡು, ಹಾಳಾದ ಟೀವಿ ರಿಪೇರಿಗೆ ಕೊಟ್ಟು/ಪಡೆದು, ತಂದ ಅಡಕೆ/ಎಲೆ/ತೆಂಗಿನ ಕಾಯಿಯನ್ನು ಮಂಡಿಗೆ ಹಾಕಿ ದುಡ್ಡು ಪಡೆದು, ಬೇಂಕಿಗೆ ಹೋಗಿ, ಕಿರಾಣಿ ಸಾಮಾನು ಕಟ್ಟಿಸಿ, ಆಚಾರಿಸಾಲೆಯಲ್ಲಿ ಕತ್ತಿಯ ಬಾಯಿ ಕಳೆಸಿ ಎಂದು ಎಂತೆಂಥದೋ ಕೆಲಸ ಇಟ್ಟುಕೊಂಡು ಬರುವರು. ‘ಕವಲಕ್ಕಿಗೆ ದಂಡಯಾತ್ರೆ ಎತ್ತಿ ಬಂದು ದಿಗ್ವಿಜಯ ಮಾಡ್ಕಂಡು ಹೋಗುದಾ?’ ಎಂದು ಯಕ್ಷಗಾನದ ಶೈಲಿಯಲ್ಲಿ ನಾನವರಿಗೆ ತಮಾಷೆ ಮಾಡುವುದಿದೆ. ಅವರು ಮದ್ದಿಗೆಂದು ಬಂದಾಗೆಲ್ಲ ಅಬ್ಬಲಿಗೆ, ಮಲ್ಲಿಗೆಯ ದಂಡೆ, ಹಲಸು ಮಾವು ಮಗೆಕಾಯಿ ಬೆಲ್ಲ ಸಾನಬಾಳೆ ಅನಾನಸು ಮುಂತಾಗಿ ಎಂಥದೋ ಒಂದು ವಸ್ತು ಬಂದು ನಮ್ಮನೆ ಸೇರುವುದು.

ಅವರಿಬ್ಬರನ್ನು ತಪಾಸಣೆ ಮಾಡುವುದೆಂದರೆ ನಾಲ್ಕು ಜನರನ್ನು ನೋಡುವಷ್ಟು ಹೊತ್ತು ಬೇಕು. ಸರಸರ, ಅವಸರ ಎಲ್ಲ ಅವರಿಗೆ ಆಗಬರುವುದಿಲ್ಲ. ನಿಧಾನ ಟೇಬಲ್ ಮೇಲೆ ಮಲಗಿ, ಹಿಂದೆ ಬಂದು ಹೋದಲ್ಲಿಂದ ಇಂದಿನವರೆಗೆ ಏನೇನಾಯಿತೋ ಎಲ್ಲವನ್ನೂ ಅವರು ಹೇಳಬೇಕು, ನಾನು ಕೇಳಬೇಕು. ಅವರ ಕತೆ ಕಾಯಿಲೆಯದೇ ಇರಬೇಕು ಎಂದಿಲ್ಲ, ಅವರದ್ದೇ ಆಗಿರಬೇಕು ಎಂದೂ ಇಲ್ಲ. ಗಂಟಿಯಿಂದ ಹಿಡಿದು ಕೇರಿ ಮೇಲಿನ ಮದುವೆಯ ತನಕ ಎಲ್ಲವನ್ನೂ ಹೇಳಬೇಕು. ತಪಾಸಣೆಗೆಂದು ಮಲಗಿದಾಗ ಇವರ ಕಾಯಿಲೆ, ತಾಪತ್ರಯಗಳನ್ನು ಅವರು ವರ್ಣಿಸುವುದು, ಅವರಿಗಾದದ್ದನ್ನು ಇವರು ಹೇಳುವುದು ನೋಡಿದರೆ ಜೋಡಿ ಎಂದರೆ ಇವರದು ಎನಿಸುತ್ತಿತ್ತು. ಭಲೇ ಜೋಡಿ ಎಂದು ತಮಾಷೆ ಮಾಡುವುದೂ ಇತ್ತು. ಆ ಹಿರಿಯ ಜೀವಗಳೆಂದರೆ ನನಗೂ ಇಷ್ಟ. ಅದರಲ್ಲೂ ಅವರು ಅವರ ಕಾಲದ ಕತೆ ಹೇಳುವುದನ್ನು ಕೇಳಲು ಮತ್ತೂ ಇಷ್ಟ.

