Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕೊಡಗಿನ ಗವಿಸಿದ್ದೇಶ್ವರ ಬೆಟ್ಟ

ಕೊಡಗು ಹಾಸನ ಗಡಿಯಲ್ಲಿರುವ ಗವಿಸಿದ್ದೇಶ್ವರ ಬೆಟ್ಟವನ್ನು ಎಡಕಲ್ಲು ಗುಡ್ಡ ಅಂತಾನೂ ಕರೆಯಲಾಗುತ್ತದೆ. ಈ ಗುಡ್ಡವನ್ನು ಹತ್ತಿ ಸಾಗುವುದೇ ಒಂದು ರೋಚಕ ಅನುಭವ. ದಾರಿ ಮಧ್ಯೆ ಸಾಗುವಾಗ ಕಾಡು ಹಣ್ಣಗಳನ್ನ ಸವಿಯುವ ವಿಶೇಷ ಅವಕಾಶವೂ ಇಲ್ಲಿ ಸಿಗುತ್ತದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕೊಡಗಿನ ಗವಿಸಿದ್ದೇಶ್ವರ ಬೆಟ್ಟ
ಗವಿಸಿದ್ದೇಶ್ವರ ಬೆಟ್ಟ
Follow us
sandhya thejappa
|

Updated on:Mar 16, 2021 | 11:40 AM

ಕೊಡಗು ಎಂದರೆ ಬೆಟ್ಟ ಗುಡ್ಡಗಳ ತವರೂರು. ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಎಂಟು ಕಿಲೋಮೀಟರ್ ದೂರ ಸಾಗಿದರೆ ಸಿಗುವುದು ಉಚ್ಚಂಗಿ ಗ್ರಾಮ. ಇಲ್ಲಿಂದ ಕಚ್ಚಾ ರಸ್ತೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರ ಸಾಗಿದರೆ ‌ಕಣ್ಣು ಹಾಯಿಸಿದಷ್ಟೂ ಕಾಣ ಸಿಗುತ್ತದೆ ಹಚ್ಚ ಹಸಿರಿನಿಂದ ಕೂಡಿರುವ ಗವಿಸಿದ್ದೇಶ್ವರ ಬೆಟ್ಟ.

ಕೊಡಗು ಹಾಸನ ಗಡಿಯಲ್ಲಿರುವ ಗವಿಸಿದ್ದೇಶ್ವರ ಬೆಟ್ಟವನ್ನು ಎಡಕಲ್ಲು ಗುಡ್ಡ ಅಂತಾನೂ ಕರೆಯಲಾಗುತ್ತದೆ. ಈ ಗುಡ್ಡವನ್ನು ಹತ್ತಿ ಸಾಗುವುದೇ ಒಂದು ರೋಚಕ ಅನುಭವ. ದಾರಿ ಮಧ್ಯೆ ಸಾಗುವಾಗ ಕಾಡು ಹಣ್ಣಗಳನ್ನ ಸವಿಯುವ ವಿಶೇಷ ಅವಕಾಶವೂ ಇಲ್ಲಿ ಸಿಗುತ್ತದೆ. ಮಲೆನಾಡಿನ ಸಾಂಪ್ರದಾಯಿಕ ಹಣ್ಣುಗಳಾದ ಅಮ್ಮೆ ಹಣ್ಣು, ಎಲೆಂಜಿ ಹಣ್ಣು, ಚೂರಿ ಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನ ತಿನ್ನುತ್ತಾ ಸಾಗಿದರೆ ಸಿಗುವ ಕುಷಿ ಬೇರೆ ಎಲ್ಲೂ ಇಲ್ಲ.

ವಿವಿಧ ಹಣ್ಣುಗಳನ್ನ ಸವಿಯುತ್ತಾ ಒಂದು ಗಂಟೆಗಳ ಕಾಲ ನಡೆದರೆ ಉಚ್ಚಂಗಿ ಗವಿಸಿದ್ದೇಶ್ವರ ಬೆಟ್ಟ ಸಿಗುತ್ತದೆ. ಅದೇನು ಸೊಬಗು, ಅದೇನು ಸೊಗಸು ಅಂತೀರಾ? ಕಣ್ಣು ಹಾಯಿಸಿದಷ್ಟು ದೂರವೂ ಹಸಿರೋ ಹಸಿರು. ಆ ಹಸಿರ ಮಧ್ಯೆ ಹೆಬ್ಬಾವಿನಂತೆ ಮಲಗಿರುವ ರಸ್ತೆಗಳು, ಪುಟ್ಟ ಪುಟ್ಟ ಮನೆಗಳು, ಗದ್ದೆ ಬಯಲುಗಳನ್ನು ನೋಡುತ್ತಾ ಪ್ರಕೃತಿಯನ್ನು ಸವಿಯಲು ಇತ್ತೀಚೆಗೆ ಬಹಳಷ್ಟು ಪ್ರವಾಸಿಗರು ಆಗಮಿಸುತ್ತಾ ಇದ್ದಾರೆ.

