Covid Diary : ಕವಲಕ್ಕಿ ಮೇಲ್ ; ‘ಏಯ್ ತಮಾ, ಮಾಸ್ಕ್ ಅಂದ್ರ ಚಡ್ಡಿ ತರಹ ನಮ್ದನ್ನೇ ನಾವು ಹಾಕಬೇಕು ಗೊತ್ತಾಯ್ತ?‘

Corona Mask : ‘ಇಪ್ಪತ್ತು ಕಿಮೀ ರಸ್ತೆ ಮೇಲೆ ಹೋಗಿ, ಬಳಿಕ ತಾರಿಯಲ್ಲಿ ಶರಾವತಿ ಹೊಳೆ ದಾಟಿ ಅವರ ದ್ವೀಪದಂತಹ ಊರಿಗೆ ನಡೆದು ಹೋಗಬೇಕು. ಒಮ್ಮೆ ಬಂದು ಹೋಗಲು ಐದಾರುನೂರು ರೂಪಾಯಿ ಕಡಿಮೆ ಯಾರೂ ಬಾಡಿಗೆಗೆ ಬರುವುದಿಲ್ಲ. ಹಾಗಾಗಿ ಒಂದು ರಿಕ್ಷಾ ಮಾಡಿ ಅಕ್ಕಪಕ್ಕದ ಮನೆಯವರು ಹಂಚಿಕೊಂಡು ಬರುವುದು ಹೆಚ್ಚು.‘ ಡಾ. ಎಚ್. ಎಸ್. ಅನುಪಮಾ

Covid Diary : ಕವಲಕ್ಕಿ ಮೇಲ್ ; ‘ಏಯ್ ತಮಾ, ಮಾಸ್ಕ್ ಅಂದ್ರ ಚಡ್ಡಿ ತರಹ ನಮ್ದನ್ನೇ ನಾವು ಹಾಕಬೇಕು ಗೊತ್ತಾಯ್ತ?‘
Follow us
|

Updated on:Jun 02, 2021 | 3:13 PM

‘ಎಲ್ಲ ನೋಡಿದಿನಿ. ಕೊರೊನ ಎಲ್ಲ ಇಲ್ಲಿಲ್ಲ. ಅದು ದುಡ್ ಮಾಡುಕ್ ಹಬ್ಸಿರು ಸುದ್ದಿ ಅಂತೆ. ಏನೇ ಸೀಕು ಅಂತ ಹೋದ್ರು ಕೊರೊನ ಅಂತಾರೆ. ಹಾರ್ಟಟಾಕ್ ಆದ್ರು ಕೊರೊನ, ತಂಡಿ ಕೆಮ್ಮಾದ್ರು ಕೊರೊನ, ಗಂಟ್ಲುನೋವು ಆದ್ರು ಕೊರೊನ, ಸುಸ್ತಾದ್ರು ಕೊರೊನ, ಊಟ ಮೆಚ್ಚುದಿಲ್ಲ ಅಂದ್ರು ಕೊರೊನ. ನಂಗಂತೂ ಕೊರೊನ ಅಂತ ಯಾರಾದ್ರು ಹೇಳಿದ್ರೆ ಎರ್ಡು ಹೊಡೀಲಂಬಂಗಾಗದೆ. ಕ್ಯಾನ್ಸರ್ ಪೇಶೆಂಟು ನಮ್ಮಾವ, ಮಂಗ್ಳೂರಿಗೆ ಹೋಗಿ ಜರ ಬಂದು ತೀರ್ಕಂಡ, ಅವ್ನಿಗೆ ಕೊರೊನ ಅಂತ ಹೆಣಾ ಕೊಡ್ಲಿಲ್ಲ, ಕಾರ್ಯ ಮಾಡುಕ್ ಕೊಡಲಿಲ್ಲ ಗುತ್ತಾ? ಸಾಯ್ಲಿ.’ ಹಂಗಾದ್ರೆ ಕೊರೊನ ಅನ್ನೋ ಕಾಯ್ಲೆ ಇಲ್ಲ ಅಲ್ವ, ನಾಳೆಯಿಂದ ಆಸ್ಪತ್ರೆಗೆ ಬಂದು ಹೆಲ್ಪ್ ಮಾಡ್ತಿಯ? ಅಥವಾ ಅಲ್ಲೆಲ್ಲ ಜನ ಸತ್‍ಸತ್ ಬೀಳ್ತಿದಾರಂತೆ, ಹೆಣ ಸುಡೋರು ಗತಿಯಿಲ್ಲಂತೆ. ಅಲ್ಲಿಗ್ ಹೋಗಿ ಸಹಾಯ ಮಾಡು.

