ಬೆಂಗಳೂರು ಏರ್ಪೋಟ್ ಬಳಿ ಭೀಕರ ಅಪಘಾತ: ಸಹೋದರರಿಬ್ಬರು ಸೇರಿ ಮೂವರ ಸಾವು
ದೇವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಳ್ಳಾರಿ ಮೂಲದ ಇಬ್ಬರು ಸಹೋದರರು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಯು-ಟರ್ನ್ ತೆಗೆದುಕೊಳ್ಳುವಾಗ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ದಿನ ವಿಶ್ವನಾಥಪುರದಲ್ಲಿ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತವಾಗಿದೆ.

ದೇವನಹಳ್ಳಿ, ಜನವರಿ 31: ಕಳೆದ ವರ್ಷವಷ್ಟೇ ತಂದೆ ಅಪಘಾತದಲ್ಲಿ (accident) ಸಾವನ್ನಪಿದ್ದರು. ತಂದೆ ಸಾವಿನ ನೋವಿನಿಂದ ಹೊರ ಬರಬೇಕು ಅಂತ ಆ ಸಹೋದರರಿಬ್ಬರು ಬಳ್ಳಾರಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರು. ಜೊತೆಗೆ ಇಲ್ಲೆ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಇಂದು ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಸಹೋದರರಿಬ್ಬರು ಸಾವಿನ ಮನೆ ಸೇರಿದ್ದಾರೆ.
ಸದಾ ವಾಹನಗಳ ಸಂಚಾರದಿಂದ ಬ್ಯುಸಿಯಾಗಿರುವ ಏರ್ಪೋಟ್ ರಸ್ತೆ ಇಂದು ಸಂಪೂರ್ಣ ರಕ್ತ ಸಿಕ್ತವಾಗಿದೆ. ಕಣ್ಮುಚ್ಚಿ ತೆಗೆಯುವುದರೊಳಗಡೆ ಯೂಟರ್ನ್ ಪಡೆಯುತ್ತಿದ್ದ ಬೈಕ್ ಮೇಲೆ ಯಮಸ್ವರೂಪಿ ಟಿಪ್ಪರ್ ಲಾರಿ ಹರಿದ ಪರಿಣಾಮ, ಮಸ್ತಾನ್ ಮತ್ತು ಮೊಹಮದ್ ಅಸ್ಲಾಂ ಎಂಬ ಬಳ್ಳಾರಿ ಮೂಲದ ಇಬ್ಬರು ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಬಟನ್ ಚಾಕು ತರಿಸಿಕೊಂಡು ಶಿಫಾಳ ಹತ್ಯೆ: ತನಿಖೆಯಲ್ಲಿ ಲವ್ ಸ್ಟೋರಿ ರಿವೀಲ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮಸ್ತಾನ್ ಮತ್ತು ಮೊಹಮದ್ ಅನ್ನೂ ಇಬ್ಬರು ಸಹೋದರರು ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಯೂಟರ್ನ್ ಪಡೆಯೋಕ್ಕೆ ಮುಂದಾಗ್ತಿದ್ದಂತೆ ಎಂಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ನೋಡ ನೋಡ್ತಿದಂತೆ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಇಬ್ಬರು ಸಹೋದರರು ಕೆಳಗಡೆ ಬಿದ್ದಿದ್ದಾರೆ. ಇನ್ನೂ ಈ ವೇಳೆ ವೇಗವಾಗಿದ್ದ ಟಿಪ್ಪರ್ ಲಾರಿ ಇಬ್ಬರು ಸಹೋದರರ ಮೇಲೆ ಹರಿದಿದೆ.
ಸ್ಥಳದಲ್ಲೇ ಮಸ್ತಾನ್ ಸಾವನ್ನಪ್ಪಿದ್ದಾರೆ, ಜೊತೆಗೆ ಮೊಹಮದ್ ಮೇಲು ಟಿಪ್ಪರ್ ಹರಿದ ಪರಿಣಾಮ ಕಾಲುಗಳು ನಜ್ಜುಗುಜ್ಜಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತನು ಮೃತಪಟ್ಟಿದ್ದಾನೆ.