ಬೆಟ್ಟ ತಲುಪುವುದು ಹೇಗೆ? ಈ ಬೆಟ್ಟಕ್ಕೆ ಕೊಡಗಿನ ಶನಿವಾರಸಂತೆಯ ಮೂಲಕವೂ ಹೋಗಬಹುದು. ಶನಿವಾರಸಂತೆಯಿಂದ ಸುಬ್ರಹ್ಮಣ್ಯ ಮಾರ್ಗವಾಗಿ 8 ಕಿಲೋಮೀಟರ್ ಪ್ರಯಾಣಿಸಿದರೆ ಉಚ್ಚಂಗಿ ಜಂಕ್ಷನ್ ಸಿಗುತ್ತದೆ. ಅಲ್ಲಿಂದ ಸುಮಾರು ಐದು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ನಡೆದು ಸಾಗಬಹುದು. ಅಥವಾ ಸ್ಥಳಿಯರ ಜೀಪ್ ಬಾಡಿಗೆ ಪಡೆದು ಸಾಗಬಹುದು. ಆದರೆ ಟ್ರಕ್ಕಿಂಗ್ ಎಂದರೆ ಬೆಟ್ಟ ಗುಡ್ಡ ಹತ್ತಿ ಇಳಿಯುವುದು. ಹಾಗಾಗಿ ನಡೆಯ ಬಯಸುವವರು ಐದು ಕಿಲೋಮೀಟರ್ ನಡೆದು ಸಾಗುವುದು ದೊಡ್ಡ ವಿಷಯವೇನಲ್ಲ.

ಬೆಂಗಳೂರಿನಿಂದ ಬರುವವರು ಹಾಸನದ ಸಕಲೇಶಪುರಕ್ಕೆ ಬಂದು ಅಲ್ಲಿಂದ ಶನಿವಾರಸಂತೆ ಮಾರ್ಗದಲ್ಲಿ ಸುಮಾರು 20 ಕಿಲೋಮೀಟರ್ ದೂರ ಪ್ರಯಾಣಿಸಿ ಉಚ್ಚಂಗಿ ಜಂಕ್ಷನ್ ತಲುಪಬೇಕು.  ವಾಸ್ತವ್ಯ ಹೂಡುವವರು ಸಕಲೇಶಪುರದಲ್ಲೂ ಉಳಿದುಕೊಳ್ಳಬಹುದು. ಅಥವಾ ಕೊಡಗಿನ ಶನಿವಾರಸಂತೆಯಲ್ಲೂ ಉಳಿದುಕೊಳ್ಳಬಬಹುದು. ಹೋಂ ಸ್ಟೇ ಸೌಲಭ್ಯಗಳೂ ಸುತ್ತಮುತ್ತಲು ಸಿಗುತ್ತವೆ.

ಚಾರಣಿಗರಿಗೆ ಕಾಡು ಹಣ್ಣುಗಳ ಸ್ವಾಗತ ಉಚ್ಚಂಗಿ ಜಂಕ್ಷನ್​ನಲ್ಲಿ ವಾಹನ ನಿಲ್ಲಿಸಿ ಕಾಲಿಗೆ ಕೆಲಸ ಕೊಟ್ಟು ಒಂದೈದು ಕಿಲೋಮೀಟರ್ ನಡೆಯಬೇಕು. ವಿಶೇಷ ಎಂದರೆ ದಾರಿಯಲ್ಲಿ ವಿವಿಧ ಬಗೆಯ ಕಾಡು ಹಣ್ಣುಗಳು ಕಾಣಸಿಗುತ್ತವೆ. ಆದರೆ ಹಣ್ಣಿನ ಬಗ್ಗೆ ಖಚಿತ ಮಾಹಿತಿ ಇದ್ದರೆ ಮಾತ್ರ ರುಚಿ ನೋಡುವುದು ಒಳ್ಳೆಯದು. ಇಲ್ಲದೇ ಇದ್ದರೆ ಹೊಟ್ಟೆ ಕೆಡುವ ಸಾಧ್ಯಯೆಯಿರುತ್ತದೆ. ಕೊಡಗಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ಅಮ್ಮೆ ಹಣ್ಣು, ಚೂರಿ ಹಣ್ಣು, ಕೊಟ್ಟೆ ಹಣ್ಣುಗಳು ಇಲ್ಲಿ ತಿನ್ನಲು ಸಿಗುತ್ತವೆ. ಆದರೆ ಹುಡುಕುವ ತಾಳ್ಮೆ ಇರಬೇಕು ಅಷ್ಟೆ. ಅದೂ ಕೂಡ ಕೆಲವೊಂದು ಸೀಸನ್​ನಲ್ಲಿ ಮಾತ್ರ.

