ಅಕ್ರಮ ಸಂಬಂಧಕ್ಕೆ ಅಡ್ಡಿ.. ಪತಿ ಕಥೆ ಮುಗಿಸಿದ ಪತ್ನಿ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಮಳ್ಳಿ
ಪ್ರಿಯಕರನಿಗೆ ಸುಪಾರಿ ಕೊಟ್ಟು, ಹೆಂಡತಿಯೇ ಗಂಡನನ್ನ ಕೊಲೆ ಮಾಡಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ತನಗೇನೂ ಗೊತ್ತಿಲ್ಲ ಎನ್ನುವಂತೆ ನಟನೆ ಮಾಡಿ, ಗಂಡನ ಸಾವಿನ ಬಳಿಕ ಗೋಳಾಡಿ ಕಣ್ಣೀರಿಟ್ಟಿದ್ದ ಕಿಲಾಡಿ ಹೆಂಡತಿ ಇದೀಗ ಕಂಬಿ ಹಿಂದೆ ಮುದ್ದೆ ಮುರಿಯುತ್ತಿದ್ದಾಳೆ. ಗಂಡನ ಕೊಲೆಗೆ ಪ್ರಿಯಕರನ ಜೊತೆ ಸೇರಿ ಕಿರಾತಕಿ ಹೆಂಡತಿ ಹೇಗೆಲ್ಲಾ ಪ್ಲಾನ್ ಮಾಡಿದ್ಲು?. ಯಾಕಾಗಿ ಕೊಲೆ ಮಾಡಿಸೋ ಕೃತ್ಯಕ್ಕೆ ಮುಂದಾಗಿದ್ದಳು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಳ್ಳಾರಿ, (ಏಪ್ರಿಲ್ 06): ಏಪ್ರಿಲ್ 4ರಂದು ಬಳ್ಳಾರಿ (Bellary) ನಗರದ ಕಣೇಕಲ್ ರಸ್ತೆಯ ರಾಣಿತೋಟದಲ್ಲಿ ವೆಂಕಟೇಶ ಎನ್ನುವಾತನ ಕೊಲೆ ಪ್ರಕರಣಕ್ಕೆ (Murder Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ವೆಂಕಟೇಶನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ಹೆಂಡತಿಯೇ (Wife) ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ. ಗಂಡನ ಸಾವಿನ ಬಳಿಕ ಗೋಳಾಡಿ ಕಣ್ಣೀರಿಟ್ಟಿದ್ದ ಕಿಲಾಡಿ ಹೆಂಡತಿ ಇದೀಗ ಕಂಬಿ ಹಿಂದೆ ಮುದ್ದೆ ಮುರಿಯುತ್ತಿದ್ದಾಳೆ. ಇದೇ ಶುಕ್ರವಾರ 04/04/2025 ಬೆಳಗಿನ ಜಾವ ಬಳ್ಳಾರಿ ನಗರದ ಕಣೇಕಲ್ ರಸ್ತೆಯ ರಾಣಿತೋಟ ಏರಿಯಾದಲ್ಲಿ ವೆಂಕಟೇಶ ಎನ್ನುವ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ವೆಂಕಟೇಶನ ಮೈಮೇಲಿದ್ದ ಎಲ್ಲಾ ಬಟ್ಟೆಗಳನ್ನ ಬಿಚ್ಚಿದ್ದ ಕಿರಾತಕರು, ತಲೆಗೆ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೆಂಕಟೇಶನ ಪತ್ನಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ವಿಪರ್ಯಾಸ ಅಂದ್ರೆ ಕೇಸ್ ದಾಖಲಿಸಿದ್ದ ಮೃತ ವೆಂಕಟೇಶನ ಪತ್ನಿಯೇ ಇಡೀ ಕೊಲೆ ಪ್ರಕರಣದ ಸೂತ್ರಧಾರಿ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.
