Amit Mishra: ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ; ಅಮಿತ್ ಮಿಶ್ರಾ ವಿರುದ್ಧ ಪತ್ನಿಯ ಗಂಭೀರ ಆರೋಪ
Amit Mishra's Wife Files Police Complaint: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಅಮಿತ್ ಮಿಶ್ರಾ ಅವರ ಪತ್ನಿ ಗರಿಮಾ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಮಿತ್ ಹಾಗೂ ಅವರ ಕುಟುಂಬಸ್ಥರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗರಿಮಾ ಆರೋಪಿಸಿದ್ದಾರೆ. ಅಲ್ಲದೆ, ಅಮಿತ್ ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಗರಿಮಾ ಮಾಡಿದ್ದಾರೆ. ಆದರೆ ಅಮಿತ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಗರಿಮಾ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಉಂಟಾಗಿದೆ. ಅವರ ಪತ್ನಿ ಗರಿಮಾ ಮಿಶ್ರಾ, ಅಮಿತ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಕುರಿತು ಪೊಲೀಸ್ ಆಯುಕ್ತರ ಬಳಿ ದೂರು ನೀಡಿರುವುದಾಗಿ ವರದಿಯಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ತನ್ನ ಪತಿ ಮತ್ತು ಅತ್ತೆ ಮಾವ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಪತಿ ಅಮಿತ್ ಮತ್ತು ಅವರ ಕುಟುಂಬದವರು ಹೋಂಡಾ ಸಿಟಿ ಕಾರು ಮತ್ತು 10 ಲಕ್ಷ ರೂಪಾಯಿಗಾಗಿ ಕಿರುಕುಳ ನೀಡುತ್ತಿದ್ದಾರೆ. ಇದಲ್ಲದೆ, ಅಮಿತ್ ಮಿಶ್ರಾ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಅಮಿತ್ ವಿರುದ್ಧ ಮಡದಿಯ ಆರೋಪ
ಅಮಿತ್ ಮಿಶ್ರಾ ಮತ್ತು ಗರಿಮಾ ಏಪ್ರಿಲ್ 26, 2021 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅಮಿತ್ ಪ್ರಸ್ತುತ ಕ್ರಿಕೆಟ್‌ನಿಂದ ದೂರವಿದ್ದು ಕಾನ್ಪುರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಗರಿಮಾ ಮಿಶ್ರಾ ನೀಡಿರುವ ಹೇಳಿಕೆ ಪ್ರಕಾರ, ‘ಅಮಿತ್ ಮಿಶ್ರಾ ತನ್ನನ್ನು ಹಲವು ಬಾರಿ ಹೊಡೆದಿದ್ದಾರೆ. ಅಮಿತ್ ಇತರ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ನಾನು ನಾಲ್ಕು ತಿಂಗಳ ಹಿಂದೆ ವಿರೋಧಿಸಿದೆ. ಆಗ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ಹೀಗಾಗಿ ನಾನು ಪ್ರಸ್ತುತ ತಮ್ಮ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಆರೋಪಿಸಿದ್ದಾರೆ.
ಪತ್ನಿ ವಿರುದ್ಧವೇ ಹಲ್ಲೆ ಆರೋಪ ಹೊರಿಸಿದ ಅಮಿತ್
ಆದರೆ ಮಡದಿಯ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಅಮಿತ್ ಮಿಶ್ರಾ, ಮತ್ತೊಂದೆಡೆ, ತಮ್ಮ ಪತ್ನಿಯೇ ಕಿರುಕುಳ ನೀಡುತ್ತಿದ್ದಾರೆ. ನನ್ನ ಪತ್ನಿ ಒಮ್ಮೆ ನನ್ನ ಮೇಲೆ ಬ್ಯಾಂಕ್ ಕಚೇರಿಯ ಹೊರಗೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಇಬ್ಬರ ಆರೋಪಗಳಲ್ಲಿ ಯಾರದ್ದು ನಿಜ ಎಂಬುದು ಇನ್ನಷ್ಟೇ ಹೊರಬರಬೇಕಿದೆ.
ಅಮಿತ್ ಮಿಶ್ರಾ ವೃತ್ತಿಜೀವನ
ಅಮಿತ್ ಮಿಶ್ರಾ 2003 ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2008 ರಲ್ಲಿ ಟೆಸ್ಟ್ ಮಾದರಿಗೆ ಪಾದಾರ್ಪಣೆ ಮಾಡಿದ ಅಮಿತ್ 2010 ರಲ್ಲಿ ಟಿ20 ಮಾದರಿಯಲ್ಲಿ ಆಡುವ ಅವಕಾಶ ಸಿಕ್ಕಿತು. ಭಾರತ ಪರ 22 ಟೆಸ್ಟ್ ಪಂದ್ಯಗಳನ್ನಾಡಿರುವ ಅಮಿತ್ 76 ವಿಕೆಟ್‌ಗಳು, 36 ಏಕದಿನ ಪಂದ್ಯಗಳಲ್ಲಿ 64 ವಿಕೆಟ್‌ಗಳು ಮತ್ತು 10 ಟಿ20 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, ಅವರು 162 ಐಪಿಎಲ್ ಪಂದ್ಯಗಳನ್ನು ಸಹ ಆಡಿದ್ದು, ಇದರಲ್ಲಿ ಅವರು 174 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sun, 20 April 25