ಇಂಥವರಿಗೆ ಏನಾಯಿತೋ? ಸೂರ್ಯಚಂದ್ರರಿಗೂ ಗ್ರಹಣ ಬರುವಂತೆ ಅವರ ನಡುವೆ ಒಂದು ಪರ್ವತ ಬೆಳೆಯುತ್ತ ಹೋಯಿತು.

ಯಾತಕ್ಕೆ? ಮಕ್ಕಳಿಲ್ಲದ ಅವರ ಮನೆಯಲ್ಲಿ ಅಜ್ಜಿಯ ತಮ್ಮನ ಮಗಳು ಇದ್ದಳು. ಅಜ್ಜನ ಅಣ್ಣನ ಮಗನೂ ಇದ್ದ. ಸಣ್ಣಲ್ಲಿಂದ ತಮ್ಮೊಡನಿದ್ದ ಹುಡುಗಿಗೆ ಇವರೇ ಮದುವೆ ಮಾಡಿದರು. ಸಂಸಾರದೊಂದಿಗೆ ಇಲ್ಲೇ ಉಳಿದಳು. ಅಜ್ಜನ ಅಣ್ಣನ ಮಗ ದೊಡ್ಡವನಾದ ಮೇಲೆ ತನ್ನ ಮನೆಗೆ ಹೋದ. ಅದು ಯಾವುದೋ ಒಂದು ಗಳಿಗೆ. ಮನೆಯಲ್ಲಿರುವ ಹುಡುಗಿ ಹೆಸರಿಗೆ ಆಸ್ತಿ ವರ್ಗಾಯಿಸುವ ಅವಶ್ಯಕತೆ ಬಂತು. ಅಜ್ಜ ಒಪ್ಪುತ್ತಿಲ್ಲ. ತಮ್ಮ ಆಸ್ತಿ ಗಂಡುಹುಡುಗನಿಗೆ ಹೋಗಬೇಕು; ತನ್ನ ಅಣ್ಣನ ಮಗನಿಗೆ ಹೋಗಬೇಕೇ ಹೊರತು ಅಜ್ಜಿಯ ತಂಗಿಯ ಮಗಳಿಗಲ್ಲ ಎಂದು ಪಟ್ಟು ಹಿಡಿದ. ಅಜ್ಜಿಯೇನು ಕಡಿಮೆ? ಸಣ್ಣಲ್ಲಿಂದ ಇಲ್ಲೇ ಬೆಳೆದ ಹುಡುಗಿಯೇ ತಮ್ಮನ್ನು ನೋಡಿಕೊಳ್ಳುವವಳು, ಅವಳಿಗೇ ಆಸ್ತಿ ಬರೆಯಬೇಕು ಅಂದಿತು.

ಅಷ್ಟಕ್ಕೂ ಅದು ಯಾರ ಆಸ್ತಿ? ಅಜ್ಜ ಮದುವೆಯಾಗಿ ಅಜ್ಜಿಯ ತವರಿನಲ್ಲೇ ಮನೆಯಳಿಯನಾಗಿ ನಿಂತಿದ್ದ. ಅದು ಅಜ್ಜಿಯ ಆಸ್ತಿ. ಆದರೆ ಅಜ್ಜನ ಪ್ರಕಾರ ಅಳಿಯನಾಗಿ ಅವ ಬಂದ ಮೇಲೆ ಆ ಆಸ್ತಿ ಅವನದೇ ಆಗುತ್ತದೆ. ಹೆಣ್ಣು ಮಗಳಿಗೆ ಅವಳಪ್ಪನ ಆಸ್ತಿ ಸಿಗಬಹುದೆಂದು ಕಲ್ಪಿಸಲೂ, ಊಹಿಸಲೂ ಅವ ತಯಾರಿಲ್ಲ. ‘ತಾನು ಐವತ್ ವರ್ಷಗಟ್ಲೆ ಆ ತ್ವಾಟ ಗೆದ್ದೇಲಿ ಗೇಯ್ದಿದಿನಿ. ರಕ್ತ ನೀರ್ ಮಾಡೀನಿ. ಅದು ನನ್ ಆಸ್ತಿ ಅಂತದಲ್ಲ ಅದು?!’ ಎಂದು ಹೆಂಡತಿ ಮೇಲೆ ಯಮಕೋಪ ಬಂತು. ‘ನಾನು ಅಣ್ನ ಮಗಂಗೇ ಕೊಡುದ್ ಸೈಯಿ’ ಎಂದು ಪಟ್ಟು ಹಿಡಿದ. ಜಗಳ ಏರಿ ಲಾಯರ ಬಳಿ ಹೋದರು. ಕಾನೂನು ಹೇಗಿದೆಯೆಂದು ತಿಳಿದಮೇಲೆ ಅಜ್ಜ ದಂಗಾಗಿ ಹೋದ. ಹೆಂಗಸರಿಗೂ ಆಸ್ತಿ ಎಂದರೆ ಕೇಡಿನ ಕಾಲ ಬಂದೇ ಹೋಯ್ತು ಎಂದು ಭಾವಿಸಿದ. ಆದರೂ ಪಟ್ಟು ಬಿಡಲಾರ. ಹಠ ಹಿಡಿದು ಕುಳಿತ.

