AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆ ವಿತರಣೆಯಲ್ಲಿ ಜಾತಿ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್: ಅರ್ಚಕರಿಗೆ ಲಸಿಕೆ ಕೊಡಬಾರದೇ ಎಂದು ಪ್ರಶ್ನಿಸಿದ ಅಶ್ವತ್ಥನಾರಾಯಣ

ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ‘ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ’ ಎಂದಿದ್ದರು. ಈ ಆರೋಪಗಳನ್ನು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನಿರಾಕರಿಸಿದ್ದಾರೆ.

ಲಸಿಕೆ ವಿತರಣೆಯಲ್ಲಿ ಜಾತಿ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್: ಅರ್ಚಕರಿಗೆ ಲಸಿಕೆ ಕೊಡಬಾರದೇ ಎಂದು ಪ್ರಶ್ನಿಸಿದ ಅಶ್ವತ್ಥನಾರಾಯಣ
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 02, 2021 | 7:38 PM

Share

ಬೆಂಗಳೂರು: ಕೊರೊನಾ ಸೋಂಕು ನಿರೋಧಕ ಲಸಿಕೆ ನೀಡುವಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಲಾಗಿದೆ. ಈ ಸಂಬಂಧ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ‘ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ’ ಎಂದಿದ್ದರು. ಈ ಆರೋಪಗಳನ್ನು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನಿರಾಕರಿಸಿದ್ದಾರೆ.

ಮಲ್ಲೇಶ್ವರಂನ ಲಯನ್ಸ್ ಕ್ಲಬ್​ ಆವರಣದಲ್ಲಿ ನಿನ್ನೆ (ಜೂನ್ 1) ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಸಂದರ್ಭ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವರನ್ನು ಲಸಿಕೆ ಹಾಕಿಸಿಕೊಳ್ಳದಂತೆ ಬಿಜೆಪಿ ಕಾರ್ಯಕರ್ತರು ತಡೆದಿದ್ದರು ಆರೋಪ ಕೇಳಿಬಂದಿತ್ತು. ಈ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾ ಈ ಪೊಲೀಸರಿಗೆ ದೂರು ನೀಡಿದ್ದಾರೆ.

ಇಲ್ಲಿ ನಿಮಗೆ ಕೊರೊನಾ ಲಸಿಕೆ ಹಾಕುವುದಿಲ್ಲ ಎಂದಿದ್ದ ಕೆಲವರು, ಬಿಬಿಎಂಪಿ ಆಸ್ಪತ್ರೆಗೆ ಹೋಗುವಂತೆ ಸರತಿಯಲ್ಲಿ ನಿಂತಿದ್ದವರನ್ನು ಕಳಿಸಿದ್ದರು. ವಿಡಿಯೋ ಚಿತ್ರೀಕರಿಸಲು ಯತ್ನಿಸಿದವರ ಜತೆ ಮೊಬೈಲ್ ಕಸಿದು ಗಲಾಟೆ ಮಾಡಿದ್ದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.

ಆರೋಪ ನಿರಾಕರಿಸಿದ ಅಶ್ವತ್ಥ ನಾರಾಯಣ ಜಾತಿ ಆಧಾರದಲ್ಲಿ ಲಸಿಕೆ ಕೊಡಿಸಿದ ಆರೋಪವನ್ನು ಡಿಸಿಎಂ ಅಶ್ವತ್ಥ ನಾರಾಯಣ ನಿರಾಕರಿಸಿದ್ದಾರೆ. ಇಂಥ ಯಾವುದೇ ಆಲೋಚನೆ ನಮಗಿಲ್ಲ. ಕಾಂಗ್ರೆಸ್‌ನವರು ಜಾತಿ ಮತ್ತು ಓಲೈಕೆ ರಾಜಕಾರಣದಲ್ಲೇ ಬೆಳೆದು ಬಂದವರು. ನಮ್ಮ ಕ್ಷೇತ್ರದಲ್ಲಿ ಅಂತಹ ಯಾವುದೇ ಕೆಲಸ ನಡೆದಿಲ್ಲ ಎಂದು ಅವರು ವಿವರಿಸಿದರು.

ರಾಜ್ಯದ ಎಲ್ಲರಿಗೂ ಲಸಿಕೆ ಸಿಗಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಆದ್ಯತೆಯ ಆಧಾರದಲ್ಲಿ ಕೊವಿಡ್ ಲಸಿಕೆ ನೀಡಲಾಗುತ್ತಿದೆ. ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರ ಆರೋಪವೂ ಶುದ್ಧ ಸುಳ್ಳು. ಲಸಿಕೆ ಅಭಿಯಾನ ಹಳಿತಪ್ಪಿಸುವ ದುರುದ್ದೇಶದಿಂದ ಇಂಥ ಹೇಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಲಸಿಕೆ ವಿತರಣೆಯ ಅಂಕಿಅಂಶ ಕೊಟ್ಟ ಡಿಸಿಎಂ ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಉಪ ಮುಖ್ಯಮಂತ್ರಿ ತಿರುಗೇಟು ಕೊಟ್ಟರು.

‘ವೈರಸ್​ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್​ಗೂ ಜಾತಿ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ ಎಂದು ಪ್ರಶ್ನಿಸಿದರು.

(Caste Discrimination in Covid Vaccination BJP Denies Congress Allegation)

ಇದನ್ನೂ ಓದಿ: ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಇದನ್ನೂ ಓದಿ: ಕೊರೊನಾದಿಂದ ಹಾಸಿಗೆ ಹಿಡಿದಿರುವ ಶಶಿ ತರೂರ್​ ಕೇಂದ್ರದ ಲಸಿಕೆ ನೀತಿ ವಿರುದ್ಧ ನೀಡಿರುವ ವಿಡಿಯೋ ಸಂದೇಶ ಏನು?

Published On - 7:37 pm, Wed, 2 June 21