ಮೃತ ಮಸ್ತಾನ್ ಮತ್ತು ಮೊಹಮದ್ ಮೂಲತಃ ಬಳ್ಳಾರಿಯವರಾಗಿದ್ದು, ಕಳೆದ ವರ್ಷ ತಂದೆ ಅಪಘಾತದಲ್ಲಿ ಸಾವನ್ನಪಿದ್ದ ಕಾರಣ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದರು. ದೇವನಹಳ್ಳಿ ಬಳಿಯೇ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದರು. ಇಂದು ಕೆಲಸಕ್ಕೆ ತೆರಳಲು ಬಂದಾಗ ಅಣ್ಣ ತಮ್ಮಂದಿರ ಜೀವನದಲ್ಲಿ ವಿಧಿ ಕ್ರೂರ ಆಟವಾಡಿದೆ. ಇನ್ನೂ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ಯೂಟರ್ನ್ ಒಪನ್ ಮಾಡಿರುವ ಕಾರಣ ಪದೇ ಪದೇ ಅಪಘಾತಗಳಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಅಂತ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆ ದಾಟುತ್ತಿದ್ದ ತಾಯಿ, ಮಗುಗೆ ಲಾರಿ ಡಿಕ್ಕಿ: ತಾಯಿ ಸಾವು
ಕನ್ನಮಂಗಲ ಪಾಳ್ಯ ಬಳಿ ಅವೈಜ್ಞಾನಿಕ ಯೂಟರ್ನ್ನಿಂದ ಸಹೋದರರು ಜೀವ ಕಳೆದುಕೊಂಡರೆ, ಇತ್ತ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಬಳಿ ಹೆದ್ದಾರಿ ದಾಟುತ್ತಿದ್ದ ತಾಯಿ, ಮಗುವಿಗೆ ಲಾರಿ ಡಿಕ್ಕಿಯಾಗಿ ತಾಯಿ ಸಾವನ್ನಪಿದ್ದಾಳೆ. ವಿಶ್ವನಾಥಪುರ ಗ್ರಾಮದ ದೀಪ ನಿನ್ನೆ ಸಂಜೆ 8 ವರ್ಷದ ಮಗಳ ಜೊತೆ ರಸ್ತೆ ದಾಟಲು ಮುಂದಾಗಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿತ್ತು. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ, ಮಗುವನ್ನ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಮಗು ಅಪಾಯದಿಂದ ಪಾರಾದರೆ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
ಇದನ್ನೂ ಓದಿ: ಪಂಚಾಯ್ತಿ ಮಾಜಿ ಅಧ್ಯಕ್ಷ ಪುತ್ರನನ್ನ ಹತ್ಯೆಗೈದು ಚರಂಡಿಗೆ ಎಸೆದ ದುಷ್ಕರ್ಮಿಗಳು
ಇನ್ನೂ ತಾಯಿ ಸಾವಿಗೆ ಹೆದ್ದಾರಿ ಪ್ರಾಧಿಕಾರವೇ ಕಾರಣ ಅಂತ ಸ್ಥಳಿಯರು ಆರೋಪಿಸಿದ್ದು, ಮೃತದೇಹವನ್ನ ರಸ್ತೆಯಲ್ಲಿಟ್ಟು ಸಾವಿಗೆ ನ್ಯಾಯ ಕೊಡಿಸುವಂತೆ ಹೆದ್ದಾರಿ ಪ್ರಾಧಿಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಾರೆ ಕೋಟಿ ಕೋಟಿ ರೂ. ಖರ್ಚು ಮಾಡಿ ಹೆದ್ದಾರಿ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ಅವೈಜ್ಞಾನಿಕ ಬ್ಲಾಕ್ ಸ್ಪಾಟ್ಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.