ಜೀವದ ಜೊತೆಗೆ ಜೀವನವೂ ಉಳಿಯಲಿ ಎನ್ನುವ ಅಪರೂಪದ ವೈದ್ಯ ಉಡುಪಿಯ ಡಾ.ಭಾಸ್ಕರಾನಂದ ಕುಮಾರ್
ನ್ಯೂನ್ಯತೆಗಳು ಸಮಸ್ಯೆ ಅಲ್ಲ. ಅದನ್ನೂ ಸರಿಪಡಿಸಬಹುದು ಎಂದು ಹೇಳಬಲ್ಲೆ ಎನ್ನುವ ಡಾ. ಭಾಸ್ಕರಾನಂದ ಕುಮಾರ್, ತಿರುಪತಿ ದೇವಾಲಯ ನಡೆಸುತ್ತಿರುವ ಆಸ್ಪತ್ರೆ, ವಿಜಯವಾಡದ ಆಸ್ಪತ್ರೆ ಮತ್ತು ಕಟೀಲಿನ ಕೆಎಮ್ಸಿ ಆಸ್ಪತ್ರೆಯಲ್ಲಿ ಮಕ್ಕಳ ಕೈಯ ಶಸ್ತ್ರಚಿಕಿತ್ಸೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನಡೆಸಿಕೊಟ್ಟಿದ್ದಾರೆ.

ಕರ್ನಾಟಕದ ಹಿರಿಯ ವೈದ್ಯ, ಮೂಳೆತಜ್ಞ, ಉಡುಪಿ ನಿವಾಸಿ ಡಾ. ಭಾಸ್ಕರಾನಂದ ಕುಮಾರ್ ಅವರಿಗೆ ಭಾರತೀಯ ಹಸ್ತ ಶಸ್ತ್ರಚಿಕಿತ್ಸಾ ಸಂಸ್ಥೆ (Indian Society for Surgery of the Hand- ISSH) ಹಸ್ತ ಶಸ್ತ್ರಚಿಕಿತ್ಸೆಯ ಮೊದಲಿಗೆ (Pioneer of Hand Surgery) ಎಂಬ ಪ್ರಶಸ್ತಿಯನ್ನು ಘೋಷಿಸಿದೆ. ಹಸ್ತ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಡಾ. ಭಾಸ್ಕರಾನಂದ ಕುಮಾರ್ ಮಾಡಿರುವ ಅಪಾರ ಸಾಧನೆ, ಭಾರತದ ಹಸ್ತ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಮತ್ತು ವೈದ್ಯಕೀಯ ಶಿಕ್ಷಣದ ಮೂಲಕ ಅವರು ನೀಡಿರುವ ಕೊಡುಗೆ ಗಮನಿಸಿ ISSH ಈ ಪ್ರಶಸ್ತಿ ಘೋಷಿಸಿದೆ.
ಭಾರತೀಯ ಹಸ್ತ ಶಸ್ತ್ರಚಿಕಿತ್ಸಾ ಸಂಸ್ಥೆಯ ಈ ಬಾರಿಯ ವಾರ್ಷಿಕ ಸಮಾವೇಶದಲ್ಲಿ ಡಾ. ಭಾಸ್ಕರಾನಂದ ಕುಮಾರ್ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ISSH ಸಮಾವೇಶ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಪ್ರಶಸ್ತಿ ಹಾಗೂ ತಮ್ಮ ವೈದ್ಯಕೀಯ ಸೇವೆಯ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್ನೊಂದಿಗೆ ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿದ್ದಾರೆ. 48 ವರ್ಷಗಳ ಸುದೀರ್ಘ ಅನುಭವದ ಸಾರವನ್ನು ಒಂದೆರಡು ಅಭಿಪ್ರಾಯಗಳಲ್ಲಿ ಹಂಚಿಕೊಂಡಿದ್ದಾರೆ. ಹಸ್ತ ಶಸ್ತ್ರಚಿಕಿತ್ಸೆಯಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಕೈ ಶಸ್ತ್ರಚಿಕಿತ್ಸೆಯಲ್ಲಿ ಡಾ. ಭಾಸ್ಕರಾನಂದ ಕುಮಾರ್ ಅವರದು ವಿಶೇಷ ಸಾಧನೆ.
ಹುಟ್ಟುವ ಮಕ್ಕಳಿಗೆ ಕೈ ಬೆರಳುಗಳು ಹೆಚ್ಚಿರುವುದು ಅಥವಾ ಹೆಬ್ಬೆರಳು ಇಲ್ಲದಿರುವುದು ಇರುತ್ತದೆ. ಯಾವುದೇ ಕೆಲಸ ಮಾಡಲು ಹೆಬ್ಬೆರಳು ಎಷ್ಟು ಮುಖ್ಯ ಎಂದು ತಿಳಿಯಲು, ಒಂದು ಬಾರಿ ಹೆಬ್ಬೆರಳು ಇಲ್ಲದೆ ಏನಾದರೂ ಕೆಲಸ ಮಾಡಲು ಪ್ರಯತ್ನಿಸಿ, ಸಾಧ್ಯವಾಗುವುದಿಲ್ಲ. ಹೀಗೆ ಹಸ್ತ ಸಂಬಂಧಿ ಸಮಸ್ಯೆಗಳಿಗೆ ಡಾ. ಭಾಸ್ಕರಾನಂದ ಕುಮಾರ್ ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ನೀಡಿದ್ದಾರೆ. ಹೆಬ್ಬೆರಳು ಇಲ್ಲದ ಮಕ್ಕಳಿಗೆ ಕೈ ಇತರ ಬೆರಳನ್ನು ಹೆಬ್ಬೆರಳಿನ ಅಂಗಕ್ಕೆ ಜೋಡಿಸಿ, ಎಲ್ಲರಂತೆ ಕೈಗಳನ್ನು ಬಳಸುವ ಅವಕಾಶ ಮಾಡಿಕೊಟ್ಟಿದ್ದಾರೆ. ವಿಶೇಷ ಎಂದರೆ, ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು ಭಾರತದಲ್ಲಿ ಇರುವುದು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ ಅತಿ ಹೆಚ್ಚು ಸಂಖ್ಯೆಯ ಹಸ್ತ ಶಸ್ತ್ರಚಿಕಿತ್ಸೆ ಮಾಡಿರುವ ಸಾಧನೆ ಡಾ. ಭಾಸ್ಕರಾನಂದ ಕುಮಾರ್ ಅವರದು. ಇದುವರೆಗೆ ಸುಮಾರು 437 ಹಸ್ತ ಶಸ್ತ್ರಚಿಕಿತ್ಸೆಗಳನ್ನು ಭಾಸ್ಕರಾನಂದ ಕುಮಾರ್ ಮಾಡಿದ್ದಾರೆ.