kavalakki mail

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಮಾತಿಗೆ ಮಾತು. ಗೋಡೆಗೆ ಮಣ್ಣು. ಎತ್ತರೆತ್ತರ ಬೆಳೆದೇ ಬೆಳೆಯಿತು. ಹಗಲಿನ ಮೇಲೆ ಬಂದ ರಾತ್ರಿ ಬೆಳೆದೇ ಬೆಳೆಯಿತು. ಅಜ್ಜ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ಇರುವಷ್ಟು ಜಗಳ ಮುಂದುವರೆಯಿತು. ಹಲವು ಸುತ್ತಿನ ಮಾತುಕತೆ ಆದರೂ ಪ್ರಯೋಜನವಿಲ್ಲ. ಅಜ್ಜ ತನ್ನ ಮೂಲ ಮನೆಯಲ್ಲಿ. ಅವನ ಅಣ್ಣಂದಿರು ತೀರಿಹೋಗಿದ್ದರೂ ಅವರ ಮಕ್ಕಳೊಡನೆ ಇದ್ದಾನೆ. ಅಡಿಕೆ ಕೊನೆ ಕುಯಿಲಿನ ಸಮಯದಲ್ಲಿ ಆಳುಗಳ ಜೊತೆ ಹೋಗಿ ತೋಟದ ಕೊನೆಯಿಳಿಸಿಕೊಂಡು ಬಂದು ಗಲಾಟೆ ಮಾಡಿದ್ದಾನೆ. ಅಜ್ಜಿ ಅಜ್ಜನ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ. ಅವ ಒಂದು ದಿನ ರಾತ್ರಿ ಹೋಗಿ ತಾನೇ ನೆಟ್ಟ ಬಾಳೆಗಿಡಗಳನ್ನು ಯಾರಿಗೂ ಕಾಣದಂತೆ ಉರುಳಿಸಿ ಬಂದಿದ್ದಾನೆ. ಅವನಿಗೆ ಒಂದು ತರಹದ ರೋಷ ಆವರಿಸಿ ಬುದ್ಧಿ ಭ್ರಮಣೆ ಆಯಿತು. ಅದರ ನಡುವೆ ದಮ್ಮಿನ ಕಾಯಿಲೆ ಉಲ್ಬಣವಾಯಿತು. ನೆಂಟರು ಅದರ ಲಾಭ ಪಡೆಯಲು ಹವಣಿಸಿದರು.