*

‘ನಮ್ಗೆ ಬ್ಯಾಗ್ ಬಿಡಿ ಅಮಾ. ರಿಕ್ಷಾದವ ಕೂಗ್ತೇ ಅವ್ನೆ, ನಮ್ ತಾರಿ ಬಾಗ್ಲು ಹನ್ನೊಂದ್ ಗಂಟೇಕ್ಕೆ ಬಂದಾಗ್ತದೆ.’

ಈ ತರಹದ ಕೇಳಿಕೆ ನಮಗೆ ಸಾಮಾನ್ಯ. ಒಂದೂವರೆ ವರ್ಷವಾಯಿತು, ಅಡವಿಯೊಳಗೊಳಗಿನ ಊರುಗಳಿಗೆ ಬಸ್ ಹೋಗುತ್ತಿಲ್ಲ. ಶಾಲೆ ಕಾಲೇಜಿಗೆ ಹೋಗುವ ಮಕ್ಕಳೂ ಇಲ್ಲವಾಗಿ ಬಸ್ ಬಿಡುವ ತುರ್ತು ಆಳುವವರಿಗಿಲ್ಲ. ಬರಿಯ ಹೈವೇ ಮೇಲೆ, ದೊಡ್ಡ ರಸ್ತೆ ಮೇಲೆ ಇರುವ ಊರುಗಳಿಗಷ್ಟೇ ಬಸ್ ಹೋಗುತ್ತಿದ್ದವು. ಉಳಿದವರು ಗೂಡ್ಸ್ ರಿಕ್ಷಾ, ಆಟೋ, ಬೈಕು, ಮರಳು-ತೆಂಗಿನಕಾಯಿ-ಅಡಕೆ-ಎಲೆ ಸಾಗಿಸುವ ಬೊಲೆರೊ, ಜೀಪುಗಳನ್ನೇ ನೆಚ್ಚಿಕೊಂಡಿದ್ದರು. ಲಾಕ್‍ಡೌನ್ ಇರುವಾಗಲಂತೂ ಮುಗಿಯಿತು. ಮನೆಯಲ್ಲಿ ವಾಹನ ಇಲ್ಲದವರು ಓಡಾಟಕ್ಕೆ ಪ್ರತ್ಯೇಕ ರಿಕ್ಷಾ ಮಾಡಬೇಕು.

ಅವರು ಐದು ಜನ ಒಂದೇ ನಂಬರ್ ತೆಗೆದುಕೊಂಡಿದ್ದರು. ಎಲ್ಲರೂ ಒಂದೇ ರಿಕ್ಷಾದ ಪಯಣಿಗರು. ಎಲ್ಲರಿಗೂ ಜ್ವರ. ಅವರು ರಸ್ತೆಮೇಲೆ ಪಯಣಿಸಿ, ತಾರಿಬಾಗಿಲು ಮುಟ್ಟಿ, ದೋಣಿಯಲ್ಲಿ ದಾಟಿ ತಮ್ಮೂರು ಸೇರಬೇಕು. ಬೆಳಿಗ್ಗೆ ಹನ್ನೊಂದರ ಒಳಗೆ ತಾರಿಬಾಗಿಲು ಮುಟ್ಟಬೇಕು. ಅದಕ್ಕೇ ಬರುವುದರೊಳಗೆ ಅವಸರ.