ಅದ್ಯಾವ ಸಿನಿಮಾ, ಧಾರಾವಾಹಿ ನೋಡಿ ಕಳಿತಿದ್ಲೋ ಏನೋ. ಡವ್ ರಾಣಿ ಪಕ್ಕಾ ಆ್ಯಕ್ಟಿಂಗ್ ಮಾಡಿದ್ದಳು. ಅಯ್ಯಯ್ಯೋ.. ಅದ್ಯಾರ್ ನನ್ನ ಗಂಡನ ಕೊಲೆ ಮಾಡಿದ್ರೋ ಗೊತ್ತಿಲ್ಲ, ಮುಂದೆ ನನ್ನ ಗತಿ ಏನೋ ಎಂದು ಗೋಳಾಡಿ ಅತ್ತಿದ್ದೇ ಅತಿದ್ದು, ಕಣ್ಣೀರಿಟ್ಟಿದ್ದೇ ಇಟ್ಟಿದ್ದು. ಆದ್ರೆ ಈ ಆಟ ಕೇವಲ 24 ಗಂಟೆಗಷ್ಟೇ ಸೀಮಿತ ಆಗಿತ್ತು. ಪತಿ ಕೊಲೆಯ ಹಿಂದಿನ ರಹಸ್ಯ ಕೆದಕಿದಾಗ ಬಯಲಾಗಿದ್ದೇ ಪಾಪಿ ಪತ್ನಿಯ ಕೈವಾಡ. ಅಕ್ರಮ ಸಂಬಂಧಕ್ಕೆ ಪತಿಯೇ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಮೂಲಕವೇ ಪತಿಗೆ ಸ್ಕೆಚ್ ಹಾಕಿ, ಪತಿ ಕಥೆಯನ್ನೇ ಪತ್ನಿ ನೀಲವೇಣಿ ಮುಗಿಸಿದ್ದಾಳೆ.
ಇದನ್ನೂ ಓದಿ: ಹತ್ಯೆಗೆ ಸುಪಾರಿ: ಗಂಡನ ಕೊಲೆಯನ್ನು ವಿಡಿಯೋ ಕಾಲ್ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!
ತಾಳಿ ಕಟ್ಟಿದ ಗಂಡನಿಗೆ ಚಟ್ಟಾ ಕಟ್ಟಿದಳು
ವೆಂಕಟೇಶ್ ಮತ್ತು ನೀಲವೇಣಿ ಮದುವೆಯಾಗಿ 16 ವರ್ಷ ಆಗಿತ್ತು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದಾನೆ. ಆದ್ರೆ ನೀಲವೇಣಿಗೆ ಶಾಮಿಯಾನ ವ್ಯವಹಾರ ಮಾಡುತ್ತಿದ್ದ ಆನಂದ್ ಜೊತೆ ಅಕ್ರಮ ಸಂಬಂಧ ಇತ್ತು. ನೀಲವೇಣಿ ಮತ್ತು ಆನಂದ್ ಇಬ್ಬರೂ ಸೇರಿ ಶಾಮಿಯಾನ ವ್ಯವಹಾರ ಮಾಡುತ್ತಿದ್ದರು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ವೆಂಕಟೇಶ್ಗೆ ಅನುಮಾನ ಬಂದಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಆನಂದ್ ಮತ್ತು ಹತ್ಯೆಯಾದ ವೆಂಕಟೇಶ್ ಇಬ್ಬರೂ ಪರಿಚಯಸ್ಥರೇ ಆಗಿದ್ದರು. ಮೊನ್ನೆ ವೆಂಕಟೇಶ್ ಮನೆಯ ಕಾರ್ಯಕ್ರಮಕ್ಕೆ ಇದೇ ಆನಂದ್ ಕಡೆಯಿಂದಲೇ ನೀಲವೇಣಿ ಶಾಮಿಯಾನ ಹಾಕಿಸಿದ್ದಳು. ಅಂದೇ ನೀಲವೇಣಿ-ಆನಂದ್ ನಡುವಿನ ಸಂಬಂಧದ ವಿಚಾರವಾಗಿ ಪತಿ ವೆಂಕಟೇಶ್ ಜಗಳ ತೆಗೆದಿದ್ದ. ಶುಕ್ರವಾರ ರಾತ್ರಿಯೇ ಆನಂದ್ಗೆ ಪತಿ ವೆಂಕಟೇಶ್ನನ್ನ ಕೊಂದುಬಿಡುವಂತೆ ನೀಲವೇಣಿ ಸುಪಾರಿ ಕೊಟ್ಟಿದ್ದಳು. ಬಳಿಕ ಆನಂದ್ ತನ್ನ ಸ್ನೇಹಿತರ ಜೊತೆ ಚರ್ಚೆ ಮಾಡಿ ಕೊಲೆ ಪ್ಲಾನ್ ಮಾಡಿದ್ದ.
ಕೊಲೆ ಪ್ಲ್ಯಾನ್ ಹೇಗಿತ್ತು ಗೊತ್ತಾ?
