ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐರಾವತ ಬಸ್ ಮತ್ತು ಕಾರು ಮಧ್ಯೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಬಳಿ ಈ ದುರ್ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಂಡ್ಯ, ಏಪ್ರಿಲ್ 03: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಐರಾವತ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ (accident) ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರಿನ ಜೆ.ಪಿ.ನಗರದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿಯ ಹೈವೇ ಎಕ್ಸಿಟ್ನಲ್ಲಿ ನಡೆದಿದೆ. ಸತ್ಯಾನಂದ ರಾಜೇ ಆರಸ್ (51) ಅವರ ಪತ್ನಿ ನಿಶ್ಚಿತಾ (45), ಚಂದ್ರು(62) ಅವರ ಪತ್ನಿ ಸುವೇದಿನಿ ರಾಣಿ(50) ಮೃತರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಎಕ್ಸ್ಪ್ರೆಸ್ ಹೈವೇಯಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲವಾಗಿದೆ. ಹೀಗಾಗಿ ಮತ್ತೆ ಎಕ್ಸ್ಪ್ರೆಸ್ ಹೈವೇಗೆ ಚಾಲಕ ಕಾರು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಅಪಘಾತದಲ್ಲಿ ಅರಸ್ ಕುಟುಂಬ ದುರಂತ ಅಂತ್ಯ: ಭೀಕರ ಅಪಘಾತದ ಫೋಟೋಸ್ ಇಲ್ಲಿವೆ
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ದುರ್ಘಟನೆ ಸಂಭವಿಸಿದ್ದು, ಐರಾವತ ಬಸ್ ಡಿಕ್ಕಿ ರಭಸಕ್ಕೆ ಟಾಟಾ ಪಂಚ್ ಕಾರು (KA 09, MG 4263) ಸಂಪೂರ್ಣ ನಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ
ಸೋದರಮಾವನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸತ್ಯಾನಂದರಾಜೇ ಅರಸ್ ಅವರ ಮಾವ ತೀರಿ ಹೋಗಿದ್ದರು. ಹೀಗಾಗಿ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಮೃತ ಮಾವನನ್ನ ನೋಡಲು ಹೋರಟಿದ್ದರು. ಮೃತ ಸತ್ಯಾನಂದರಾಜೇ ಅರಸ್ ಹಾಗೂ ಚಂದ್ರರಾಜೇ ಅರಸ್ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಚಂದ್ರರಾಜೇ ಅರಸ್ ಪತ್ನಿ ಸುವೇದಿನಿ ರಾಣಿ, ಸಹೋದರ ಸತ್ಯಾನಂದರಾಜೇ ಅರಸ್, ಪತ್ನಿ ನಿಶ್ಚಿತಾ ತೆರಳುತ್ತಿದ್ದರು. ಚಂದ್ರರಾಜೇ ಅರಸ್ ಕಾರು ಚಾಲನೆ ಮಾಡುತ್ತಿದ್ದರು. ಮೃತದೇಹಗಳು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಓರ್ವ ಸಾವು, ಚಾಲಕ ಪರಾರಿ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಳೆಹಳ್ಳಿ ಬಳಿ ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಘಟನೆ ಬಳಿಕ ಅಪರಿಚಿತ ವಾಹನ ಸಮೇತ ಚಾಲಕ ಪರಾರಿ ಆಗಿದ್ದಾರೆ.
ಸ್ಕೂಟಿಯಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವನ್ನು ಹೊಳಲ್ಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತನ ಗುರುತು ಪತ್ತೆ ಆಗಿಲ್ಲ. ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪಿಎಸ್ಐ ಸಚಿನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿದ್ಯುತ್ ತಂತಿ ತಗುಲಿ ಯುವಕ ಸಾವು
ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಎಂ.ಜಿ.ಸರ್ಕಲ್ ಬಳಿ ನಡೆದಿದೆ. ಆರ್.ಶ್ರೇಯಸ್(17) ಮೃತ ಯುವಕ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರ: ತೆಪ್ಪ ಮಗುಚಿ ಬಿದ್ದು ಇಬ್ಬರು ಯುವಕರು ಸಾವು, ನಾಲ್ವರು ಪ್ರಾಣಾಪಾಯದಿಂದ ಪಾರು
ಮೃತ ಆರ್.ಶ್ರೇಯಸ್ ಪುತ್ತೂರಿನ ಖಾಸಗಿ ಕಾಲೇಜ್ನಲ್ಲಿ ಪಿಯುಸಿ ಓದುತ್ತಿದ್ದ. ಮೂಲತಃ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಸೌಜನ್ಯ- ರಮೇಶ್ ದಂಪತಿಗಳ ಪುತ್ರ. ಸದ್ಯ ಜಗಳೂರು ಪೊಲೀಸ್ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:27 pm, Thu, 3 April 25