ತಮ್ಮ ಮೇಲೆ ಗುಂಡಿನ ದಾಳಿ ಮಾಡಿದವರ ಹೆಸರು ಬಿಚ್ಚಿಟ್ಟ ರಿಕ್ಕಿ ರೈ
Ricky Rai: ಬೆಂಗಳೂರು ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಲಾಗಿದೆ. ಆದರೆ ರಿಕ್ಕಿ ರೈ ಜಸ್ಟ್ ಮಿಸ್ ಆಗಿದ್ದಾರೆ. ಈ ಫೈರಿಂಗ್ನಲ್ಲಿ ರಿಕ್ಕಿ ರೈ ಅವರು ಗಾಯಗೊಂಡಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ರಿಕ್ಕಿ ರೈ ಅವರ ಹೇಳಿಕೆ ದಾಖಲಸಿಕೊಂಡಿದ್ದು, ಸ್ಫೋಟಕ ವಿಚಾರಗಳನ್ನು ತಿಳಿಸಿದ್ದಾರೆ.

ರಾಮನಗರ, ಏಪ್ರಿಲ್ 20: ಬೆಂಗಳೂರು (Bengaluru) ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಆದರೆ ರಿಕ್ಕಿ ರೈ (Ricky Rai) ಜಸ್ಟ್ ಮಿಸ್ ಆಗಿದ್ದು, ಕೊಲೆ ಯತ್ನದ ಹಿಂದೆ ಸಾಕಷ್ಟು ಸಂಶಯ ಹುಟ್ಟಿಕೊಂಡಿದೆ. ಫೈರಿಂಗ್ನಲ್ಲಿ ಗಾಯಗೊಂಡಿರುವ ರಿಕ್ಕಿ ರೈ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮಣಿಪಾಲ್ ಆಸ್ಪತ್ರೆಗೆ ತೆರೆಳಿ ರಿಕ್ಕಿ ರೈ ಹೇಳಿಕೆ ಪಡೆದಿದ್ದು, ಹಲವು ವಿಚಾರಗಳು ಬಹಿರಂಗಗೊಂಡಿವೆ.
ಆಸ್ತಿ ವಿಚಾರವಾಗಿ ಗುಂಡಿನ ದಾಳಿ ನಡೆದಿದೆ ಎಂದು ರಿಕ್ಕಿ ರೈ ಹೇಳಿದ್ದಾರೆ. ತಮ್ಮ ಮೇಲೆ ನಡೆದ ಗುಂಡಿನ ದಾಳಿ ಹಿಂದೆ ರಾಕೇಶ್ ಮಲ್ಲಿ, ಅನುರಾಧಾ, ನಿತೀಶ್ ಶೆಟ್ಟಿ, ವೈದ್ಯನಾಥನ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ನಾನು ರಷ್ಯಾದಲ್ಲಿದ್ದೆ, ಜಮೀನು ವಿವಾದ ಸಂಬಂಧ ಕೋರ್ಟ್‌ನಲ್ಲಿ ಕೇಸ್ ಇತ್ತು. ಹೀಗಾಗಿ, ನಾನು ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿಗೆ ಬಂದಾಗ ಸದಾಶಿವನಗರ ಮತ್ತು ಬಿಡದಿಯಲ್ಲಿ ಇರುತ್ತೇನೆ. ಬಿಡದಿಯಿಂದ ಸದಾಶಿವನಗರದ ಮನೆಗೆ ಹೋಗುವಾಗ ದಾಳಿ ನಡೆದಿದೆ. ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು, ಕಾರು ಚಾಲಕ ಆಸ್ಪತ್ರೆಗೆ ಸೇರಿಸಿದರು” ಎಂದು ರಿಕ್ಕಿ ರೈ ಹೇಳಿದ್ದಾರೆ.
ಘಟನೆ ಸಂಬಂಧ ರಿಕ್ಕಿ ರೈ ಅವರ ಕಾರು ಚಾಲಕ ಬಸವರಾಜು ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ರಾಕೇಶ್ ಮಲ್ಲಿ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಇನ್ನು ಪ್ರಕರಣದ ಎರಡನೇ ಆರೋಪಿ ಅನುರಾಧಾ ವಿದೇಶಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಮೂಗು, ಕೈಗೆ ತಾಕಿದ ಗುಂಡು
ರಿಕ್ಕಿ ಆರೋಗ್ಯದಲ್ಲಿ ಸ್ಥಿರ
70mm ಬುಲೆಟ್ನ ಶಾಟ್ಗನ್ ಬಳಸಿ ಫೈರಿಂಗ್ ಮಾಡಲಾಗಿದೆ. ಶಾರ್ಪ್ ಶೂಟರ್ ಗನ್ನಿಂದ ಸಿಡಿದ ಬುಲೆಟ್ ಡ್ರೈವರ್ ಸೀಟ್ಗೆ ತಗುಲಿದೆ. ಸೀಟ್ಗೆ ಬಡಿದ ಗುಂಡಿನಿಂದ ಹಿಂಬದಿ ಕೂತಿದ್ದ ರಿಕ್ಕಿಗೂ ಗಾಯವಾಗಿದೆ. ಬುಲೆಟ್ ರಿಕ್ಕಿ ಕೈ ಮತ್ತು ಮೂಗಿಗೂ ತಾಕಿದೆ. ಗಾಯದಿಂದ ನರಳಾಡಿದ ರಿಕ್ಕಿ ರೈನ ಮೊದಲು ಬಿಡದಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಿಗಿ ಭದ್ರತೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ರಿಕ್ಕಿಗೆ 2 ಶಸ್ತ್ರ ಚಿಕಿತ್ಸೆ ಮಾಡಿ ರಿಕ್ಕಿ ಕೈಯಲ್ಲಿದ್ದ ಬುಲೆಟ್ನ ತೆಗೆದಿದ್ದಾರೆ.
ಮೂಗಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರೋ ರಿಕ್ಕಿ ರೈ ಆರೋಗ್ಯ ಸ್ಥಿರ ಆಗಿದ್ದು, ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಇನ್ನು 24 ಗಂಟೆಗೂ ಹೆಚ್ಚು ಕಾಲ ಯಾರೂ ಮಾತನಾಡಿಸಬಾರದು ಎಂದು ವೈದ್ಯರು ಸೂಚನೆ ಕೊಟ್ಟಿದ್ರು. ಹೀಗಾಗಿ ರಿಕ್ಕಿ ರೈ ನಿಂದ ಯಾವುದೇ ಹೇಳಿಕೆ ದಾಖಲು ಮಾಡಿಕೊಳ್ಳೋಕೆ ಪೊಲೀಸರಿಗೆ ಆಗಿರಲಿಲ್ಲ. ಇದೀಗ ಇವತ್ತು, ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sun, 20 April 25