ನನ್ನ ಬಳಿ ಇಬ್ಬರೂ ಪ್ರತ್ಯೇಕ ಬರತೊಡಗಿದರು. ಗಂಡ ಬಂದಿದ್ದನೇ, ಹೇಗಿದ್ದಾರೆ ಎಂದು ಅಜ್ಜಿ ಅವರ ಆರೋಗ್ಯ ವಿಚಾರಿಸಿ, ಅವರ ಭಾವನ ಮಕ್ಕಳು ಮಾಡಿಸಿದ ಮಾಟಕ್ಕೆ ಅಜ್ಜ ಹೀಗಾದ ಎಂದು ಕಣ್ಣೀರು ಮಿಡಿಯುವಳು. ಅಜ್ಜ ಬಂದಾಗ ಅಜ್ಜಿಯ ಬಗೆಗೆ ಏನೂ ಕೇಳ. ನನ್ನ ಮುಖ ನೋಡಿ ಅವಳ ಹೆಸರಿನಲ್ಲಿ ನಾಕು ಬಯ್ದು ತನ್ನ ಸಿಟ್ಟು ತೀರಿಸಿಕೊಳ್ಳುತ್ತಿದ್ದ. ಅಜ್ಜನ ಆಸ್ತಿ ಮೇಲೆ ಕಣ್ಣಿಟ್ಟವರು ಅವನನ್ನು ಎತ್ತಿ ಕಟ್ಟುವುದು, ಅವನ ಹೆಸರಿನ ಬ್ಯಾಂಕ್ ದುಡ್ಡನ್ನು ಬಳಸುವುದು, ಬೆಳೆಸಾಲ ತೆಗೆಸುವುದು ನಡೆಯುತ್ತ ಇತ್ತು. ಆವಾಗೀವಾಗ ಅವನನ್ನು ಕರೆತರುವುದೂ ಇತ್ತು. ಗುಬ್ಬಿಯಂತಹ ಸಣ್ಣದೇಹದ ಅಜ್ಜ ಈಗ ಚಿಟ್ಟೆಯಷ್ಟು ಹಗುರವಾಗಿಬಿಟ್ಟಿದ್ದ. ಮನವೂ ಅಷ್ಟೆ, ಚಿಟ್ಟೆಯಂತೆ, ಸ್ಥಿಮಿತ ಕಳೆದುಕೊಂಡಿತ್ತು. ಕಾನೂನು, ಸರಿತಪ್ಪುಗಳ ವಿವೇಚನೆಯನ್ನೇ ಬಿಟ್ಟುಕೊಡುವಷ್ಟು ರೋಷಭರಿತನಾಗಿದ್ದ.

ಅವರನ್ನು ಪ್ರತ್ಯೇಕವಾಗಿ ಕಂಡಾಗಲೆಲ್ಲ ನೋವಾಗುತ್ತಿತ್ತು. ಒಮ್ಮೆ ಅಜ್ಜಿಗೆ ಅಜ್ಜನ ಸಹಿ ಬೇಕಾಯಿತು. ಮೊಬೈಲು ಟವರು ಅಜ್ಜಿಯ ಜಾಗದಲ್ಲಿ ಏಳುವಾಗ ಕಾಂಟ್ರ್ಯಾಕ್ಟ್ ಪತ್ರಕ್ಕೆ ಅವನ ಸಹಿಯೂ ಬೇಕಿತ್ತು. ಆಗ ಮಧ್ಯಸ್ತಿಕೆ ಮಾಡಿ ಸಹಿ ಹಾಕಿಸಿ, ತಿಂಗಳ ಬಾಡಿಗೆ ಆರೂವರೆ ಸಾವಿರದಲ್ಲಿ ಅರ್ಧರ್ಧ ಹಂಚಿಕೊಳ್ಳಿ ಎಂದು ಒಪ್ಪಿಸಿದ್ದು ಇದೆ. ಯಾರಾದರೂ ಒಬ್ಬರು ಸೋತು ಗೆಲ್ಲದಿದ್ದರೆ ಯಾರಿಗೂ ಗೆಲುವು ಸಿಗುವುದಿಲ್ಲ ಎಂದು ಇಬ್ಬರಿಗೂ ಹೇಳಿದ್ದೂ ಇದೆ.