‘ಒಬ್ಬೊಬ್ಬರೇ ಒಳಬನ್ನಿ, ಮಾಸ್ಕ್ ಹಾಕ್ಕೊಂಡೇ ಬನ್ನಿ, ಬಾಗ್ಲಿಗೆ ನಿಲ್ಬೇಡಿ, ಕರೀತೆ’ ಎಂದು ಸಾಂಡ್ರಾ ಒಂದೇಸಮ ಹೇಳುತ್ತಿದ್ದಳು. ಎರಡು ಸಣ್ಣ ಹುಡುಗರು ಮೂವರು ದೊಡ್ಡವರ ತೊಡೆ ಮೇಲೆ ಕೂತು ಬಂದಿದ್ದಾರೆ. ಇಪ್ಪತ್ತು ಕಿಮೀ ರಸ್ತೆ ಮೇಲೆ ಹೋಗಿ, ಬಳಿಕ ತಾರಿಯಲ್ಲಿ ಶರಾವತಿ ಹೊಳೆ ದಾಟಿ ಅವರ ದ್ವೀಪದಂತಹ ಊರಿಗೆ ನಡೆದು ಹೋಗಬೇಕು. ಒಮ್ಮೆ ಬಂದು ಹೋಗಲು ಐದಾರುನೂರು ರೂಪಾಯಿ ಕಡಿಮೆ ಯಾರೂ ಬಾಡಿಗೆಗೆ ಬರುವುದಿಲ್ಲ. ಹಾಗಾಗಿ ಒಂದು ರಿಕ್ಷಾ ಮಾಡಿ ಅಕ್ಕಪಕ್ಕದ ಮನೆಯವರು ಹಂಚಿಕೊಂಡು ಬರುವುದು ಹೆಚ್ಚು.

ಎರಡನೆಯ ಪೇಶೆಂಟ್ ಆಗಿದ್ದ ಅಮ್ಮ ಹೊರಹೋಗುವಾಗ ಒಳಬರುವ ಮಗನಿಗೆ ತನ್ನ ಮಾಸ್ಕ್ ತೆಗೆದುಕೊಟ್ಟದ್ದು ಕಾಣಿಸಿತು. ಆಗ ಐವರಲ್ಲಿ ಎಲ್ಲರ ಬಳಿ ಮಾಸ್ಕ್ ಇಲ್ಲ ಎಂದು ಗೊತ್ತಾಯಿತು. `ಮಾಸ್ಕ್ ಅಂದ್ರೆ ಚಡ್ಡಿ ತರಹ. ನಮ್ದನ್ನೇ ನಾವು ಹಾಕಬೇಕು. ಬೇರೆಯೋರದ್ದು ಬಳಸಬಾರದು ತಮಾ, ಗೊತ್ತಾಯ್ತ? ಒಂದ್ವರ್ಷ ಕಾಲೇಜಿಗ್ ರಜೆ ಕೊಟ್ರು ಮಾಸ್ಕ್ ಹಾಕದು ಕಲಿಲಿಲ್ವ ನೀನು’ ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ಅಷ್ಟರಲ್ಲಿ, `ಮನೆಯಾಗೆ ಹತ್ತನ್ನೇಡ್ ಇದಾವ್ರಾ. ಬರ್ತ ತಕಬರುಕ್ ಮರ್ತೋತು’ ಎಂದು ಅವನಮ್ಮ ಒಳಗಿಣುಕಿ ಸಮಜಾಯಿಷಿ ಕೊಟ್ಟು ಹೊರಹೋದಳು. ಕೆಮ್ಮುತ್ತಿದ್ದ ಅವಳ ಮಾಸ್ಕ್ ಏರಿಸಿ ಹುಡುಗ ಒಳಬಂದ. ನಾನವನ ಎದುರು ಟೇಬಲ್ ಬಳಿ ಬಂದದ್ದೇ ಮಾಸ್ಕನ್ನು ಕೆಳಗಿಳಿಸಿದ. ಅರೇ! ಮಾಸ್ಕ್ ಕೆಳಗಿಳಿಸುವುದು ಎದುರಿಗಿರುವವರಿಗೆ ತೋರುವ ಗೌರವ ಎಂದು ಜನ ಭಾವಿಸಿರುವರೇ? `ನಂಗೆಂತ ಆಗುದಿಲ್ಲ ಮೇಡಂ. ನಾ ಒಂದ್ ವರ್ಷಲಿಂದ ಮಾಸ್ಕ್ ಇಲ್ದೆ ಹೊಂಯ್ಗೆ ಕೆಲ್ಸ ಮಾಡಿದಿನಿ, ನಂಗೆ ಕೊರೊನನು ಬರ್ಲಿಲ್ಲ, ಎಂತ ಮಣ್ಣೂ ಇಲ್ಲ’ ಎಂದು ಪರೀಕ್ಷಿಸುವ ಮಂಚದ ಮೇಲೆ ಧಪ್ಪನೆ ಮಲಗಿದ!

