ಮಂಡ್ಯದಲ್ಲಿ ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ: ಭಾಗವಹಿಸಿದವು 80 ಜೋಡಿ ಹಸುಗಳು

|

Updated on: Mar 15, 2021 | 5:50 PM

ಅಪ್ಪಟ ಗ್ರಾಮೀಣ ಸೊಗಡನ್ನೇ ತುಂಬಿಕೊಂಡಿರುವ ಮಂಡ್ಯದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಯಾವುದೇ ರೀತಿಯ ಅಭಾವ ಇಲ್ಲ. ಹೀಗಾಗಿಯೇ ಆಗಾಗ ವಿಭಿನ್ನ ಹಾಗೂ ವಿಶಿಷ್ಟ ಎನ್ನುವಂತಹ ಹಲವಾರು ಗ್ರಾಮೀಣ ಕ್ರೀಡಾಕೂಟಗಳನ್ನ ಆಯೋಜನೆ ಮಾಡುತ್ತಲೇ ಬಂದಿದ್ದಾರೆ.

ಮಂಡ್ಯದಲ್ಲಿ ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ: ಭಾಗವಹಿಸಿದವು 80 ಜೋಡಿ ಹಸುಗಳು
ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ
Follow us on

ಮಂಡ್ಯ: ಜೋಡೆತ್ತಿನ ಓಟ ಪಕ್ಕಾ ಗ್ರಾಮೀಣ ಸೊಗಡಿನ ಸ್ಪರ್ಧೆ. ಹಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜನರು ತಮ್ಮ ಮನೆರಂಜನೆಗಾಗಿ ಸುತ್ತಮುತ್ತಲ ಹಳ್ಳಿಗಳ ಜನರೆಲ್ಲರೂ ಸೇರಿ ಏರ್ಪಡಿಸುತ್ತಿದ್ದ ಜೋಡೆತ್ತಿನ ಓಟ ಸ್ಪರ್ಧೆ ಕ್ರಮೇಣ ಕಡಿಮೆಯಾಗಿತ್ತು. ಈಗ ಮತ್ತೆ ತಮ್ಮ ಹಿಂದಿನವರ ಹಾದಿಯನ್ನೇ ತುಳಿದಿರುವ ಜನರು ವಿಭಿನ್ನವಾದ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಜೋಡೆತ್ತಿನ ಓಟದ ಸ್ಪರ್ಧೆ ನೋಡಿರುತ್ತೇವೆ. ಆದರೆ ಈಗ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆಯನ್ನು ನೋಡುವ ಅವಕಾಶ ರಾಜ್ಯದ ಮಂದಿಗೆ ಸಿಕ್ಕಿದೆ. ಯಾವುದೇ ಎತ್ತುಗಳಿಗೆ ಕಡಿಮೆ ಇಲ್ಲದಂತೆ ಓಡಿದ ಹಸುಗಳ ಗಾಡಿ ಓಟದ ಪರಿಯನ್ನ ನೋಡುವುದೇ ಒಂದು ರೋಚಕ ಅನುಭವ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೆಳೆಯರ ಬಳಗದ ವತಿಯಿಂದ ಆಯೋಜನೆ ಮಾಡಲಾಗಿದ್ದ ಈ ವಿಶಿಷ್ಟ ಸ್ಪರ್ಧೆಯನ್ನ ಕುಮಾರಸ್ವಾಮಿ ಅವರೇ ಉದ್ಘಾಟಿಸಿದರು.

ಅಪ್ಪಟ ಗ್ರಾಮೀಣ ಸೊಗಡನ್ನೇ ತುಂಬಿಕೊಂಡಿರುವ ಮಂಡ್ಯದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಯಾವುದೇ ರೀತಿಯ ಅಭಾವ ಇಲ್ಲ. ಹೀಗಾಗಿಯೇ ಆಗಾಗ ವಿಭಿನ್ನ ಹಾಗೂ ವಿಶಿಷ್ಟ ಎನ್ನುವಂತಹ ಹಲವಾರು ಗ್ರಾಮೀಣ ಕ್ರೀಡಾಕೂಟಗಳನ್ನ ಆಯೋಜನೆ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ, ಮೇಗಳಾಪುರ ಸರ್ಕಲ್​ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆಳೆಯರ ಬಳಗದ ವತಿಯಿಂದ ಜೋಡಿ ಹಸುಗಳು ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗೆ ಕುಮಾರಸ್ವಾಮಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಹಸುಗಳ ಬಳಿಗೆ ತೆರಳಿ ಸ್ಪರ್ಧೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಮಳವಳ್ಳಿ ಶಾಸಕ ಡಾ. ಅನ್ನದಾನಿ ಹಳ್ಳಿ ಜರನಲ್ಲಿ ನಮ್ಮ ಪೂರ್ವಿಕರು ನಡೆಸಿಕೊಂಡು ಬರುತ್ತಿದ್ದ ಈ ರೀತಿಯ ಸ್ಪರ್ಧೆಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಈ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಾಗಿ ತಿಳಿಸಿದರು.