ಸುಮಾರು ಐದು ಕಿಲೋಮೀಟರ್ ಬೆಟ್ಟ ಗುಡ್ಡ ಹತ್ತಿಳಿದರೆ ದುತ್ತನೆ ಸಾಲು ಸಾಲು ಬೆಟ್ಟಗಳು ಎದುರಾಗುತ್ತವೆ. ಅವುಗಳ ಸೊಬಗಿಗೆ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಕಣ್ಣಿಗೆ ಕಾಣುವ ಬೆಟ್ಡದ ಒಂದು ತುದಿ ಇಳಿಜಾರಿನಿಂದ ಕೂಡಿದ್ದರೆ, ಮತ್ತೊಂದು ತುದಿಯಲ್ಲಿ ಭಯಾನಕ ಪ್ರಪಾತವಿದೆ. ಅದನ್ನ ಬಗ್ಗಿ ನೋಡಲು ಕೂಡ ಧೈರ್ಯ ಬೇಕು. ಹಾಗಾಗಿ ಬೆಟ್ಟದ ತುದಿಯಲ್ಲಿ ಹುಚ್ಚಾಟಗಳಿಗೆ ಆಸ್ಪದವಿಲ್ಲ.

ಗವಿಸಿದ್ದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಪ್ರವಾಸಿಗರು

ಎದೆ ನಡುಗಿಸುತ್ತವೆ ಕಲ್ಲಿನ ಕಡಿದಾದ ಪರ್ವತಗಳು ಈ ಪ್ರದೇಶದ ಭೂ ಗರ್ಭದಲ್ಲಿ ಸಹಸ್ರಾರು ಕೋಟಿ ವರ್ಷಗಳ ಹಿಂದೆ ಅದೇನೂ ವೈಪರೀತ್ಯ ಸಂಭವಿಸಿದೆಯೋ ಏನೋ, ರಕ್ಕಸ ಗಾತ್ರದ ಬೃಹತ್ ಕಲ್ಲುಗಳು ನಿರ್ಜೀವವಾಗಿ ನಿಂತಿವೆ. ಒಂದೊಂದು ಕಲ್ಲುಗಳೂ ಒಂದು ಆಕಾರದಲ್ಲಿವೆ. ಕೆಲವೊಂದು ಯಂತ್ರದಲ್ಲಿ ಕತ್ತರಿಸಿದಷ್ಟು ನಾಜೂಕಾಗಿ ಆಕರ್ಷಕವಾಗಿವೆ. ಅದರಲ್ಲೂ ಬೃಹತ್ ಬಂಡೆಯೊಂದನ್ನು ಸಣ್ಣ ಬಂಡೆಕಲ್ಲೊಂದು ಹೊತ್ತು ನಿಂತಿರುವ ದೃಶ್ಯ ಭೂಮಿಯ ಗುರುತ್ವಾಕರ್ಷಣೆ ಶಕ್ತಿಯ ವೈಚಿತ್ರ್ಯವನ್ನ ಅನಾವರಣಗೊಳಿಸುತ್ತದೆ.

ಬೆಟ್ಟದ ತುತ್ತ ತುದಿಯಲ್ಲಿ ನಿಂತು ನೋಡಿದಾಗ ಒಂದೆಡೆ ಹಾಸನ ಜಿಲ್ಲೆ ಕಾಣಿಸಿದರೆ, ಮತ್ತೊಂದೆಡೆ ಕೊಡಗು ಕಾಣಿಸುತ್ತದೆ. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯನ್ನೂ ನೋಡಬಹುದು. ಹಸಿರ ರಾಶಿಯ ಮಧ್ಯೆ ಹೆಬ್ಬಾವಿನಂತೆ ಬಳಕುತ್ತಾ ಮಲಗಿರುವ ರಸ್ತೆಗಳು, ರಂಗೋಲಿಯಂತೆ ಕಾಣುವ ಗದ್ದೆ ಬಯಲುಗಳು, ಭೂ ದೇವಿಯ ಸೀರೆಗೆ ಅಲಂಕಾರ ಮಾಡಿದಂತೆ ಭಾಸವಾಗುವ ಮನೆಗಳ ರಾಶಿ.. ಆಹಾ ನೋಡ ನೋಡುತ್ತಾ ನಮ್ಮನ್ನೇ ನಾವು ಮರೆತು ಬಿಡುತ್ತೇವೆ.