kavalakki mail

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅವನಿಗೆ ಜ್ವರವಿತ್ತು. ಆದರೆ ತನಗೆ ಜ್ವರವೇ ಇಲ್ಲ ಎಂದು ವಾದಿಸಿದ. ಅವನ ಪ್ರಕಾರ ನಿದ್ದೆ ಬಿಟ್ಟು ಕೆಲಸ ಮಾಡಿ ಅವನಿಗೆ ಹೀಟ್ ಆಗಿ ಮೈ ಬಿಸಿಯಾಗಿದೆ. ಲೋ ಬಿಪಿ ಆಗಿ ಸುಸ್ತಾಗಿದೆ. ಹೆವಿ ಕೆಲಸ ಮಾಡಿ ಮೈಕೈನೋವು ಆಗಿದೆ. ಕಲ್ಲಂಗಡಿ ಹಣ್ಣು ತಿಂದು, ಕೋಲ್ಡ್ ಕುಡಿದು, ಫ್ರೈ ತಿಂದು ಪ್ರತಿವರ್ಷದಂತೆ ಈ ಸಲವೂ ಗಂಟಲುನೋವು ಆಗಿದೆ. ಈ ಮೊದಲು ಅವನೆಷ್ಟೋ ಸಲ ಇಲ್ಲಿಗೆ ಬಂದಿದ್ದಾನೆ, ನಾನೇ ಅವನಿಗೆ ಮದ್ದು ಕೊಟ್ಟು ಗುಣವಾಗಿದೆ. ಈಗ ಅದನ್ನೇ ಕೊಟ್ಟರೆ ಸಾಕು.

‘ನೀ ಕಲಿತಾಂವ ಆಗಿ ಹಿಂಗೆ ಹೇಳ್ತೀಯಲ ತಮ್ಮಾ? ಟಿವಿ, ಪೇಪರು, ವಾಟ್ಸಪ್‍ನಲ್ಲಿ ನೋಡಲಿಲ್ವ?’

‘ಎಲ್ಲ ನೋಡಿದಿನಿ. ಕೊರೊನ ಎಲ್ಲ ಇಲ್ಲಿಲ್ಲ. ಅದು ದುಡ್ ಮಾಡುಕ್ ಹಬ್ಸಿರು ಸುದ್ದಿ ಅಂತೆ. ಏನೇ ಸೀಕು ಅಂತ ಹೋದ್ರು ಕೊರೊನ ಅಂತಾರೆ. ಹಾರ್ಟಟಾಕ್ ಆದ್ರು ಕೊರೊನ, ತಂಡಿ ಕೆಮ್ಮಾದ್ರು ಕೊರೊನ, ಗಂಟ್ಲುನೋವು ಆದ್ರು ಕೊರೊನ, ಸುಸ್ತಾದ್ರು ಕೊರೊನ, ಊಟ ಮೆಚ್ಚುದಿಲ್ಲ ಅಂದ್ರು ಕೊರೊನ. ನಂಗಂತೂ ಕೊರೊನ ಅಂತ ಯಾರಾದ್ರು ಹೇಳಿದ್ರೆ ಎರ್ಡು ಹೊಡೀಲಂಬಂಗಾಗದೆ. ಕ್ಯಾನ್ಸರ್ ಪೇಶೆಂಟು ನಮ್ಮಾವ, ಮಂಗ್ಳೂರಿಗೆ ಹೋಗಿ ಜರ ಬಂದು ತೀರ್ಕಂಡ, ಅವ್ನಿಗೆ ಕೊರೊನ ಅಂತ ಹೆಣಾ ಕೊಡ್ಲಿಲ್ಲ, ಕಾರ್ಯ ಮಾಡುಕ್ ಕೊಡಲಿಲ್ಲ ಗುತ್ತಾ? ಸಾಯ್ಲಿ.’

