IPL 2025: ತವರಿನ ಸೋಲಿಗೆ ತವರಿನಲ್ಲೇ ಉತ್ತರ; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
RCB's Revenge: ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದ ಆರ್‌ಸಿಬಿ, ಇದೀಗ ಮುಲ್ಲನ್‌ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಗಳಿಸಿದರೆ, ಆರ್‌ಸಿಬಿ 7 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು

ಕೇವಲ 2 ದಿನಗಳ ಹಿಂದೆ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋತಿದ್ದ ಆರ್‌ಸಿಬಿ (PBKS vs RCB), ಇದೀಗ ಪಂಜಾಬ್ ತವರಿನಲ್ಲಿ ಅವರನ್ನೇ ಮಕಾಡೆ ಮಲಗಿಸಿದೆ. ಮುಲ್ಲನ್‌ಪುರದ ಮಹಾರಾಜ ಯದ್ವಿಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ (IPL 2025) 37ನೇ ಪಂದ್ಯದಲ್ಲಿ ರಜತ್ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಟೂರ್ನಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತವರಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ತವರಿನಿಂದ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ತವರಿನಿಂದ ಹೊರಗಿನ ಪಂದ್ಯಗಳಲ್ಲಿ 100 ಪ್ರತಿಶತ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಿದೆ.
ಆರ್‌ಸಿಬಿ ಬೌಲರ್ಗಳ ಅಮೋಘ ಬೌಲಿಂಗ್
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಆರ್‌ಸಿಬಿ ಬೌಲರ್ಗಳು ಆರಂಭದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟರೂ ಆ ಬಳಿಕ ಕಡಿಮೆ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ ಅತ್ಯಧಿಕ 33 ರನ್ ಗಳಿಸಿದರೆ, ಕೊನೆಯಲ್ಲಿ ಹೋರಾಡಿದ ಶಶಾಂಕ್ ಸಿಂಗ್ ಅಜೇಯ 31 ರನ್ ಗಳಿಸಿ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು. ಜೋಶ್ ಇಂಗ್ಲಿಸ್ ಕೂಡ 29 ರನ್ ಮತ್ತು ಮಾರ್ಕೊ ಯಾನ್ಸೆನ್ 25 ರನ್‌ಗಳ ಕಾಣಿಕೆ ನೀಡಿದರು.
ಮತ್ತೊಂದೆಡೆ,ಆರ್‌ಸಿಬಿ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಕೃನಾಲ್ ಪಾಂಡ್ಯ ತಮ್ಮ 4 ಓವರ್‌ಗಳ ಖೋಟಾದಲ್ಲಿ ಕೇವಲ 25 ರನ್ ನೀಡಿ 2 ವಿಕೆಟ್ ಪಡೆದರು. ಸುಯಶ್ ಶರ್ಮಾ ಕೂಡ 4 ಓವರ್‌ಗಳಲ್ಲಿ 26 ರನ್‌ಗಳಿಗೆ 2 ವಿಕೆಟ್ ಪಡೆದರು. ಈ ಇಬ್ಬರ ಹೊರತಾಗಿ, ರೊಮಾರಿಯೊ ಶೆಫರ್ಡ್ 1 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯದಿದ್ದರೂ ರನ್‌ಗಳಿಗೆ ಕಡಿವಾಣ ಹಾಕಿದರು.
IPL 2025: ಆರ್‌ಸಿಬಿ ಬೌಲರ್ಗಳ ಪರಾಕ್ರಮ; ಒಮ್ಮೆಯೂ 50 ರನ್ ಗಡಿ ದಾಟದ 8 ಎದುರಾಳಿ ತಂಡಗಳು
ವಿರಾಟ್-ಪಡಿಕ್ಕಲ್ ಅರ್ಧಶತಕ
158 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ 1 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಆದರೆ ಇದಾದ ನಂತರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ನಡುವೆ ಪಂದ್ಯ ಗೆಲ್ಲುವ ಪಾಲುದಾರಿಕೆ ಕಂಡುಬಂದಿತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 174.28 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 61 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 73 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ 10 ಅಂಕ ಸಂಪಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Sun, 20 April 25