ಬೆಟ್ಟವನ್ನ ಘಾಸಿಗೊಳಿಸಿದೆ ಮನುಜನ ವಿಕೃತಿಗಳು ಪ್ರಕೃತಿಯನ್ನ ನಾವು ಆನಂದಿಸಬೇಕೇ ಹೊರತು ಅದನ್ನ ಘಾಸಿಗೊಳಿಸಬಾರದು. ಆದರೆ ಇಲ್ಲಿಗೆ ಭೇಟಿ ಕೊಟ್ಟ ಕೆಲವರು ಅಲ್ಲಲ್ಲಿ ಮದ್ಯದ ಬಾಟಲಿಗಳನ್ನ ಒಡೆದು ವಿಕೃತಿ ಮೆರೆದಿದ್ದಾರೆ. ಕಾಡು ಗಿಡಗಳಿಗೆ ಬೆಂಕಿ ಹಾಕಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ, ಸಿಗರೇಟು ಪೊಟ್ಟಣಗಳನ್ನ ಎಲ್ಲೆಂದರಲ್ಲಿ ಎಸೆದಿದ್ದಾರೆ. ಇವೆಲ್ಲವನ್ನ ನೋಡಿದಾಗ ಸ್ವಲ್ಪ ವೇದನೆಯಾಗೋದು ನಿಜ.

ಬೆಟ್ಟದ ಮೇಲೆ ನಿಂತಾಗ ಕಾಣಸಿಗುವ ದೃಶ್ಯ

ಬೆಟ್ಟದ ತುದಿಯಲ್ಲಿ ನಿಂತು ಪ್ರಕೃತಿಯನ್ನು ವೀಕ್ಷಿಸುತ್ತಿರುವ ಪ್ರವಾಸಿಗ

ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಶೂಟಿಂಗ್ ಆಗಿದ್ದು ಇಲ್ಲೆ ಎಡಕಲ್ಲು ಗುಡ್ಡ ಎಂದಾಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ ನೆನಪಿಗೆ ಬರುತ್ತದೆ. ಈ ಸಿನಿಮಾ ಇದೇ ಬೆಟ್ಟ ಪ್ರದೇಶದಲ್ಲಿ ಚಿತ್ರೀಕರಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಬೆಟ್ಟಕ್ಕೆ ಗವಿ ಸಿದ್ದೇಶ್ವರ ಬೆಟ್ಟ ಎಂದು ಹೆಸರು ಬರಲು ಕಾರಣವೂ ಇದೆ. ಬೆಟ್ಟದ ಕಲ್ಲು ಬಂಡೆಗಳ ಕೆಳಭಾಗದಲ್ಲಿ ಕಿರಿದಾದ ಗವಿಯಿದ್ದು ಅದೊರಳಗೆ ಶಿವನ ಆಲಯವಿದೆ. ಈ ಹಿಂದೆ ಋಷಿಮುನಿಗಳು ಈ ಗವಿಯಲ್ಲಿ ತಪಸ್ಸು ಮಾಡಿದ್ದರಂತೆ. ಹಾಗಾಗಿ ಈ ಬೆಟ್ಟಕ್ಕೆ ಗವಿ ಸಿದ್ದೇಶ್ವರ ಬೆಟ್ಟವೆಂದೂ ಕರೆಯಲಾಗುತ್ತದೆ.

ಇದನ್ನೂ ಓದಿ

ಎನ್ಫೀಲ್ಡ್ ಬೈಕ್ ಮೇಲೆ ಹಂಪಿ ದರ್ಶನ: ಸ್ಮಾರಕಗಳಿಗೆ ಮನಸೋತ ಪುಣೆಯ ನಿವಾಸಿ

ಲೈಫ್​ ಜಾಕೆಟ್​ ಇಲ್ಲದೆ ವಾಟರ್​ ಸ್ಪೋರ್ಟ್ಸ್​; ಮುನ್ನೆಚ್ಚರಿಕಾ ಕ್ರಮ ಮರೆತ ಪ್ರವಾಸಿಗರು

Published On - 2:48 pm, Mon, 15 March 21