‘ಹಂಗಾದ್ರೆ ಕೊರೊನ ಅನ್ನೋ ಕಾಯ್ಲೆ ಇಲ್ಲ ಅಲ್ವ, ನಾಳೆಯಿಂದ ಆಸ್ಪತ್ರೆಗೆ ಬಂದು ಹೆಲ್ಪ್ ಮಾಡ್ತಿಯ? ಅಥವಾ ಅಲ್ಲೆಲ್ಲ ಜನ ಸತ್‍ಸತ್ ಬೀಳ್ತಿದಾರಂತೆ, ಹೆಣ ಸುಡೋರು ಗತಿಯಿಲ್ಲಂತೆ. ಅಲ್ಲಿಗ್ ಹೋಗಿ ಸಹಾಯ ಮಾಡು’

‘ಸಾಯುದೆಲ್ಲ ಬೆಂಗ್ಳೂರಲ್ಲಿ. ತಾವೇನೋ ಮಹಾ ಕಡಿತ್ರು ಹೇಳ್ಕಂಡಿ ಬೆಂಗ್ಳೂರ್ಗೆ ಹೋಗಾರೆ, ಸಾಯ್ಲಿ ಅವ್ರು.’

‘ಬೆಂಗ್ಳೂರಲ್ಲಿ ಇರೋರು ನಮ್ಮೋರೇ ಅಲ್ಲೆನೊ? ಅಲ್ಲಷ್ಟೆ ಅಲ್ಲ, ಎಲ್ಲ ಕಡೆ ಸಾಯ್ತಾ ಇದಾರಲ? ಇಲ್ಲೂ ಎಷ್ಟು ಜನ ಹೋಗಲಿಲ್ವ?’

‘ಗಟ್ಟಿ ಇದ್ದೋರು ಉಳೀತರೆ, ಉಳದೋರು ಸಾಯ್ತರೆ’

‘ಹಂಗಂತ ನಮ್ಮಮ್ಮ, ಅಕ್ತಂಗೀರ ಬಗ್ಗೆ ಹೇಳಕ್ಕಾಗುತ್ತ? ಯೋಚ್ನೆ ಮಾಡು.’

‘ನಂಗೊಂದು ವಾಟ್ಸೆಪ್ ಬಂದದೆ. ಬ್ಯಾಕ್ಟೀರಿಯ ವೈರಸ್ ಏನು ಇಲ್ವಂತೆ. ರಕ್ತ ಹೆಪ್ಪುಗಟ್ಟಿ ಆಗದಂತೆ. ಇಷ್ಟೆ ಕೋವಿಡ್ಡು, ಮತ್ತೆಲ್ಲ ಸುಳ್ಳು, ಇದ್ನ ನಿಮ್ಗೆ ಗೊತ್ತಿರರ್ಗೆಲ್ಲ ಕಳಸಿ ಅಂತ ಅದೆ ಅದ್ರಾಗೆ. ಅಮೆರಿಕದಲ್ಲಿ ಹುಡ್ರೆಲ್ಲ ಕೋವಿಡ್ ಪಾರ್ಟಿ ಮಾಡ್ತರಂತೆ. ಇಲ್ಲಿ ಮಾತ್ರ ಬರಿ ಕೊರೊನ, ಕೊರೊನ ಅಂತ ತಗದ್ರು ನಮ್ನ. ಜಾತ್ರಿಲ್ಲ, ಹಬ್ಬ ಇಲ್ಲ. ಎಲ್ಲ ಡಾಕ್ಟರ್‍ದಿಕ್ಳು ದುಡ್ ಮಾಡುಕೆ ಅಂತ ಏನೋ ಎಂಟೆಂಟ್ಲೆ ಮಾಡಿರದು. ನೀವೂ ಅದ್ನೆ ಹೇಳಬ್ಯಾಡಿ.’