ಘಟನೆ ನಡೆಯುವ ಹಿಂದಿನ ದಿನ ಕುಡಿಯೋದಕ್ಕೆ ಎಂದು ಪ್ಲಾನ್ ಮಾಡಿ ಮನೆಯಲ್ಲಿದ್ದ ವೆಂಕಟೇಶ್ ನನ್ನು ಆನಂದ್, ನಾಲ್ಕನೇ ಆರೋಪಿ ಚಿರು ಬೈಕ್ನಲ್ಲಿ ರಾಣಿಪೇಟೆ ಏರಿಯಾದಿಂದ ನೂರು ಮೀಟರ್ ಅಂತರದಲ್ಲಿನ ಸ್ಮಶಾನಕ್ಕೆ ಕರೆಸಿಕೊಂಡಿದ್ದ. ಆ ಮೇಲೆ ಒಬ್ಬೊಬ್ಬರಾಗಿ ಆರೋಪಿಗಳು ಸ್ಥಳಕ್ಕೆ ಬಂದಿದ್ರು. ಅಲ್ಲಿ ನೀಲವೇಣಿಯ ಸೂಚನೆಯಂತೆ ವೆಂಕಟೇಶನನ್ನು ಪ್ಲಾನ್ ಮಾಡಿ, ಪಕ್ಕಾ ಸ್ಕೆಚ್ ಹಾಕಿ, 11 ಆರೋಪಿಗಳು ಮನಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
11 ಆರೋಪಿಗಳು ಅಂದರ್
ಆನಂದ್, ವೆಂಕಟೇಶ್ನನ್ನ ಎಣ್ಣೆ ಪಾರ್ಟಿ ಮಾಡಲು ಕರೆಸಿಕೊಂಡು ಆನಂದ್ ಮತ್ತು ಗ್ಯಾಂಗ್ ಕೊಂದು ಹಾಕಿದ್ದು, ತನಿಖೆ ವೇಳೆ ನೀಲವೇಣಿ ಕಳ್ಳಾಟಗಳೆಲ್ಲ ಬಯಲಾಗಿದೆ. ಅಂದು ಗಂಡನ ಶವದ ಮುಂದೆ ಅತ್ತು, ನವರಂಗಿ ಆಟ ಆಡಿದ್ದ ನೀಲವೇಣಿ ಮತ್ತು ಆನಂದ್ ಸೇರಿದಂತೆ ಒಟ್ಟು 11 ಜನ ಅರೆಸ್ಟ್ ಆಗಿದ್ದಾರೆ. A1 ಆರೋಪಿ ನೀಲವೇಣಿ, A2 ಆರೋಪಿ ಆನಂದ, ಮೊಮ್ಮದಗೌಸ್, ಶಿವಶಂಕರ ಅಲಿಯಾರ ಚಿರು, ಮಮ್ಮದ್ ಶಾಯಿದ್ ಅಲಿಯಾಸ್ ಜಂಗ್ಲಿ, ಪಾಷಾವಲಿ ಅಲಿಯಾಸ ದುದ್ದು, ಮಮ್ಮದ ಷರೀಪ್, ಮೊಮ್ಮದ್ ಆಸೀಪ್, ಮೊಮ್ಮದ ಸೋಯಲ್ ಬಂಧಿತ ಆರೋಪಿಗಳು.
ಸದ್ಯ ಘಟನೆ ನಡೆದ 24 ಗಂಟೆಗಳಲ್ಲಿ ಪ್ರಕರಣದ ಎಲ್ಲಾ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ ತನಗೇನೂ ಗೊತ್ತಿಲ್ಲ ಎನ್ನುವಂತೆ ನಟನೆ ಮಾಡಿದ್ದ ಪಾಪಿ ಪತ್ನಿಯ ಕುತಂತ್ರಕ್ಕೆ ವೆಂಕಟೇಶ್ ಬಲಿಯಾಗಿದ್ದಾನೆ. ಪತ್ನಿಯೇ ಪ್ರಿಯಕರನ ಜೊತೆ ಸಂಚು ರೂಪಿಸಿ, ಪತಿಯನ್ನ ಕೊಲೆ ಮಾಡಿಸಿರೋ ಘಟನೆ ಇಡೀ ಬಳ್ಳಾರಿಯನ್ನೇ ಬೆಚ್ಚಿ ಬೀಳಿಸಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