ಹೀಗಿರುತ್ತ ಕೊರೋನಾ ಬಂತು. ಕಾಯಂ ದಮ್ಮಿನ ಅಜ್ಜನಿಗೆ ಸೀರಿಯಸ್ ಆಯಿತು. ಕೊರೋನಾ ಇರಬಹುದೇನೋ ಎಂದು ಅವನಿದ್ದ ಮನೆಯವರು ಅವನನ್ನು ಮುಟ್ಟಲೂ ಇಲ್ಲ. ಮಲಗಿದಲ್ಲೇ ಎಲ್ಲ. ಅಜ್ಜ ಸಾಯುವಂತಾದ ಸುದ್ದಿ ಅಜ್ಜಿಗೆ ತಿಳಿಯಿತು. ಸೀದಾ ನೆಂಟರ ಮನೆಗೆ ಹೋಗಿ, ಮಾರಾಮಾರಿ ಜಗಳ ಆಡಿದಳು. ‘ಕೊರೊನ ಇಲ್ಲ ಯಂತದು ಇಲ್ಲ, ಅವ್ರಿಗೆ ಯಾವಾಗ್ಲು ದಮ್ಮು. ಅವ್ರುನ್ನ ಕೊಲ್ಲುಕೆ ಕರ್ಕಬಂದಿದಿರ’ ಎಂದು ಸಾಲಸೋಲ ಮಾಡಿ ಮಣಿಪಾಲದವರೆಗೆ ಅಜ್ಜನನ್ನೊಯ್ದು ಚಿಕಿತ್ಸೆ ಕೊಡಿಸಿದಳು. ಗುಣವಾದವನನ್ನು ಸೀದ ಮನೆಗೆ ಕರೆತಂದಳು. ಮನೆಗೆ ಬಂದಮೇಲೆ ಹುಶಾರಾದ ಅಜ್ಜನನ್ನು ‘ಚೆಕಪ್ಪಿಗೆ’ ಕರೆತಂದು, ಜೊತೆಗೆ ತಾನೂ ಬಂದು ಅತ್ಯಾಶ್ಚರ್ಯವನ್ನೂ, ಅತ್ಯಾನಂದವನ್ನೂ ಹುಟ್ಟಿಸಿದಳು.

ಈಗ ಇಬ್ಬರೂ ಮತ್ತೆ ಒಟ್ಟೊಟ್ಟಿಗೆ ಮದ್ದಿಗೆ ಬರುತ್ತಿರುತ್ತಾರೆ. ‘ಮತ್ ಮನಿ ಬಿಟ್ ಯಾವಾಗ್ ಹೊರಡ್ತರಂತೆ ಬಗೇಲಿ ಕೇಳಿ’ ಎಂದು ಅಜ್ಜಿ ನಗೆಚಾಟಿಕೆ ಹಾರಿಸುತ್ತಾಳೆ. ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’ ಎಂದು ನಗೆಯಾಡುತ್ತಾಳೆ. ಈಗ ಅಜ್ಜ ಮೌನಿಯಾಗಿದ್ದಾನೆ. ಯಾವುದಕ್ಕೂ ಅವನ ಮಾತೇ ಇಲ್ಲ. ಅದು ಶಾಂತಿಯೋ, ಮತ್ತಿನ್ನಾವ ಮುನ್ಸೂಚನೆಯೋ ಕಾಲವೇ ಹೇಳಬೇಕು. ‘ಕೊರೊನ ಬಂದದೆ ಅಂತ ಅಮ್ಮ ಹೇಳ್ದ್ರಲ, ಸರಿ ಹಾಕ್ಕಳ್ರಾ’ ಎಂದು ಗಂಡನ ಮಾಸ್ಕನ್ನು ಪದೇಪದೇ ಸರಿ ಮಾಡುವ ಅವಳ ಆಶಾವಾದ ನಮ್ಮಲ್ಲಿ ಭರವಸೆ ತುಂಬುತ್ತದೆ.

* ಪದಗಳ ಅರ್ಥ

ಕತ್ತಿಯ ಬಾಯಿ ಕಳೆಸುವುದು = ಆಚಾರಿ ಸಾಲೆಯಲ್ಲಿ ಹರಿತ ಮಾಡುವುದು ಗಂಟಿ = ದನಕರು ಬಗೇಲಿ = ಸ್ವಲ್ಪ *

ಫೋಟೋ : ಡಾ. ನಿಸರ್ಗ, ಹೈದರಾಬಾದ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 4 : ‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ?’  

ಇದನ್ನೂ ಓದಿ Covid Diary : ಕವಲಕ್ಕಿ ಮೇಲ್ ; ‘ಏಯ್ ತಮಾ, ಮಾಸ್ಕ್ ಅಂದ್ರ ಚಡ್ಡಿ ತರಹ ನಮ್ದನ್ನೇ ನಾವು ಹಾಕಬೇಕು ಗೊತ್ತಾಯ್ತ?‘

Published On - 1:55 pm, Thu, 3 June 21

ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್