‘ವಾಟ್ಸಪ್‍ನಲ್ಲಿ ಬಂದಿದ್ನೆಲ್ಲ ನಂಬಬೇಡ ತಮಾ. ವರ್ಷಗಟ್ಲೆ ಶಾಲೆ ಕಾಲೇಜು ಮುಚ್ಚಿದ್ದು ಇತ್ತ? ಆಸ್ಪತ್ರೆ, ಏರ್‍ಪೋರ್ಟು, ಮಾಲು, ಹೋಟೆಲು, ಲಾಡ್ಜು, ಬಂಗಾರ-ಬಟ್ಟೆ ಅಂಗಡಿ ಮುಚ್ಚಿದ್ದಿತ್ತ? ಬಸ್ಸು ರೈಲು ಬ್ಯಾಂಕು ಬಾರು ನಿಂತಿದ್ದಿತ್ತ? ದೇವಸ್ಥಾನ ಬಾಗ್ಲು ಹಾಕಿದ್ದಿತ್ತ? ಎಂದೆಂದೂ ಯಾವತ್ತೂ ಮುಚ್ದೇ ಇಲ್ಲದಿದ್ದೆಲ್ಲ ಮುಚ್ಚಿ ಬಾಗ್ಲು ಹಾಕ್ಕಂಡಿದಾವಲ್ಲ? ರಸ್ತೆಮೇಲೆ ಪ್ರಾಣಿಪಕ್ಷಿ ಆರಾಮಾಗಿ ಅಡ್ಡಾಡ್ತ ಇದಾವಲ? ಬಡವ್ರಿಗೆ ಅನ್ನ ನೀರು ಇಲ್ದೆ ಸಾವ್ರಾರು ಮೈಲಿ ನಡೆದಿದ್ದು ಸುಮ್ನೆನ? ಯೋಚ್ನೆ ಮಾಡು. ನೀನು ಜಾಣ, ಏನೇನನ್ನೆಲ್ಲ ನಂಬಬ್ಯಾಡ. ನಾಳೆ ನಿಮ್ದು ಈ ದೇಶ. ಅದು ಚೆನ್ನಾಗಿರ್ಬೇಕು. ದೇಶ ಕಾಪಾಡೋರು ನೀವೆ. ಕನಿಷ್ಟ ಮಾಸ್ಕ್ ಹಾಕ್ಕೋ. ನೀನೂ ಟೆಸ್ಟ್ ಮಾಡ್ಕೊ, ಮನೆಯವರಿಗೂ ಹೇಳಿ ಮಾಡ್ಸು’

ಮೌನ.

ಮುಂದೆ ಪರೀಕ್ಷೆ, ಔಷಧಿ. ಬಾಗಿಲು ದಾಟಿದ್ದೇ ಮಾಸ್ಕ್ ಕಿತ್ತು ಬಿಸಾಡಿ ಡಸ್ಟ್​ಬಿನ್ನಿಗೆ ಹಾಕಿದ್ದು ಗೊತ್ತಾಯಿತು.

ಯಾತರ ಮೇಲೆ ಸಿಟ್ಟು? ಯಾರ ಮೇಲೆ ತೀರಿಸಿಕೊಳ್ಳುವುದು? ಕೊರೋನವೇ, ಕಾಪಾಡು ಅಂದುಕೊಳ್ಳುವಾಗ ಹಿಂಬಾಗಿಲಿನಿಂದ ಬಂದು ಇಪ್ಪತ್ತು ರೂಪಾಯಿಯ ಐದು ಮಾಸ್ಕ್ ಖರೀದಿಸಿದ ಎಂದು ಆಶಾ ನಗುತ್ತ ಹೇಳಿದಳು.

* ಪದಗಳ ಅರ್ಥ

(ತಾರಿ ಬಾಗಿಲು = ದೋಣಿ ನಿಲ್ಲುವ ಸ್ಥಳ ಎಂಟೆಂಟ್ಲೆ = ಸಂಚು ಡಾಕ್ಟರ್‍ದಿಕ್ಳು = ಡಾಕ್ಟರುಗಳು) * ಫೋಟೋ ಸೌಜನ್ಯ : ಡಾ. ಕೃಷ್ಣ ಗಿಳಿಯಾರ್

ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 3 ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’ 

ಇದನ್ನೂ ಓದಿ : Covid Diary : ಫೆನ್ನಿರಾಯನೆಂಬ ಸಮಾಜಸೇವಕನೂ ಮತ್ತವನ ‘ಅದು’ ಕ್ಲಿನಿಕ್ಕಿಗೆ ಬಂದ ದಿನ

Published On - 3:08 pm, Wed, 2 June 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