ಹೆಚ್ಚು ಸಂಖ್ಯೆಯ ಕೈ ಬೆರಳು ಮತ್ತು ಹೆಬ್ಬೆರಳು ಇಲ್ಲದ ಸಮಸ್ಯೆಯನ್ನು ಡಾ. ಭಾಸ್ಕರಾನಂದ ಕುಮಾರ್ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿರುವುದು
ಈ ವಿಧದ ವೈದ್ಯಕೀಯ ಚಿಕಿತ್ಸೆ ನೀಡುವ ಜರ್ಮನಿಯ ವೈದ್ಯರೊಬ್ಬರು ಸುಮಾರು 450 ಹಸ್ತ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಅವರ ಬಳಿಕ ಅತಿ ಹೆಚ್ಚು ಕೈ ಶಸ್ತ್ರಚಿಕಿತ್ಸೆ ನಡೆಸಿದವರು ಎಂದರೆ ಅದು ಭಾರತದ, ನಮ್ಮ ಕರ್ನಾಟಕದ ಡಾ. ಭಾಸ್ಕರಾನಂದ ಕುಮಾರ್ ಅವರು.
ಉಚಿತ ಹಸ್ತ ಶಸ್ತ್ರಚಿಕಿತ್ಸೆ ನಡೆಸಿಕೊಡುವ ಸರಳ ಸಾಧಕ ನ್ಯೂನತೆಗಳು ಸಮಸ್ಯೆ ಅಲ್ಲ. ಅದನ್ನೂ ಸರಿಪಡಿಸಬಹುದು ಎಂದು ಹೇಳಬಲ್ಲೆ ಎನ್ನುವ ಡಾ. ಭಾಸ್ಕರಾನಂದ ಕುಮಾರ್, ತಿರುಪತಿ ದೇವಾಲಯ ನಡೆಸುತ್ತಿರುವ ಆಸ್ಪತ್ರೆ, ವಿಜಯವಾಡದ ಆಸ್ಪತ್ರೆ ಮತ್ತು ಕಟೀಲಿನ ಕೆಎಮ್ಸಿ ಆಸ್ಪತ್ರೆಯಲ್ಲಿ ಮಕ್ಕಳ ಕೈಯ ಶಸ್ತ್ರಚಿಕಿತ್ಸೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಯಾಣದ ಖರ್ಚು ಮಾತ್ರ ಪಡೆದುಕೊಳ್ಳುತ್ತೇನೆ ಎನ್ನುವ ಹಿರಿಯ ವೈದ್ಯರು, ನಾನು ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಅಂತಲ್ಲ. ಆ ಅವಕಾಶ ಸಿಕ್ಕಿದೆ. ದೇವರು ಮಾಡಿಸಿದ್ದಾರೆ ಎಂದು ಹೇಳಿ ಸರಳ ಭಾವ ತಾಳುತ್ತಾರೆ.
ಮಣಿಪಾಲ ಕೆಎಮ್ಸಿ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ ಬಳಿಕ, ಸದ್ಯ ಉಡುಪಿಯ ಹೈಟೆಕ್ ಹಾಗೂ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಭಾರತದಲ್ಲಿ ಹಸ್ತ ಶಸ್ತ್ರಚಿಕಿತ್ಸೆಯ ಸಂಶೋಧನೆಗಳು, ವೈದ್ಯರು ಹೆಚ್ಚು ಹೆಚ್ಚು ಬರಬೇಕು. ಈಗ ಹಸ್ತ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಇಡೀ ದೇಶದಲ್ಲಿ ಸಾವಿರಕ್ಕೂ ಕಡಿಮೆ ಇದ್ದಾರೆ. ನನ್ನ ಪ್ರಕಾರ ಹಸ್ತಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಸುಮಾರು 40 ಸಾವಿರದಷ್ಟಾದರೂ ಇರಬೇಕು. ಜೀವ ಉಳಿದರೆ ಸಾಲದು. ಜೀವನವೂ ಚೆನ್ನಾಗಿರಬೇಕು ಅದಕ್ಕೆ ಕೈಯಂಥ ಅಂಗಗಳು ಮುಖ್ಯ ಎನ್ನುತ್ತಾರೆ ಡಾ. ಭಾಸ್ಕರಾನಂದ ಕುಮಾರ್.
ಇದನ್ನೂ ಓದಿ: ಜನೌಷಧ ದಿನಾಚರಣೆ: ಮಂಗಳೂರು ವೈದ್ಯ ಡಾ. ಪದ್ಮನಾಭ್ ಕಾಮತ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತು
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ
Published On - 5:40 pm, Mon, 15 March 21