IPL 2025: ಆರ್ಸಿಬಿ ಕೈಬಿಟ್ಟ ಕನ್ನಡಿಗ ವೈಶಾಕ್ ಪಂಜಾಬ್‌ಗೆ ಗೆಲುವು ತಂದಿದ್ದು ಹೇಗೆ? ಪಾಂಟಿಂಗ್ ಹೇಳ್ತಾರೆ ಕೇಳಿ
Punjab Kings IPL 2025 Win: ಐಪಿಎಲ್ 2025 ರ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ ಅವರ 97 ರನ್‌ಗಳ ಅದ್ಭುತ ಇನಿಂಗ್ಸ್ ಮತ್ತು ವೈಶಾಕ್ ವಿಜಯ್ ಕುಮಾರ್ ಅವರ ನಿರ್ಣಾಯಕ ಬೌಲಿಂಗ್ ಪಂಜಾಬ್‌ಗೆ ಗೆಲುವು ತಂದುಕೊಟ್ಟವು. ಶ್ರೇಯಸ್ ಅವರ ತಂತ್ರಗಾರಿಕೆ ಮತ್ತು ವೈಶಾಕ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡಿದ್ದು ಪಂದ್ಯದ ತಿರುವು ಮುಖ್ಯ ಕಾರಣವಾಗಿತ್ತು. ಈ ಗೆಲುವಿನಿಂದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆದಿದೆ.
ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ರೋಮಾಂಚಕ ಪಂದ್ಯದಲ್ಲಿ ಪಂಜಾಬ್, ಗುಜರಾತ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಈ ಗೆಲುವಿನ ಪ್ರಮುಖ ಪಾತ್ರವಹಿಸಿದ ನಾಯಕ ಶ್ರೇಯಸ್ ಅಯ್ಯರ್, ಬ್ಯಾಟಿಂಗ್ನಲ್ಲಿ 97 ರನ್ ಬಾರಿಸುವುದರ ಜೊತೆಗೆ, ಅವರ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರವು ಪಂಜಾಬ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು. ಈ ಪಂದ್ಯದ ಒಂದು ಹಂತದಲ್ಲಿ ಗುಜರಾತ್ ಗೆಲುವು ಖಚಿತವೆನಿಸಿತ್ತು. ಆದರೆ 15ನೇ ಓವರ್‌ನಲ್ಲಿ ಅಯ್ಯರ್ ತೆಗೆದುಕೊಂಡ ನಿರ್ಧಾರವು ಪಂದ್ಯದಲ್ಲಿ ಪಂಜಾಬ್ ಮೇಲುಗೈ ಸಾಧಿಸುವಂತೆ ಮಾಡಿತು. ಪಂಜಾಬ್ ಗೆಲುವಿನ ನಂತರ, ಮುಖ್ಯ ಕೋಚ್ ರಿಕಿ ಪಾಂಟಿಂಗ್, ಶ್ರೇಯಸ್ ತೆಗೆದುಕೊಂಡ ಆ ನಿರ್ಧಾರ ಏನಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ರಿಕಿ ಪಾಂಟಿಂಗ್ ಹೇಳಿದ್ದೇನು?
ಪಂದ್ಯದ ಗೆಲುವಿನ ನಂತರ ಮಾತನಾಡಿರುವ ಮುಖ್ಯ ಕೋಚ್ ರಿಕಿ ಪಾಂಟಿಂಗ್, ‘ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ವೈಶಾಕ್ ವಿಜಯ್‌ಕುಮಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬೌಲಿಂಗ್ ಮಾಡಲು ಬಂದಿದ್ದು ಶ್ರೇಯಸ್ ಅಯ್ಯರ್ ಅವರಿಂದ, ಅಲ್ಲಿಂದ ಪಂದ್ಯ ಬದಲಾಯಿತು. ನಾನು ಡಗೌಟ್ನಲ್ಲಿ ಕುಳಿತಿದ್ದೆ. ಆ ಹಂತದಲ್ಲಿ ಗುಜರಾತ್ ಗೆಲುವಿಗೆ ಪ್ರತಿ ಓವರ್‌ಗೆ 13-14 ರನ್‌ಗಳು ಬೇಕಾಗಿದ್ದವು. ನಾನು ಆಗ ಅಯ್ಯರ್‌ಗೆ ಸಂದೇಶ ಕಳುಹಿಸಿದೆ, ಸ್ನೇಹಿತ, ಈಗ ನೀನು ಏನು ಮಾಡುತ್ತೀಯಾ?. ಇದಕ್ಕೆ ಸರಳವಾಗಿ ಉತ್ತರಿಸಿದ ಶ್ರೇಯಸ್, ವೈಶಾಕ್‌ನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಳುಹಿಸಿ. ಅವನು ಯಾರ್ಕರ್‌ಗಳನ್ನು ಎಸೆಯುತ್ತಾನೆ, ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ.
ಗೆಲುವು ತಂದ ಅಯ್ಯರ್ ನಿರ್ಧಾರ
ಅಂತಿಮವಾಗಿ ವೈಶಾಕ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡುವ ಶ್ರೇಯಸ್ ಅಯ್ಯರ್ ಅವರ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು. ಡೆತ್ ಓವರ್‌ಗಳಲ್ಲಿ ಮೊದಲ ಎರಡು ಓವರ್‌ಗಳಲ್ಲಿ ಕೇವಲ 10 ರನ್‌ಗಳನ್ನು ಬಿಟ್ಟುಕೊಟ್ಟ ವೈಶಾಕ್, ಈ ಎರಡೂ ಓವರ್‌ಗಳಲ್ಲಿ ಬೌಂಡರಿ ಬಿಟ್ಟುಕೊಡಲಿಲ್ಲ. ಪರಿಣಾಮವಾಗಿ ಗುಜರಾತ್ ತಂಡವು 11 ರನ್‌ಗಳ ಸೋಲನುಭವಿಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