ಹುಬ್ಬಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೃದ್ಧೆಯರು ಸಾವು, ಓರ್ವರಿಗೆ ಗಾಯ
ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವರೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹುಬ್ಬಳ್ಳಿ, ಏಪ್ರಿಲ್ 06: ಹುಬ್ಬಳ್ಳಿ (Hubballi) ಹೊರವಲಯದ ನೂಲ್ವಿ ಕ್ರಾಸ್ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೇ, ಓರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸುಜಾತಾ ಹಿರೇಮಠ (60), ಗಾಯತ್ರಿ ಮಾಂತನಮಠ (67), ಶಕುಂತಲಾ ಹಿರೇಮಠ (72) ಸಂಪತ್ ಕುಮಾರಿ (63) ಮೃತ ದುರ್ದೈವಿಗಳು. ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ಕಾರು ಚಾಲಕ ವಿರೇಶ್ ಹಿರೇಮಠ (65) ಎಂಬುವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ಕಾರ್ಯಕ್ರಮವೊಂದಕ್ಕೆ ಕೆಎ 25 ಎಮ್ಡಿ 1151 ನಂಬರ್ನ ಕಾರಿನಲ್ಲಿ ಹಾವೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹಾವೇರಿಯಿಂದ ಹುಬ್ಬಳ್ಳಿಯತ್ತ ಎನ್ಹೆಚ್ 4 ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದರು. ಹುಬ್ಬಳ್ಳಿಯಿಂದ ಕೇವಲ 12 ಕಿಮೀ ದೂರದಲ್ಲಿರುವ ನೂಲ್ವಿ ಕ್ರಾಸ್ನಲ್ಲಿ ಕಾರು, ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್ಗೆ ಡಿಕ್ಕಿಯಾಗಿದೆ. ಅವಘಡದಲ್ಲಿ ಕಾರಿನಲ್ಲಿದ್ದ ಮೂವರು ವೃದ್ಧ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಅಪಘಾತದಲ್ಲಿ ಗಾಯಗೊಂಡ ಸಂಪತ್ ಕುಮಾರಿ ಮತ್ತು ವಿರೇಶ್ ಹಿರೇಮಠ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಂಪತ್ ಕುಮಾರಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಿರೇಶ್ ಹಿರೇಮಠ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಾಳು ವಿರೇಶ ಹಿರೇಮಠ ಅವರು ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Sun, 6 April 25