ಭಾಗವಹಿಸಿದ 80 ಜೋಡಿ ಹಸುಗಳು
ಮಳವಳ್ಳಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 80 ಜೋಡಿ ಹಸುಗಳು ಭಾಗವಹಿಸಿದ್ದವು. ಹಾಡ್ಲಿ, ಮೇಗಳಾಪುರ ಸೇರಿದಂತೆ ಮಳವಳ್ಳಿಯ ಸುತ್ತಮುತ್ತಲ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಹಸುಗಳು ಯಾವುದೇ ಎತ್ತುಗಳಿಗೆ ಕಡಿಮೆ ಇಲ್ಲದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದವು. ಹಾಡ್ಲಿ ಗ್ರಾಮದ ಸಮೀಪದಲ್ಲಿನ ಹೊಲದಲ್ಲಿ 200 ಮೀಟರ್ ದೂರದ 2 ಟ್ರ್ಯಾಕ್ ಅನ್ನ ನಿರ್ಮಿಸಲಾಗಿತ್ತು. ಒಂದೊಂದು ಟ್ರಾಕ್ನಲ್ಲೂ ಒಂದೊಂದು ಜೋಡಿ ಹಸುಗಳ ಗಾಡಿ ಓಡಿಸಲು ಅವಕಾಶ ನೀಡಲಾಗಿತ್ತು. 200 ಮೀಟರ್ ದೂರವನ್ನ ಯಾರು ಮೊದಲು ತಲುಪುತ್ತಾರೋ ಅವರು ಗೆಲುವು ಸಾಧಿಸುತ್ತಿದ್ದರು. ಹೀಗೆ ಹಲವಾರು ಸುತ್ತುಗಳ ಓಟದ ಸ್ಪರ್ಧೆ ನಡೆದ ನಂತರ ಮೊಲದ ನಾಲ್ಕು ಜನರಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿಯನ್ನ ನೀಡಲಾಯಿತು. ಮೊದಲ ಬಹುಮಾನ 1 ಲಕ್ಷ, ಎರಡನೇಯದ್ದು 75 ಸಾವಿರ ಮೂರನೇಯದ್ದು 50 ಹಾಗೂ ನಾಲ್ಕನೆಯದ್ದು 25 ಸಾವಿರ ರೂ. ಗಳನ್ನ ನೀಡಲಾಯಿತು.

ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 80 ಜೋಡಿ ಹಸುಗಳು ಭಾಗವಹಿಸಿದ್ದವು

ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆಯನ್ನ ನೋಡಲು ಮಹಿಳೆಯರು ಮಕ್ಕಳು ಸೇರಿದಂತೆ ಸುತ್ತಮುತ್ತಲ ಹತ್ತಾರು ಊರಿನ ಜನರು ಅಪಾರ ಸಂಖ್ಯೆಯಲ್ಲಿ ಸೇರಿದರು. ಸ್ಪರ್ಧೆಯ ವೇಳೆ ಶಿಳ್ಳೆ, ಕೇಕೆಗಳನ್ನ ಹಾಕುವ ಮೂಲಕ ಸ್ಪರ್ಧಾಳುಗಳಿಗೆ ಸ್ಫೂರ್ತಿ ತುಂಬಿದರು. ಅಪರೂಪಕ್ಕೊಮ್ಮೆ ನಡೆದ ಈ ಜೋಡಿ ಹಸುಗಳ ಓಟದ ಸ್ಪರ್ಧೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸ್ಪರ್ಧೆಯನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು

ಇದನ್ನೂ ಓದಿ

ಶಿವಮೊಗ್ಗ ರಂಗಾಯದಲ್ಲಿ ಕಲಾಕೃತಿಗಳ ಅನಾವರಣ: ಸಿಮೆಂಟ್​ನಲ್ಲಿ ನಿರ್ಮಾಣವಾದ ಕಲೆಗೆ ಮನಸೋತ ಸ್ಥಳೀಯರು

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕೊಡಗಿನ ಗವಿಸಿದ್ದೇಶ್ವರ ಬೆಟ್ಟ

Published On - 5:14 pm, Mon, 15 March 21